ಪರಿಣಾಮಕಾರಿ ನಿಯಂತ್ರಣಕ್ಕಾಗಿ ಡೆಂಗ್ಯೂ ಪರೀಕ್ಷೆಗಳನ್ನು ತೀವ್ರಗೊಳಿಸಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ: ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ವ್ಯಾಪಕವಾಗಿ  ಹರಡುತ್ತಿರುವ ಡೆಂಗ್ಯೂವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಡೆಂಗ್ಯೂ ಪರೀಕ್ಷೆಯನ್ನು ತೀವ್ರಗೊಳಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಡೆಂಗ್ಯೂ ನಿಯಂತ್ರಣ ಕುರಿತು ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡೆಂಗ್ಯೂ ನಿರ್ಮೂಲನೆಗಾಗಿ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಡೆಂಗ್ಯೂ ಬೆಳವಣಿಗೆಗೆ ಕಾರಣವಾಗುವ ಲಾರ್ವ ಶುದ್ದ ನೀರಿನಲ್ಲಿ ಉತ್ಪತ್ತಿಯಾಗುತ್ತಿದ್ದು, ಇದನ್ನು ತಡೆಯಲು ಪ್ರತಿ ಮೂರು ದಿನಕ್ಕೊಮ್ಮೆ ಶೇಖರಣೆಯಾಗಿರುವ ಕುಡಿಯುವ ನೀರನ್ನು ಬದಲಾಯಿಸಬೇಕು. ಡೆಂಗ್ಯೂ ಬಗ್ಗೆ ಅರಿವು ಮೂಡಿಸಲು ಪ್ರತಿ ಶುಕ್ರವಾರ ಅರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಆಯಾ ಭಾಗದ ಎಲ್ಲಾ ಮನೆಮನೆಗಳಿಗೂ ಭೇಟಿ ನೀಡಿ ಲಾರ್ವ ಸಮೀಕ್ಷೆಯನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಭಾಗದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಡೆಂಗ್ಯೂನಿಂದ ಯಾವುದೇ ಜೀವಹಾನಿ ಆಗದಂತೆ ಆರೋಗ್ಯಾಧಿಕಾರಿಗಳು ಎಚ್ಚರ ವಹಿಸಬೇಕು. ಸಣ್ಣ ಜ್ವರ ಬಂದರೂ ಸಹ ಹತ್ತಿರದ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬಳಿಕ ಅಗತ್ಯ ಚಿಕಿತ್ಸೆ ಪಡೆಯಬೇಕು. ಪ್ರತಿ ಶುಕ್ರವಾರ ಎಲ್ಲಾ ವಾರ್ಡ್‍ಗಳಿಗೆ, ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ರಕ್ತದ ಮಾದರಿಗಳನ್ನು ಸಂಗ್ರಹಿಸಬೇಕು. ಡೆಂಗ್ಯೂ ನಿಯಂತ್ರಣದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. 

ಡೆಂಗ್ಯೂ ಹೆಚ್ಚಾಗಿ ವೃದ್ಧರು, ಮಕ್ಕಳನ್ನೆ ಗುರಿಯಾಗಿಸಿಕೊಂಡಿದ್ದು, ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಯಸ್ಕರಿಗೆ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿದೆ. ಡೆಂಗ್ಯೂ ರೋಗವನ್ನು  ಪರಿಣಾಮಕಾರಿ ತಡೆಯಲು ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು. ಡೆಂಗ್ಯೂ ನಿಯಂತ್ರಣ ಕುರಿತು ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು ಆಯಾ ಭಾಗದ ಮನೆಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಪ್ರತಿವಾರ ಸಭೆ ನಡೆಸಿ ಡೆಂಗ್ಯೂ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು. ಡೆಂಗ್ಯೂ ನಿಂದ ಯಾವುದೇ ಜೀವಹಾನಿಯಾದರೂ ಸಂಬಂಧಪಟ್ಟ ಅಧಿಕಾರಿಗಳು ನೇರ ಹೊಣೆಯಾಗಲಿದ್ದಾರೆ ಎಂದು ತಿಳಿಸಿದರು.

ಮನೆಯ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ತೆರವುಗೊಳಿಸಬೇಕು. ಜನರು ಮೈತುಂಬ ಬಟ್ಟೆ ಧರಿಸಬೇಕು. ಸೊಳ್ಳೆಪರದೆ ಬಳಸಬೇಕು. ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆಗಳ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳು ಸ್ವಚ್ಚತೆ ಕಾಪಾಡಬೇಕು. ವಿದ್ಯಾರ್ಥಿನಿಲಯಗಳಲ್ಲಿ ಹೆಚ್ಚುವರಿ ಸೊಳ್ಳೆ ಪರದೆಗಳಿದ್ದರೆ ಅಂಗನವಾಡಿ ಹಾಗೂ ಕೂಸಿನಮನೆಗಳಿಗೆ ನೀಡಬೇಕು. ಜಿಲ್ಲೆಯ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳು, ಜಿಲ್ಲಾಮಟ್ಟದ ಅಧಿಕಾರಿಗಳು  ಮುಂದಿನ ಒಂದೆರಡು ತಿಂಗಳ ಕಾಲ ಮೂಡಿಸಲು ಡೆಂಗ್ಯೂ ಬಗ್ಗೆ ಜನರಿಗೆ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜೇಶ್‍ಕುಮಾರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *