ಮೈಸೂರು: ನಾವು ಬೆಳೆದು ದೊಡ್ಡವರಾಗಿ ದುಡಿಯುವ ಹಂತಕ್ಕೆ ಬಂದಾಗ ನಮ್ಮನ್ನು ಸಾಕಿ ಸಲಹಿದ ಪೋಷಕರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅವರನ್ನು ನೋಡಿಕೊಳ್ಳುವಂಥ ಮನಸ್ಥಿತಿ ನಮ್ಮದಾಗಬೇಕು ಎಂದು ಪದ್ಮಶ್ರೀ ಪುರಸ್ಕೃತರಾದ ಉಮ್ಮತ್ತಾಟ್ ಹಿರಿಯ ಕಲಾವಿದೆ ಕೊಡಗಿನ ರಾಣಿ ಮಾಚಯ್ಯ ಅವರು ಸಲಹೆ ನೀಡಿದರು.
ಅವರು ಗುರುವಾರ ಮೈಸೂರಿನ ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ – 2024 ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಲ್ಲಾ ಹೆಣ್ಣುಮಕ್ಕಳ ಬಾಳಿನಲ್ಲೂ ಅತ್ತೆ ಮಾವ ಎಂಬ ಸಂಬಂಧಗಳು ಬರುತ್ತವೆ. ಅವರಿಗೆ ನೀವು ಮೃಷ್ಟಾನ್ನ ನೀಡಲಾಗದಿದ್ದರೂ ಗಂಜಿಯನ್ನಾದರೂ ನೀಡಿ ಕಾಪಾಡಿ. ಆದರೆ, ಬೀದಿಗೆ ಬಿಡಬೇಡಿ ಎಂದು ಕಿವಿಮಾತು ಹೇಳಿದರು.
ನೆರೆಹೊರೆಯವರ ಕಷ್ಟ ಸುಖಗಳಿಗೆ ಮಿಡಿಯುವ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಿ. ದಾರಿಯಲ್ಲಿ ಸಾಗುವಾಗ ಸಂಭವಿಸುವ ಅತಾಚುರ್ಯಗಳಿಂದ ಬಳಲುವರಿಗೆ ಬೆಂಗಾವಲಾಗಿ ನಿಲ್ಲಿ ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ಮನೆಯೊಳಕ್ಕೆ ಸೀಮಿತವಾಗಿದ್ದ ಮಹಿಳೆ ಇಂದು ಸಮಾಜದ ಎಲ್ಲಾ ಸ್ತರಗಳಲ್ಲೂ ಗುರುತಿಸಿಕೊಂಡಿದ್ದಾಳೆ. ಹೆಣ್ಣಿನ ಬೆಳವಣಿಗೆಗೆ ನಮ್ಮ ದೇಶದಲ್ಲೂ ಅಪಾರವಾದ ಅವಕಾಶಗಳಿವೆ. ವಿದ್ಯಾರ್ಥಿಗಳಾದ ನೀವು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಿಮ್ಮ ಹಿರಿಯರಿಗೆ ಹೆಸರು ತನ್ನಿ. ಯುದ್ಧ ರಂಗದಲ್ಲಿ ಯೋಧರಾಗಿಯೂ ಪೈಲೆಟ್ ಗಳಾಗಿಯೂ ವನಿತೆಯರು ಗುರುತಿಸಿಕೊಂಡಿದ್ದಾರೆ ಎಂದು ಗಮನ ಸೆಳೆದರು.
ಎಲ್ಲರ ಜೀವನದ ಮೊದಲ ಗುರು ಯಾರು? ಎಂಬ ಪ್ರಶ್ನೆಗೆ ವಿದ್ಯಾರ್ಥಿನಿಯರ ತಾಯಿ ಎಂಬ ಉತ್ತರ ಬಂದಾಗ, ಅಂತಹ ತಾಯಿಯನ್ನು ಕಡೆಗಾಲದಲ್ಲಿ ಕಡೆಗಣಿಸಿದಿರಿ ಎಂದು ರಾಣಿ ಮಾಚಯ್ಯನವರು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚೆನ್ನೈನ ಹವಾಮಾನ ಪತ್ರಿಕೋದ್ಯಮಿ ಹಾಗೂ ಟಿಇಡಿಎಕ್ಸ್ ಭಾಷಣಗಾರ್ತಿ ಸ್ಮಿತಾ ಟಿ.ಕೆ. ಅವರು ಮಾತನಾಡಿ, ಹೆಣ್ಣು ಮಕ್ಕಳು ಎಲ್ಲಾ ಫಲಿತಾಂಶಗಳಲ್ಲೂ ಮೊದಲಿರುತ್ತಾರೆ. ದುಡಿಯುವ ವೇಳೆ ಸಮಾಜಕ್ಕೆ ನೆರವಾಗುವ ಸಂದರ್ಭಗಳಲ್ಲಿ ಅವರು ತಮ್ಮ ಹಿಂಜರಿಕೆ ಸ್ವಭಾವವನ್ನು ಬಿಡಬೇಕು ಎಂದು ಹೇಳಿದರಲ್ಲದೆ, ತಾವು ತಮಿಳುನಾಡಿನ ಹಾಡಿಗಳಿಗೆ ಭೇಟಿ ನೀಡಿ ಅವರೊಂದಿಗೆ ಬೆರೆತು ಅಲ್ಲಿನವರ ಜೀವನವನ್ನು ಅರಿತಿದ್ದಾಗಿ ವಿವರಿಸಿದರು.
ಕಾಲೇಜಿನ ಕಾರ್ಯದರ್ಶಿಗಳಾದ ಸೋನಿಯಾ ಉಮಾಪತಿ ರಾಜು ಅವರು ಮಾತನಾಡಿ, ಕಲಿತವರೆಲ್ಲರೂ ಪಟ್ಟಣಗಳತ್ತ ಮುಖ ಮಾಡುವುದು ಇಂದಿನ ವಾಡಿಕೆಯಾಗಿಬಿಟ್ಟಿದೆ. ಆದರೆ, ತಮಿಳುನಾಡಿನ ಹಾಡಿ ಒಂದರ ಹೆಣ್ಣುಮಗಳು ತಾನು ನರ್ಸಿಂಗ್ ಕಲಿತು ಬಳಿಕ ತನ್ನ ಹಾಡಿ ಜನಗಳ ಅಭಿವೃದ್ಧಿಗಾಗಿ ಅಲ್ಲಿಯೇ ಸೇವೆ ಸಲ್ಲಿಸಲು ಹಿಂದಿರುಗಿದನ್ನು ಸ್ಮರಿಸಿದರು.
ಕಾಲೇಜಿನ ಅಧ್ಯಕ್ಷರಾದ ಜಯಚಂದ್ರ ರಾಜು ಪಿ. ಅವರು ಅಧ್ಯಕ್ಷತೆ ವಸಿ ಮಾತನಾಡಿದರು.
ಬಳಿಕ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಗೌತಮ್ ರಾಜು, ಪ್ರಾಂಶುಪಾಲರಾದ ಮಹೇಶ ಎಂ.ಬಿ. ಸೇರಿದಂತೆ ಬೋಧಕ ಬೋಧಕೇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.