ಜು. 20ರಂದು ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ

ಚಾಮರಾಜನಗರ: ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವವು ಜುಲೈ 20ರಂದು ಚಾಮರಾಜನಗರ ಪಟ್ಟಣದಲ್ಲಿ ಜರುಗಲಿದ್ದು, ಈ ಸಂಬಂಧ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಶ್ರೀ ಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವದ ಜಾತ್ರಾ ಸಂಬಂಧ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಗರದ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವವು ಆಷಾಡ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ದೇವಸ್ಥಾನವಾಗಿದ್ದು, ಜಾತ್ರಾ ಸಂಬಂಧ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು, ಜುಲೈ 24ರವರೆಗೂ ಮುಂದುವರೆಯಲಿವೆ. ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಮಹಾರಥೋತ್ಸವಕ್ಕೆ ಹೆಚ್ಚಿನ ಜನರು ಆಗಮಿಸುವುದರಿಂದ ಜಾತ್ರಾ ಸಿದ್ದತೆಗಳು ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ತಿಳಿಸಿದರು.   

ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು, ಉತ್ತಮ ಶೌಚಾಲಯ ವ್ಯವಸ್ಥೆ, ಸ್ವಚ್ಚತೆ ಸೇರಿದಂತೆ ಅವಶ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಭಕ್ತಾಧಿಗಳ ಹಿತದೃಷ್ಠಿಯಿಂದ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಟ್ಯಾಂಕರ್ ಹಾಗೂ ಕಾನ್ ಗಳ ಮೂಲಕ ಸರಬರಾಜು ಮಾಡುವ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ಜಾತ್ರಾ ಸಂಬಂಧ ಯಾವುದೇ ಲೋಪಗಳಿಗೂ ಅವಕಾಶವಾಗದಂತೆ ಎಚ್ಚರ ವಹಿಸುವಂತೆ ನಿರ್ದೇಶನ ನೀಡಿದರು.

ಮಹಾರಥೋತ್ಸವ ಸಂಬಂಧ ರಥ ಚಲಿಸುವ ಮಾರ್ಗದಲ್ಲಿ ರಥದ ಸುಗಮ ಸಂಚಾರಕ್ಕಾಗಿ ರಸ್ತೆ ಹಾಗೂ ಸುತ್ತಲಿನ ರಸ್ತೆ ದುರಸ್ಥಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ರಥ ಹಾದಿಯಲ್ಲಿ ಸಮರ್ಪಕವಾಗಿ ಮರಳು ಹಾಕಬೇಕು. ರಥೋತ್ಸವ ಮುಗಿದ ಬಳಿಕ ಮರಳನ್ನು ತೆರವುಗೊಳಿಸಬೇಕು. ರಥ ದಾರಿಯಲ್ಲಿ ಕುಡಿಯುವ ನೀರು, ಪ್ರಸಾದ ವಿನಿಯೋಗ ಮಾಡುವ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ಕಸದ ಬುಟ್ಟಿಗಳನ್ನಿಟ್ಟು ಸೂಕ್ತ ಕಸ ವಿಲೇವಾರಿ ಮಾಡಿ ಸ್ವಚ್ಚತೆ ಕಾಪಾಡಬೇಕು. ಅಲ್ಲದೆ ರಥ ಸಾಗುವ ದಾರಿಯಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ (ಹೈಟೆಂಕ್ಷನ್ ವೈರ್) ಹಾಗೂ ಕೇಬಲ್ ವೈರ್‍ಗಳನ್ನು ತೆರವುಗೊಳಿಸಬೇಕು. ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಮುಗಿಯುವವರೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. 

ಶಿಷ್ಟಾಚಾರ ಪ್ರಕಾರ ಆಹ್ವಾನಪತ್ರಿಕೆಗಳನ್ನು ಮುದ್ರಿಸಿ ಸಂಬಂಧಪಟ್ಟ ಎಲ್ಲಾ ಗಣ್ಯರಿಗೂ ತಲುಪಿಸಬೇಕು. ಜಾತ್ರೆಗೆ ಹೆಚ್ಚಿನ ಭಕ್ತಾಧಿಗಳು ಆಗಮಿಸುವುದರಿಂದ ಸೂಕ್ತ ಬಂದೋಬಸ್ತ್ ಹಾಗೂ ಸಂಚಾರದಟ್ಟಣೆ ನಿಯಂತ್ರಣ ಮತ್ತು ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ದೇವಾಲಯದ ರಥವು ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಜಾತ್ರಾ ಸಂದರ್ಭದಲ್ಲಿ ಯಾವುದೇ ಅಗ್ನಿ ಅವಘಟಗಳು ನಡೆಯದಂತೆ ಎಚ್ಚರ ವಹಿಸಬೇಕು. ಈ ಸಂಬಂಧ ಎಲ್ಲಾ ಅಧಿಕಾರಿಗಳು ತಾಲೂಕು ತಹಶೀಲ್ದಾರ್ ಜೊತೆ ಚರ್ಚಿಸಿ ಸಮನ್ವಯ ಸಾಧಿಸಿ ಮಹಾರಥೋತ್ಸವದ ಯಶಸ್ವಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ.ಟಿ. ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಗಿರಿಜ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಮೇಶ್, ಇತರೆ ಅಧಿಕಾರಿಗಳು, ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *