ಸ್ಥಳೀಯ ಆಡಳಿತ ಸಮಸ್ಯೆಗಳನ್ನು ಪರಿಹರಿಸಲು ಕೆ-ಜಿಐಎಸ್ 2.0 ವ್ಯವಸ್ಥೆ ಸಹಕಾರಿ : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಭೌಗೋಳಿಕ ದತ್ತಾಂಶ ಸಂಗ್ರಹಣೆ ಮೂಲಕ ಸ್ಥಳೀಯ ಆಡಳಿತ ಸಮಸ್ಯೆಗಳನ್ನು ಕೇಂದ್ರಿಕರಿಸಿ ಪರಿಹರಿಸಲು ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ (ಕೆ-ಜಿಐಎಸ್ 2.0) ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

 ನಗರದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಸಿಬ್ಬಂದಿ ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸ್ಥಳೀಯ ಆಡಳಿತಕ್ಕಾಗಿ ಜಿ.ಐ.ಎಸ್ ಆಧಾರಿತ ಮಾಹಿತಿ ತಲುಪಿಸುವ ಕೆ-ಜಿಐಎಸ್ 2.0 ಅನುಷ್ಠಾನ ಕುರಿತ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

 ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳ ಸ್ಥಳೀಯ ಸಮಸ್ಯೆಗಳನ್ನು ಜಿಐಎಸ್ ಮೂಲಕ ತಾಂತ್ರಿಕವಾಗಿ ಪರಿಹರಿಸಲು ಜಿಲ್ಲಾಮಟ್ಟದ ವಿವಿಧ ಇಲಾಖೆಗಳಲ್ಲಿ ಜಿಐಎಸ್ ತಂತ್ರಾಂಶ ಮತ್ತು ದತ್ತಾಂಶಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಭೌಗೋಳಿಕವಾಗಿ ಸಾಕಷ್ಟು ಕ್ಷೇತ್ರವಿಸ್ತಾರ ಹೊಂದಿರುವ ಶಿಕ್ಷಣ, ಆರೋಗ್ಯ, ಅರಣ್ಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪಾರದರ್ಶಕ ಆಡಳಿತ, ಸಮಗ್ರ ದತ್ತಾಂಶಗಳ ಸಂಗ್ರಹಣೆ, ಕಾರ್ಯಕ್ಷಮತೆ ಹೆಚ್ಚಿಸಲು ಕೆ-ಜಿಐಎಸ್ ಸುಧಾರಿತ ತಂತ್ರಜ್ಞಾನ ನೆರವಾಗಲಿದೆ. ತಂತ್ರಜ್ಞಾನ ಅಳವಡಿಕೆಗೆ ಅಧಿಕಾರಿಗಳು ಮುಂದಾಗಬೇಕು ಎಂದರು.

 ಎಲ್ಲಾ ಇಲಾಖೆಗಳು ಪ್ರತಿದಿನದ ಕಾರ್ಯವೈಖರಿಗಳನ್ನು ದಾಖಲಿಕರಣದೊಂದಿಗೆ ಜಿಯೋಟ್ಯಾಗ್ ಮಾಡಬೇಕು. ಆರೋಗ್ಯ ಕೇಂದ್ರಗಳು, ಹಾಸ್ಟಲ್, ಅಂಗನವಾಡಿಗಳಲ್ಲಿ ಯಾರು, ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಕುಳಿತಲ್ಲಿಯೇ ವೀಕ್ಷಿಸಬಹುದಾಗಿದೆ. ಜಿಲ್ಲೆಯಲ್ಲಿ ನೋಟಿಫೈ ಅರಣ್ಯ ಪ್ರದೇಶ ವಿಸ್ತಾರ ಎಷ್ಟಿದೆ ಎಂಬುದನ್ನು ತಾಂತ್ರಿಕವಾಗಿ ಅರಿಯಲು ಕೆ-ಜಿಐಎಸ್ 2.0 ತಂತ್ರಜ್ಞಾನ ಮಾಹಿತಿ ಒದಗಿಸಲಿದೆ. ನಮ್ಮ ಮುಂದಿನ ಪೀಳಿಗೆಗೂ ಇದು ಸದುಪಯೋಗವಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಕೆ-ಜಿಐಎಸ್ 2.0 ತಂತ್ರಜ್ಞಾನ ನಮ್ಮ ಜಿಲ್ಲೆಗೆ ತುಂಬಾ ಉಪಯುಕ್ತವಾಗಲಿದೆ. ಎಲ್ಲಾ ಅಂಗನವಾಡಿ, ಪ್ರೌಢಶಾಲೆ, ವಿದ್ಯಾರ್ಥಿನಿಲಯಗಳಲ್ಲಿನ ಮೂಲಸೌಕರ್ಯಗಳ ಸಮಗ್ರ ಮಾಹಿತಿ ಲಭ್ಯವಾಗಲಿದೆ. ತಾಂತ್ರಿಕತೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಜಿಲ್ಲೆಯು ಮುಂಚೂಣಿಗೆ ಬರಬೇಕಾಗಿದೆ. ಕಾರ್ಯಗಾರದಲ್ಲಿ ಕೆ-ಜಿಐಎಸ್ 2.0 ತಂತ್ರಜ್ಞಾನದ ಕುರಿತು ಯಾವುದೇ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಲಹೆ ಮಾಡಿದರು. 

  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಮಾತನಾಡಿ ತಾಂತ್ರಿಕತೆ ಈಗ ಸಾಕಷ್ಟು ಮುಂದುವರೆದಿದೆ. ಕೃಷಿ ಭೂಮಿಗೆ ಬೇಕಾದ ನ್ಯೂಟ್ರಿಷಿಯನ್, ಮಣ್ಣಿನ ಆರೋಗ್ಯ, ಬೆಳೆ ಸರ್ವೆ, ಬೆಳೆ ನಷ್ಟದ ಮಾಹಿತಿ ಕೆ-ಜಿಐಎಸ್ 2.0 ತಂತ್ರಜ್ಞಾನದಿಂದ ದೊರೆಯಲಿದೆ. ಪೊಲೀಸ್ ಇಲಾಖೆಗೆ ಮೊಬೈಲ್ ಅಪ್ಲಿಕೇಷನ್ ನೆರವು ನೀಡಲಿದೆ. ಕೆ-ಜಿಐಎಸ್ 2.0 ತಂತ್ರಜ್ಞಾನವನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

 ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರಾದ ಎನ್.ಎಲ್. ರಾಜೇಶ್ ಅವರು ಮಾತನಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಆವೃತ್ತಿ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುμÁ್ಠನಗೊಳಿಸಿದೆ. ಭೌಗೋಳಿಕ, ಆರ್ಥಿಕ ವ್ಯತ್ಯಾಸಗಳನ್ನು ತಂತ್ರಜ್ಞಾನದ ಮೂಲಕ ಸರಿಪಡಿಸಲು ವಿವಿಧ ಇಲಾಖೆಗಳ ಸಮನ್ವಯ ಅವಶ್ಯವಾಗಿದೆ. ಯೋಜನೆಯ ಯಶಸ್ವಿ ಅನುμÁ್ಠನಕ್ಕೆ ಮಾರ್ಗದರ್ಶನ ನೀಡುವುದು ಕೆಜಿಐಎಸ್ 2.0 ವ್ಯವಸ್ಥೆಯ ಬಹುಮುಖ್ಯ ಉದ್ದೇಶವಾಗಿದೆ ಎಂದರು.

  ಇಡೀ ದೇಶದಲ್ಲಿಯೇ ಮೊದಲು ಕರ್ನಾಟಕದಲ್ಲಿ ಮಾತ್ರ ಈ ಕೆಜಿಐಎಸ್ 2.0 ವ್ಯವಸ್ಥೆಯ ಅನುಷ್ಠಾನಗೊಂಡಿದೆ. ಗ್ರಾಮ ಪಂಚಾಯತ್‍ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗಿನ ಸಂಪೂರ್ಣ, ಸಮಗ್ರ ಮಾಹಿತಿಗಾಗಿ ಡ್ಯಾಶ್ ಬೋರ್ಡ್ ಸಿದ್ದಪಡಿಸಲಾಗಿದೆ.  ಇದು ತಳಮಟ್ಟದ ಸಮಸ್ಯೆಗಳನ್ನು ಅರಿಯಲು ವೇದಿಕೆಯಾಗಲಿದೆ. ಕೃಷಿ ವಿಮೆ. ಬೆಳೆ ನಷ್ಟದ ಪರಿಹಾರ ನೀಡಿಕೆ, ಕೈಗಾರಿಕಾ ಭೂ ವ್ಯಾಜ್ಯಗಳ ಪರಿಹಾರ, ಅರಣ್ಯಗಳ ಗಡಿ ನಕ್ಷೆಯ ಸಂಪೂರ್ಣ ಮಾಹಿತಿ, ಹಾಸ್ಟಲ್, ಅಂಗನವಾಡಿಗಳು, ಶಾಲಾವಲಯಗಳು, ಮಾದರಿ ಅರಣ್ಯಗಳು, ಆರೋಗ್ಯ ಕೇಂದ್ರಗಳ ಕುರಿತ 10 ವರ್ಷಗಳ ಮಾಹಿತಿ ಡಿಜಿಟಲೀಕರಣಗೊಳಿಸಲಾಗಿದೆ ಎಂದು ತಿಳಿಸಿದರು. 

 ಕೆಜಿಐಎಸ್ 2.0 ವ್ಯವಸ್ಥೆಯು ಜಿಐಎಸ್ ಆಧಾರಿತ ನೈಜ ದತ್ತಾಂಶ, ಆಧುನಿಕ ವಿಶ್ಲೇಷಣೆ ಮತ್ತು ತಾಂತ್ರಿಕ ಸಾಮಥ್ರ್ಯಗಳನ್ನು ಸಂಯೋಜಿಸುವ ಗುರಿಯೊಂದಿಗೆ ತ್ವರಿತವಾಗಿ ನಾಗರಿಕರು ಮತ್ತು ಇಲಾಖಾ ಅಧಿಕಾರಿಗಳು, ಭೂಶಿಕ ಮಾಹಿತಿಯೊಂದಿಗೆ ವ್ಯವಹಾರ ನಡೆಸಲು, ಎನ್.ಒ.ಸಿ ನೀಡಲು, ಸುಧಾರಿತ ಡಿಎಸ್.ಎಸ್ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಜಿಲ್ಲಾಮಟ್ಟದಲ್ಲಿ ಏನೇ ಬದಲಾವಣೆಗಳಾದರೂ ಮಾಹಿತಿಗಳು ಅಪ್ ಡೇಟ್ ಆಗಬೇಕು. ಆಗಮಾತ್ರ ತಂತ್ರಾಂಶದ ಮೂಲಕ ನಾಗರಿಕರಿಗೆ ಅವಶ್ಯಕ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರಾದ ಎನ್.ಎಲ್. ರಾಜೇಶ್ ಅವರು ತಿಳಿಸಿದರು.  

  ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ವೈಜ್ಞಾನಿಕ ಅಧಿಕಾರಿಗಳಾದ ಲಕ್ಷೋಜಿ ಹಾಗೂ ಕರುಣಾಕರನ್ ಅವರು ಪಿ.ಪಿ.ಟಿ ಮೂಲಕ ಕಾರ್ಯಾಗಾರದಲ್ಲಿ ಕೆಜಿಐಎಸ್ 2.0 ವ್ಯವಸ್ಥೆಯ ಬಗ್ಗೆ ವಿವರಿಸಿದರು. 

 ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ತಾಂತ್ರಿಕ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.  

Leave a Reply

Your email address will not be published. Required fields are marked *