ಚಾಮರಾಜನಗರ: ಬುದ್ದ, ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿದ ಕೆ. ಶಿವರಾಂ ಅವರು ಸಮಾಜದ ಅಭಿವೃದ್ದಿಗಾಗಿ ಹಾಗೂ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿ, ಉತ್ತಮ ಅಧಿಕಾರಿ ಹಾಗೂ ಜನ ಸೇವಕರಾಗಿದ್ದರು ಎಂದು ನಗರಸಭಾ ಹಿರಿಯ ಸದಸ್ಯರಾದ ಚಿನ್ನಮ್ಮ ಅಭಿಪ್ರಾಯಪಟ್ಟರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯಲ್ಲಿರುವ ಚಾವಡಿ ಮುಂಭಾಗ ಕೆ. ಶಿವರಾಂ ನಿಧನದ ಗೌರವಾರ್ಥ ಸಂಜೆ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಶಿವರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಬಹಳ ಕಷ್ಟಪಟ್ಟು ವ್ಯಾಸಂಗ ಮಾಡಿದ ಕೆ. ಶಿವರಾಂ ಅವರು ಪ್ರಪ್ರಥಮ ಭಾರಿಗೆ ಕನ್ನಡದಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ದೇಶವೇ ಅವರತ್ತ ನೋಡುವಂತೆ ಮಾಡಿದರು. ನಂತರ ಉನ್ನತ ಅಧಿಕಾರಿಯಾಗಿ, ಬಡವರು ಹಾಗೂ ದೀನ ದಲಿತರ ಅಭಿವೃದ್ದಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ತಾವು ವಹಿಸಿಕೊಂಡು ಇಲಾಖೆಗಳಲ್ಲಿ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಬಹಳಷ್ಟು ಬಡವರಿಗೆ ಒಳಿತು ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು.
ಯುವ ಮುಖಂಡ ಶ್ರೀನಿಧಿ ಕುದರ್ ಮಾತನಾಡಿ, ಶಿವರಾಮ್‍ಣ್ಣ ಅವರು ನಮ್ಮೆಲ್ಲರಿಗೂ ಚಿರಪರಿಚಿತರು. ದೊಡ್ಡ ಅಧಿಕಾರಿಯಾಗಿದ್ದರು ಸಹ ಬಡವರೊಂದಿಗೆ ಬೆರೆತು ಅವರ ಸಂಕಷ್ಟಗಳನ್ನು ಅರಿತು ದಾರಿ ತೋರಿಸುವ ಗುಣವನ್ನು ಹೊಂದಿದ್ದರು. ಅಧಿಕಾರಿಯಾಗಿ ಉತ್ತಮ ಹೆಸರು ಮಾಡುವ ಜೊತೆಗೆ ಚಲನಚಿತ್ರ ರಂಗದಲ್ಲಿಯೂ ಸಹ ತಮ್ಮದೇ ಆದ ಛಾಪು ಮೂಡಿಸಿದ್ದರು. ಛಲವಾದಿ ಮಹಾಸಭಾ ಸ್ಥಾಪನೆ ಮಾಡಿ, ರಾಜ್ಯಾದ್ಯಂತ ಸಂಘಟನೆಯನ್ನು ವಿಸ್ತರಣೆ ಮಾಡಿ, ಆ ಮೂಲಕ ಸಮುದಾಯದ ಯುವಕರಿಗೆ ಅದರ್ಶವಾಗಿದ್ದರು. ಅವರು ರಾಜಕೀಯಕ್ಕೂ ಸೇರ್ಪಡೆಯಾಗಿದ್ದರು. ಕ್ಷೇತ್ರದ ಸಂಸದರಾಗಬೇಕೆಂಬ ಅವರ ಕನಸು ಈಡೇರಲಿಲ್ಲ. ಭಗವಂತ ಅವರಿಗೆ ಚಿರಶಾಂತಿಯನ್ನು ನೀಡಿ, ಕುಟುಂಬಕ್ಕೆ ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿಕೊಂಡರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ಅರಿಹಂತ್ ಫುಲ್ಸ್ ಮಾಲೀಕÀ ದಿಲೀಪ್ ಕುದರ್, ಯಜಮಾನರಾದ ಶಿವಣ್ಣ, ಗುರುಸ್ವಾಮಿ, ನಾಗರಾಜು, ಮುಖಂಡರಾದ ಸಂಪತ್ ಕುಮಾರ್, ಗುಡ್ಡಯ್ಯ, ಪೆಂಡಾಲ್ ಬಸವಣ್ಣ, ಬಸವಣ್ಣ, .ಅಂಬೇಡ್ಕರ್ ಯುವಕರ ಸಂಘದ ಉಮೇಶ್, ಸಖಿ, ಸಿದ್ದು, ಗೌತಮ್, ಶ್ರೀಕಂಠ ಬಡಾವಣೆಯ ಮಕ್ಕಳು, ಯುವಕರು ಹಾಗೂ ಬಡಾವಣೆಯ ನಿವಾಸಿಗಳು ಇದ್ದರು.