ನಮಗೆಲ್ಲಾ ಕೆ.ಶಿವರಾಮ್ ಚಿರಪರಿಚಿತರೆನಿಸಿದ್ದೇ ‘ಬಾ ನಲ್ಲೆ ಮಧುಚಂದ್ರಕೆ’ ಕಾರಣದಿಂದಾಗಿ. ನಾವಿನ್ನೂ ಶಾಲಾ ದಿನಗಳಲ್ಲಿ ಇರುವಾಗ ಆ ಸಿನಿಮಾ ರಿಲೀಸ್ ಆಗಿದ್ದಿರಬಹುದು(ಬಹುಶಃ 1993-94). ಓಹೋ ಹಿಮಾಲಯ ಎಂಬ ಆ ಸಿನಿಮಾದ ಹಾಡು ಬಹು ಅಚ್ಚುಮೆಚ್ಚು. ಆ ಸಿನಿಮಾದ ಪ್ರೇಮಗೀತೆಗಳನ್ನು ಬರೆದವರು ದಲಿತ ಕವಿ ಸಿದ್ದಲಿಂಗಯ್ಯ ಅನ್ನೋದು ತಿಳಿಯಲು ತುಂಬಾ ಸಮಯ ಹಿಡಿದಿತ್ತು!!
ನಮ್ಮ ಹಳ್ಳಿಗಳಲ್ಲಿ ಕೆ.ಶಿವರಾಮ್ ಬಗ್ಗೆ ತರಹೇವಾರಿ ಕಥೆಗಳು ಕೇಳಿಬರುತ್ತಿದ್ದವು. ಅವ್ರು ಡಿಸಿಯಂತೆ, ಹಾಗಂತೆ, ಹೀಗಂತೆ ಇತ್ಯಾದಿ ಇತ್ಯಾದಿ. ಆ ಯಾವ ಸಂಗತಿಗಳೂ ನಮಗೆ ಮುಖ್ಯವಾಗಿರಲಿಲ್ಲ. ಬಾ ನಲ್ಲೇ ಮಧುಚಂದ್ರಕೆ ಸಿನಿಮಾ ಚೆನ್ನಾಗಿತ್ತು. ಹಾಡುಗಳು ಸುಮಧುರವಾಗಿದ್ದವು. ಹಾಗಾಗಿ ಸಿನಿಮಾದ ಹೀರೋ ಕೂಡ ನಮಗೆ ಇಷ್ಟವಾಗಿದ್ದರು ಅಷ್ಟೇ.
ಹೀಗೆ ಸಿನಿಮಾದಲ್ಲಷ್ಟೇ ನೋಡಿದ್ದ ಕೆ.ಶಿವರಾಮ್ ಅವರನ್ನು ನೇರಾನೇರ ಭೇಟಿಯಾಗುವ, ಅವರನ್ನು ಮಾತನಾಡಿಸುವ, ಸಂದರ್ಶಿಸುವ ಒಂದು ಅವಕಾಶ ಸಿಕ್ಕಿಯೇ ಬಿಟ್ಟಿತು. 2012 ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ, ವಿ.ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. ಅದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ.ಶಿವರಾಮ್ ಅವರನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿತ್ತು. ನಿವೃತ್ತಿಯ ಅಂಚಿನಲ್ಲಿದ್ದ ಶಿವರಾಮ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿಯೇ ಈ ಜಿಲ್ಲೆಯ In charge secretary ಆಗಿ ಬಂದಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆಗ ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರನಾಗಿದ್ದು, ಹಲವು ಸಂದರ್ಭಗಳಲ್ಲಿ ಶಿವರಾಮ್ ಅವರನ್ನು ಸಂದರ್ಶಿಸುವ ಅವಕಾಶ ಒದಗಿತ್ತು.
ನಿವೃತ್ತಿಯ ಅಂಚಿನಲ್ಲಿದ್ದ ಶಿವರಾಮ್ ಅವರನ್ನು ನೋಡಿದರೆ ಸೋಜಿಗವೆನಿಸುತ್ತಿತ್ತು. ಸಿನಿಮಾದಲ್ಲಿ ಹೇಗೆ ಇದ್ದರೋ, ನಿವೃತ್ತಿ ಸಮಯದಲ್ಲೂ ಹಾಗೆಯೇ ಇದ್ದರು. 60 ರ ಆಸುಪಾಸಿನ ವ್ಯಕ್ತಿ ಎನಿಸುತ್ತಿರಲಿಲ್ಲ. ಅಷ್ಟೊಂದು ಲವಲವಿಕೆಯಿಂದ ಇದ್ದರು. ನಿವೃತ್ತಿ ಬಳಿಕ ಕಾಂಗ್ರೆಸ್ ಸೇರಿದರು. ಆದರೆ ರಾಜಕೀಯ ಅವಕಾಶಗಳು ಸಿಗಲಿಲ್ಲ. 2014 ರ ವೇಳೆಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ್ ಅವರನ್ನು ಬೆಂಬಲಿಸಿ ರಾಜ್ಯಾದ್ಯಂತ ಶಿವರಾಮ್ ನೇತೃತ್ವದಲ್ಲಿ ‘ದಲಿತ ಸಿಎಂ’ಗಾಗಿ ಅಭಿಯಾನವೇ ನಡೆಯಿತು. ಪ್ರತಿ ಸಭೆಗಳಲ್ಲೂ ಕೆ.ಶಿವರಾಮ್ ಅವರ ಧ್ವನಿಯಲ್ಲಿ ‘ದಲಿತರು ಬಂದರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಹಾಡು ಮೊಳಗುತ್ತಿತ್ತು.
2019 ರ ಲೋಕಸಭಾ ಚುನಾವಣೆಗೆ ಕೇವಲ ಮೂರು ತಿಂಗಳು ಇರುವಾಗ ಚಾಮರಾಜನಗರದಲ್ಲಿ ಬಾಡಿಗೆ ಮನೆ ಹಿಡಿಯಲು ಖ್ಯಾತ ಜ್ಯೋತಿಷಿಯೊಬ್ಬರ ಜೊತೆಗೆ ರಾತ್ರಿ ಎಂಟು ಗಂಟೆಗೆ ಚಾಮರಾಜನಗರದ ಹೌಸಿಂಗ್ ಬೋರ್ಡ್ ಬಡಾವಣೆಗೆ ಶಿವರಾಮ್ ಆಗಮಿಸಿದ್ದಾರೆಂಬ ಮಾಹಿತಿ ಲಭಿಸಿತ್ತು. ರಾಜ್ ನ್ಯೂಸ್ ಚಾನೆಲ್ ನಲ್ಲಿದ್ದ ನಾನು ಹಾಗೂ ಕೆಲವು ದೃಶ್ಯಮಾಧ್ಯಮದ ಸ್ನೇಹಿತರು ಶಿವರಾಮ್ ಅವರ ಭೇಟಿಗೆ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆಗ ಅವರ ಆಪ್ತವಲಯದಲ್ಲಿದ್ದ ಒಬ್ಬರನ್ನು ಸಂಪರ್ಕಿಸಿ, ನಿಮ್ಮ ನಾಯಕರನ್ನು ಮಾತಾಡಿಸಬೇಕು ಎಂದು ಕೇಳಿಕೊಂಡಾಗ ಅವರು ಒಪ್ಪಿಸಿದರು. ಹಾಗೆಯೇ ಚಾಮರಾಜನಗರದಿಂದ ಮೂರ್ನಾಲ್ಕು ಕಿ.ಮೀ ದೂರದ ಮಸಗಾಪುರದ ಬಳಿ ತಮ್ಮ ಇನೋವಾ ಕಾರನ್ನು ನಿಲ್ಲಿಸಿಕೊಂಡು ನಮಗಾಗಿ ಕಾಯುತ್ತಿದ್ದರು. ಭೇಟಿಯಾಗಿ ಅವರ ಹೇಳಿಕೆಯನ್ನು ವಿಶ್ಯುವಲ್ ರೆಕಾರ್ಡ್ ಮಾಡಿಕೊಂಡೆವು.
ಬಳಿಕ ಬ್ರದರ್ ಆಫ್ ದಿ ರೆಕಾರ್ಡ್ ಕೇಳ್ತಿದೀನಿ, ಚಾಮರಾಜನಗರದಿಂದ ಬಿಜೆಪಿ ಕ್ಯಾಂಡಿಡೇಟ್ ಆದ್ರೆ ಗೆಲ್ಲಬಹುದಾ? ಎಂದರು.
ಚಾಮರಾಜನಗರದಲ್ಲಿ ಹಾಲಿ ಸಂಸದ ಧ್ರುವನಾರಾಯಣ್ ವಿರುದ್ಧ ಗೆಲ್ಲುವುದು ಅಷ್ಟು ಸುಲಭವೂ ಅಲ್ಲ. ಹಾಗೆಯೇ ಗೆಲ್ಲಲಾಗದಷ್ಟು ಕಠಿಣವೂ ಅಲ್ಲ ಎಂದು ಉತ್ತರಿಸಿದ್ದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ನ ಹಾಲಿ ಸಂಸದರಾಗಿದ್ದ ಧ್ರುವನಾರಾಯಣ್ ವಿರುದ್ಧ ಬಿಜೆಪಿಯ ಶ್ರೀನಿವಾಸಪ್ರಸಾದ್ ಗೆಲುವು ಸಾಧಿಸಿದ್ದರು. ಆಗ ನನಗೆ ಪರಿಚಯ ಇರುವ ಅವರ ಬೆಂಬಲಿಗರ ಮೂಲಕ ಕರೆ ಮಾಡಿ ಬ್ರದರ್ ನೀವು ಹೇಳಿದ್ದು ನಿಜವಾಯ್ತು. ಚೆನ್ನಾಗಿ ಅನಲೈಸ್ ಮಾಡ್ತೀರಿ ಎಂದಿದ್ದರು.
ಇತ್ತೀಚಿನ ದಿನಗಳಲ್ಲಿ ಹಲವು ಯೂಟ್ಯೂಬ್ ಚಾನೆಲ್ ಗಳಲ್ಲಿ ಅವರ ಬದುಕಿನ ಮಜಲುಗಳ ಬಗ್ಗೆ ಸಂದರ್ಶನ ನೋಡಿದಾಗ ಕೆ.ಶಿವರಾಮ್ ಅವರ ಬಗ್ಗೆ ಹೆಮ್ಮೆಯೂ ಕುತೂಹಲವೂ ಮೂಡುತ್ತಿತ್ತು. ಇಂತಹ ಸಜ್ಜನ ವ್ಯಕ್ತಿತ್ವದ ಕೆ.ಶಿವರಾಮ್ ಅವರಿಗೆ ಎಂಎಲ್ಎ ಅಥವಾ ಎಂಪಿ ಆಗುವ ಮಹದಾಸೆಯೊಂದು ಇತ್ತು. ಆದರೆ ಅವರ ಕೊನೆಗಾಲದ ಆಸೆ ಬರೀ ಕನಸಾಗಿಯೇ ಉಳಿಯಿತು. ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದೊರೆಯಲಿ ಎಂಬ ಆಶಯದೊಂದಿಗೆ ಈ ಅಕ್ಷರ ನಮನ.
-ಗೌಡಹಳ್ಳಿ ಮಹೇಶ್, ವಕೀಲರು