ಸಮಸಮಾಜದ ನಿರ್ಮಾಣಕ್ಕೆ ಹೋರಾಡಿದವರಲ್ಲಿ ಕನಕದಾಸದರು ಒಬ್ಬರು : ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ಬುದ್ಧ, ಬಸವ, ಅಂಬೇಡ್ಕರ್‍ರಂತೆ ಸಮಸಮಾಜಕ್ಕಾಗಿ ಹೋರಾಡಿದ ಮಹನೀಯರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭಕ್ತಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರೀಕೃಷ್ಣನ ಪರಮ ಭಕ್ತರಾಗಿದ್ದ ಕನಕದಾಸರು ಭಕ್ತಿಗೆ ಇನ್ನೊಂದು ಹೆಸರಾಗಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ಕನಕದಾಸರು ವ್ಯಾಕರಣಬದ್ಧವಾಗಿ ಜನರಿಗೆ ಅರ್ಥವಾಗುವಂತಹ ಸರಳ ಕೀರ್ತನೆಗಳನ್ನು ರಚಿಸಿ ಸಾಮಾಜದಲ್ಲಿದ್ದ ಮೇಲು-ಕೀಳು ತಾರತಮ್ಯ ಹೋಗಲಾಡಿಸಲು ಅವಿರತವಾಗಿ ದುಡಿದರು. ಕರ್ನಾಟಕ ಮಾತ್ರವಲ್ಲದೆ ದೇಶದ ಇತರೆ ಭಾಗಗಳಲ್ಲಿಯೂ ಸಂಚರಿಸಿ ಜನರಲ್ಲಿದ್ದ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಬೆಳಕು ಚೆಲ್ಲುವುದರ ಜೊತೆಗೆ ಕೆಳಸ್ತರದಲ್ಲಿದ್ದ ಸಮಾಜವನ್ನು ಕನಕದಾಸರು ಮೇಲ್ಪಂಕ್ತಿಗೆ ತಂದು ನಿಲ್ಲಿಸಿದರು ಎಂದರು.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೆಚ್ಚಿನ ಅನುದಾನ ನೀಡುವ ಮೂಲಕ ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಹಲವು ಸಮುದಾಯ ಭವನಗಳ ನಿರ್ಮಾಣವಾಗಿವೆ. ಸಮಾಜದ ಸಮುದಾಯ ಭವನವು ನಿರ್ಮಾಣ ಹಂತದಲ್ಲಿದೆ. ಗಂಗಾ ಕಲ್ಯಾಣ ಯೋಜನೆ, ಸಾರಥಿ ಸೇರಿದಂತೆ ಹೆಚ್ಚಿನ ಸಾಲಸೌಲಭ್ಯಗಳನ್ನು ಸಮುದಾಯಕ್ಕೆ ನೀಡಲಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. 

ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ 15-16ನೇ ಶತಮಾನದ ದಾಸಶ್ರೇಷ್ಠರಲ್ಲಿ ಕನಕದಾಸರು ಪ್ರಮುಖರಾಗಿದ್ದಾರೆ. ಕನಕದಾಸರ ಮೊದಲ ಹೆಸರು ತಿಮ್ಮಪ್ಪನಾಯಕ. ಕನಕ ಎಂದರೇ ಚಿನ್ನಾಭರಣ ಎಂದರ್ಥ. ತಮ್ಮ ಸರಳ ಕೀರ್ತನೆಗಳಿಂದಲೇ ಜನರನ್ನು ತಿದ್ದಿ ಸಮಾಜದಲ್ಲಿ ಸಮಾನತೆ ತಂದರು. ಸುಮಾರು 316 ಕೀರ್ತನೆಗಳನ್ನು ರಚಿಸಿದ ಕನಕದಾಸರು ಜಾತೀಯ ಸಂಕೋಲೆಗಳಿಗೆ ಸಿಲುಕಿದ್ದ ಜನರಿಗೆ ಸಮಾನತೆಯ ಸಂದೇಶ ಸಾರಿದರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯೋಣ. ಅವರ ಆದರ್ಶ ಪಾಲಿಸೋಣ ಎಂದರು.

ಮುಖ್ಯ ಭಾಷಣ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಸರಳ ಕೀರ್ತನೆಗಳ ಮೂಲಕ ಸಮಾಜಕ್ಕೆ ಮನ್ವಂತರದ ಹಾದಿ ತೋರಿದವರಲ್ಲಿ ಕನಕದಾಸರು ಮುಂಚೂಣಿಯಲ್ಲಿದ್ದಾರೆ. ಕನಕ ಬರೀ ಹೆಸರಲ್ಲ, ಬೆಳಕು ದಿವ್ಯತ್ವ, ಜೀವತ್ವ ಎಲ್ಲವೂ ಅಡಕವಾಗಿದೆ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ವಾಲ್ಮೀಕಿ ಈ ನೆಲದ ವಿಸ್ಮಯಗಳು, ನಮ್ಮಂತೆ ಅವರೂ ಜನ್ಮ ತಾಳಿದ್ದಾರೆ. ನಾವು ವ್ಯಕ್ತಿಯಾಗಿಯೇ ಇದ್ದೇವೆ. ಅವರು ಶಕ್ತಿಯಾಗಿ ಬೆಳೆದಿದ್ದಾರೆ. ಈ ನೆಲದ ಮಣ್ಣಿನ ಸಾರ ಹೀರಿ, ಪಂಚಭೂತಗಳ ಕೊಡುಗೆಯನ್ನು ಪರಿಪೂರ್ಣವಾಗಿ ಅಳವಡಿಸಿಕೊಂಡು ಈ ನಾಡಿಗೆ, ಜಗತ್ತಿಗೆ ಜ್ಞಾನದ ಬೆಳಕನ್ನು ಪಸರಿಸಿದ ಅವರೆಲ್ಲರೂ ನಮ್ಮ ಅಸ್ತಿತ್ವವಾಗಿದ್ದಾರೆ ಎಂದು ಹೇಳಿದರು.

ಬದುಕು ಒಂದು ಕಲೆಯಾಗಿದ್ದು, ನಾವೆಲ್ಲರೂ ಬದುಕಿನ ಕಲೆ ಕಲಿಯಲು ಇಂತಹ ಮಹನೀಯರ ಜಯಂತಿಗಳು ಅನಿವಾರ್ಯವಾಗಿವೆ. ನಮ್ಮಲ್ಲಿರುವ ಅಹಂ, ಕೀಳಿರಿಮೆಗಳನ್ನು ತುಳಿದು ಕನಕನ ಬೆಳಕಿನಲ್ಲಿ ನಡೆಯಬೇಕು. ನಾನು ಮತ್ತು ಜೇನು ಎರಡೂ ನಮ್ಮಲ್ಲಿವೆ. ನಾವುಗಳು ನಾನತ್ವವನ್ನು ಉದ್ದೀಪನೆಗೊಳಿಸದೇ ಜೇನು ಸವಿಯಲು ಮುಂದಾಗಬೇಕು. ಬದುಕಿನ ಸರಳತೆ, ಭವ್ಯತೆಯನ್ನು ಅರ್ಥ ಮಾಡಿಕೊಂಡರೇ ಸಾಕು. ಜೀವನ ಹಸನಾಗಲಿದೆ. ದೇಶದ ದಾರ್ಶನಿಕರು, ಚಿಂತಕರು, ಸಾಧು-ಸಂತರು, ಮಹಾತ್ಮರು, ಸಮಾಜ ಸುಧಾರಕರು ಈ ನಿಟ್ಟಿನಲ್ಲಿ ನಮಗೆ ಮುಖ್ಯವಾಗುತ್ತಾರೆ ಎಂದರು.
ಮೋಹನ ತರಂಗಿಣಿ, ನಳ ಚರಿತೆ, ಹರಿಭಕ್ತಿ ಸಾರ, ರಾಮಧ್ಯಾನ ಚರಿತೆಯಂತಹ ಶ್ರೇಷ್ಠ ಕೃತಿಗಳನ್ನು ಕನಕದಾಸರು ರಚಿಸಿದರು. ರಾಮಧ್ಯಾನ ಚರಿತೆ ಕನ್ನಡ ಹೊರತುಪಡಿಸಿ ಇತರೆ ಭಾಷೆಗಳಲ್ಲಿ ರಚಿತವಾಗಿದ್ದರೆ ಜಾಗತಿಕವಾಗಿ ಹೆಸರುವಾಸಿಯಾಗುವ ಸಂಭವವಿತ್ತು. ಕನಕದಾಸರ ಕೀರ್ತನೆಗಳು ಜನರನ್ನು ಓರೆಗಲ್ಲಿಗೆ ಹಚ್ಚಲಿದ್ದು, ಒಂದೊಂದು ಕೀರ್ತನೆಗಳ ಮೇಲೂ ಇಂದಿನ ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಲು ಯೋಗ್ಯವಾಗಿವೆ ಎಂದು ಡಾ. ಮಾನಸ ಅವರು ತಿಳಿಸಿದರು.

  ಚುಡಾ ಅದ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ. ಶೃತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿದೇಶಕರಾದ ರಾಜು, ಸಮಾಜದ ತಾಲೂಕು ಅಧ್ಯಕ್ಷರಾದ ಉಮೇಶ್, ಮುಖಂಡರಾದ ಬೆಳ್ಳೇಗೌಡ, ಗುರುಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  ಭಕ್ತಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ವಿವಿಧ ಕಲಾತಂಡಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು. ಮೆರವಣಿಗೆಯು ಪ್ರವಾಸಿ ಮಂದಿರದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನ ತಲುಪಿತು.

Leave a Reply

Your email address will not be published. Required fields are marked *