“ಕನ್ನಡದ ವರ ಕವಿ ದ.ರಾ.ಬೇಂದ್ರೆ”

ಜೀವನದಲ್ಲಿ ನೊಂದು, ಬೆಂದು ಪರಿಪಕ್ವ ಸಾಹಿತ್ಯ ನೀಡಿದ ವರಕವಿ ದ ರಾ ಬೇಂದ್ರೆ- 130 ನೇ ಜನ್ಮ ವಾರ್ಷಿಕೋತ್ಸವ.
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಇವರು "ದ ರಾ ಬೇಂದ್ರೆ" ಎಂದೇ ಪ್ರಸಿದ್ಧಿ. ಕನ್ನಡ ಸಾರಸ್ವತ ಲೋಕದಲ್ಲಿ ಕವಿಯಾಗಿ, ವಿಮರ್ಶೆಯ ವಿವಿಧ ಮುಖಗಳೊಂದಿಗೆ ಲೇಖಕರು ಕೂಡ ಆಗಿ, ತಾವೇ ರಚಿಸಿರುವ ಕವನವನ್ನ ವಾಚನ ಮಾಡುತ್ತಿದ್ದರೆ ಕೇಳಲು ಕಿವಿ ಗಿಂಪು!. ಅವರ ಭಾಷಾ ಸೊಗಡು, ಭಾಷೆಯ ಬಳಕೆ, ಅಲ್ಲಿನ ಪದಪುಂಜಗಳು ಎಲ್ಲವೂ ಕೂಡ ಆಕರ್ಷಿಸಿ ಬಿಡುತ್ತವೆ.
ಅದಕ್ಕಲ್ಲವೇ ಅವರು ಕರ್ನಾಟಕಕ್ಕೆ ಎರಡನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. 1973 ರಲ್ಲಿ ಬೇಂದ್ರೆಯವರ ಕವನ ಸಂಕಲನವಾದ "ನಾಕುತಂತಿ"ಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು. ಈ ಮೂಲಕ ನಮ್ಮ ಕನ್ನಡ ಮತ್ತಷ್ಟು ಭಾರತದೆತ್ತರಕ್ಕೆ ಸಾಗಿತು. ನಮಗೆ ಇನ್ನೂ ನೆನಪಿದೆ.
ನಮ್ಮ ಬಾಲ್ಯದ ದಿನಗಳು ಕೂಡ ಈ ಕ್ಷಣದಲ್ಲಿ ನಮಗೆ ನೆನಪಾಗುತ್ತದೆ. ಒಂದನೆಯ ತರಗತಿಯಿಂದ 10ನೇ ತರಗತಿಯವರೆಗೆ, ಅಲ್ಲದೆ ಪಿಯುಸಿ ಪಠ್ಯಕ್ರಮ, ಪದವಿ ಪಠ್ಯಕ್ರಮಗಳಲ್ಲೂ ಕೂಡ ದ ರಾ ಬೇಂದ್ರೆಯವರ ಯಾವುದಾದರೊಂದು ಕವನ ಇದ್ದೇ ಇರುತ್ತಿತ್ತು. ಅದನ್ನ ಚೆನ್ನಾಗಿ ಬಾಯಿ ಪಾಠ ಮಾಡಿ, ರಾಗವಾಗಿ ಓದುವುದು, ಹಾಡುವುದು ಎಂದರೆ ಎಲ್ಲಿಲ್ಲದ ಸಡಗರ ಸಂಭ್ರಮ ನಮಗೆ!. ನಮಗೆ ಆ ಬಾಲ್ಯದ ದಿನಗಳಲ್ಲಿ ಕವಿ ಬೇಂದ್ರೆಯವರ ಭಾಷೆಯ ವಿಶಾಲತೆ, ಅರ್ಥಪೂರ್ಣತೆ ಎಲ್ಲವೂ ಕಂಡು ಬರುತ್ತಿತ್ತು.
ಇನ್ನು ಮುಂದುವರಿದು ಭಾವಗೀತಾ ಪ್ರಪಂಚದಲ್ಲಿ ಅನೇಕ ಗಾಯಕ- ಗಾಯಕಿಯರ ಕಂಠದಿಂದ, ಸಂಗೀತದ ಸ್ಪರ್ಶದಿಂದ ಅವರ ಕವನಗಳು ಮತ್ತಷ್ಟು ಮನೆ- ಮನ ತಲುಪಿದವು. ಇದರಿಂದಾಗಿ ಆ ಕವಿಗೆ ಎಲ್ಲೋ ಒಂದು ಕಡೆ ನಮಸ್ಕರಿಸಬೇಕೆನಿಸುತ್ತದೆ. ತಮ್ಮ ಬದುಕಿದ್ದಕ್ಕೂ ಅನೇಕ ನೋವುಗಳನ್ನು ಕಂಡರೂ ಕೂಡ ಅವರ ಸಾಹಿತ್ಯದ ಸೃಷ್ಟಿ, ದೃಷ್ಟಿ ಮಾತ್ರ ಬದಲಾಗಲಿಲ್ಲ. ತಾವು ಕಂಡುಂಡ, ಅನುಭವಿಸಿದ ಎಲ್ಲವನ್ನು ಕೂಡ ತಮ್ಮ ಸಾಹಿತ್ಯದ ಸ್ಪರ್ಶದೊಂದಿಗೆ ನಮ್ಮನ್ನ ಬೇರೊಂದು ಲೋಕಕ್ಕೆ ಕರೆದುಕೊಂಡು ಹೋದವರು. ವೈವಿಧ್ಯಮಯ ಸಾಹಿತ್ಯ ಸೃಷ್ಟಿಸಿ ತಮ್ಮ ಮನಸ್ಸನ್ನು ಹಗುರ ಮಾಡಿಕೊಂಡವರು!.
ಅವರ ಸೃಜನಶೀಲ ಸಾಹಿತ್ಯ, ಭಾವನಾತ್ಮಕ ಸ್ಪರ್ಶವನ್ನು ನಮಗೆ ನೀಡುತ್ತದೆ. ಇದರಿಂದಾಗಿ ಅವರ ಸಾಹಿತ್ಯ ಓದುವುದು ಎಂದರೆ ನಮಗೆಲ್ಲಾ ಎಲ್ಲಿಲ್ಲದ ಖುಷಿ ಸಿಗುತ್ತದೆ. ನಮ್ಮ ಮೈಸೂರು ಆಕಾಶವಾಣಿಯ ಮೂಲಕ ರಾಜ್ಯದ ವಿವಿಧ ನಿಲಯಗಳನ್ನು ಕೇಳುವ ಸೌಭಾಗ್ಯ ದೊರಕಿದ ನಂತರವಂತು ನಾನು ದ ರಾ ಬೇಂದ್ರೆಯವರ ಅನೇಕ ಕವನ, ವಿಮರ್ಶೆ, ಭಾಷಣ, ಚರ್ಚೆ ಎಲ್ಲವನ್ನು ಕೂಡ ಕೇಳಿ ಸಂಭ್ರಮ ಪಟ್ಟೆ. ನಾನು ಮೊದಲೇ ಹೇಳಿದಂತೆ ಅವರ ಸ್ವರಚಿತ ಕವನ ವಾಚನದ ಶೈಲಿ ನಮ್ಮನ್ನು ಬೆರೆಗಾಗಿಸುತ್ತದೆ!. ಅವರ ಧ್ವನಿಯೊಂದಗಿನ ಕವನ ವಾಚನಗಳು ಎಲ್ಲವೂ ಕೂಡ ನನ್ನ ಸಂಗ್ರಹಾಲಯದಲ್ಲಿ ಈಗಲೂ ಇವೆ. ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವ್ಯಕ್ತಿ ಚಿತ್ರ- ಲೇಖನ, ಕವನ ಎಲ್ಲವನ್ನ ಕೂಡ ನಾನು ಸಂಗ್ರಹಿಸಿದ್ದೇನೆ. ಸಮಯ ಸಿಕ್ಕಾಗಲಿಲ್ಲ ಅವರ ಸಾಹಿತ್ಯವನ್ನು ಓದುವುದೇ ಒಂದು ರೀತಿಯ ಸ್ವರ್ಗ ಸುಖ. ಒಂದೊಂದು ಬಾರಿ ಓದಿದರೂ ಒಂದೊಂದು ರೀತಿಯ ಅನುಭವ!. ಇವೆಲ್ಲಾ ನಮ್ಮನ್ನ ಭಾವನಾ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಅದರಲ್ಲೂ ಧಾರವಾಡ ಆಕಾಶವಾಣಿ ನಿಲಯದಿಂದ ಅವರ ಅನೇಕ ಸಂದರ್ಶನಗಳು, ಕವನಗಳು ಪ್ರಸಾರವಾಗಿವೆ. ಆಕಾಶವಾಣಿಯ ಮೂಲಕ ಅನಕ್ಷರಸ್ಥರನ್ನು ಕೂಡ ಬೇಂದ್ರೆಯವರು ತಲುಪುತ್ತಾರೆ. ಪಿಯುಸಿ ದಾಟಿದ ಅನೇಕ ವಿದ್ಯಾರ್ಥಿಗಳು, ಪದವಿ ತರಗತಿಗಳಲ್ಲಿ ಇವರ ಬಗ್ಗೆ ಓದುತ್ತಾರೆ. ಮುಂದುವರೆದು ಐಚ್ಚಿಕ ವಿಷಯವಾಗಿಯೂ ಕೂಡ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡಾಗಲೂ ಕೂಡ ಬೇಂದ್ರೆ ಸಾಹಿತ್ಯ ಪ್ರತ್ಯೇಕವಾಗಿ ಎಲ್ಲರನ್ನ ಸ್ವಾಗತಿಸುತ್ತದೆ. ಬೇಂದ್ರೆಯವರ ಸಾಹಿತ್ಯದ ಸೊಬಗಿನ ಬಗ್ಗೆ ಅನೇಕ ಕವಿಗಳು, ಲೇಖಕರು ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಒಬ್ಬೊಬ್ಬ ಕವಿಗಳದ್ದು ಒಂದೊಂದು ರೀತಿಯ ಭಾವಗಳು, ಪ್ರತಿಬಿಂಬಗಳು ಎಲ್ಲೋ ಒಂದು ಕಡೆ ನಾವು ಯೋಚನೆ ಮಾಡಿದಾಗ ಕವಿಯಾದವನು ಏನೋ ಒಂದಿಷ್ಟು ಸಾಲುಗಳನ್ನು ಬರೆದರಷ್ಟೇ ಸಾಲದು. ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತರು ಹೀಗೆ ಅನೇಕರ ಸಾಹಿತ್ಯವನ್ನು ಓದಬೇಕು. ಓದಿದಷ್ಟು ಅವು ನಮ್ಮ ಅಂತರಂಗದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಆಗ ನಮ್ಮ ಬರವಣಿಗೆಯ ಜೊತೆಗೆ ಓದಿನ ಶೈಲಿಯೂ ಕೂಡ ಬದಲಾಗುತ್ತದೆ.
1896 ರ ಜನವರಿ 31 ದ ರಾ ಬೇಂದ್ರೆಯವರು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ (ಅಂಬವ್ವ) ಇವರ ಕಾವ್ಯನಾಮ ಅಂಬಿಕಾತನಯದತ್ತ ಆಗಿದೆ. ಬೇಂದ್ರೆಯವರು 11ನೇ ವರ್ಷದಲ್ಲಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡರು. ಮೆಟ್ಟುಕುಲೇಷನ್ ಮುಗಿಸಿದ ಬಳಿಕ ತಮ್ಮ ಕಾಲೇಜಿನ ಓದಿಗೂ ಕೂಡ ಇವರು ಸೇರಿಕೊಂಡರು ಬಿಎ ಮಾಡಿದರು. ನಂತರ ಅಧ್ಯಾಪಕ ವೃತ್ತಿಯನ್ನು ಹಿಡಿದರು. ತಮ್ಮ ಓದಿನ ದಾಹ ತೀರದೆ ಎಂ ಎ ಯನ್ನು ಕೂಡ ಮಾಡಿದರು. ಲಕ್ಷ್ಮೀಬಾಯಿಯವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡರು.
ಎಲ್ಲಾ ಕಾಲಕ್ಕೂ ಸಲ್ಲುವ ಸಾಹಿತ್ಯವನ್ನು ಸೃಷ್ಟಿಸಿದವರು ಬೇಂದ್ರೆ. ಅವರು ತಮ್ಮ ಸಂಧ್ಯಾ ಕಾಲದಲ್ಲೂ ಕೂಡ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಇದರಿಂದಾಗಿ ಅವರು "ಧಾರವಾಡದ ಅಜ್ಜ" ಎಂದೇ ಪ್ರಸಿದ್ಧರಾಗಿದ್ದರು. ಧಾರವಾಡದಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೂಡ ನೀಡುತ್ತಾರೆ. ಅವರು ಸೃಷ್ಟಿಸಿರುವ ಮಕ್ಕಳ ಸಾಹಿತ್ಯವೂ ಕೂಡ ಮಕ್ಕಳ ಮನಸೂರೆಗೊಂಡಿದೆ. ಅವರ "ಗರಿ" ಕವನ ಸಂಕಲನದಲ್ಲಿ "ನರಬಲಿ" ಎಂಬ ಕವನವು ಕೂಡ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಗುರಿಯಾಗಿತ್ತು. ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಇದರಿಂದಾಗಿ ಅನೇಕ ಬಾರಿ ಸೆರೆಮನೆ ವಾಸವನ್ನ ಕೂಡ ಅನುಭವಿಸಿದ್ದಾರೆ. ತಮ್ಮ ಬರಹದಂತೆ ಉತ್ತಮ ವಾಗ್ಮಿಯಾಗಿಯೂ ಕೂಡ ಆಗಿದ್ದ ಬೇಂದ್ರೆಯವರು ಅವರ ಭಾಷಣ ಕೇಳಲೆಂದೇ ಅನೇಕರು ಕಾಯುತ್ತಿದ್ದರು. ಇದರೊಟ್ಟಿಗೆ ಆಧ್ಯಾತ್ಮದ ವಿಷಯದಲ್ಲೂ ಕೂಡ ಇವರು ಒಲವು ಮೂಡಿಸಿಕೊಂಡಿದ್ದರು. ಜಾನಪದ ದಾಟಿಯ ಅದೆಷ್ಟೋ ಕವಿತೆಗಳನ್ನ ಗಾಯಕರು ಸುಷ್ಶಾವ್ಯವಾಗಿ ಹಾಡಲು ನೆರವಾಗಿದ್ದಾರೆ. ಇವರನ್ನು "ಕನ್ನಡದ ಠಾಗೋರ್" ಎಂದು ಕೂಡ ಕರೆಯಲಾಗುತ್ತದೆ.
ತಮ್ಮ ಬಾಲ್ಯದ ದಿನಗಳಲ್ಲೇ ಅನೇಕ ಪತ್ರಿಕೆಗಳಲ್ಲಿ ಕವನಗಳು ಪ್ರಕಟವಾಗಿದ್ದವು. ಧಾರವಾಡದಿಂದ ಪ್ರಕಟವಾಗುತ್ತಿದ್ದ "ಸ್ವಧರ್ಮ" ಪತ್ರಿಕೆಯಲ್ಲಿ ಇವರ ಮೊದಲ ಕವನ "ಬೆಳಗು" ಪ್ರಕಟವಾಯಿತು. ಇವರ ಅನೇಕ ಕವನಗಳು ಕೂಡ ಚಲನಚಿತ್ರ ಗೀತೆಗಳಾಗಿಯೂ ಕೂಡ ಮತ್ತೊಂದು ಲೋಕ ಪ್ರವೇಶಿಸಿ, ಅನೇಕ ವೀಕ್ಷಕರ ಮನಸೂರೆಗೊಂಡವು. ಈಗಲೂ ಕೂಡ ಟಿವಿಗಳಲ್ಲಿ ಮತ್ತು ಆಕಾಶವಾಣಿಗಳಲ್ಲಿ ಅವರ ರಚನೆಯ ಗೀತೆಗಳು ಬಂದಾಗ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಅದರಲ್ಲೂ ಯುಗಾದಿ ಹಬ್ಬ ಬಂತೆಂದರೆ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ"- ಎನ್ನುವ ಇವರ ಕವಿತೆ ಪ್ರಕೃತಿಯ ಸೌಂದರ್ಯವನ್ನೆಲ್ಲ ಒಂದೆಡೆ ತೆರೆದಿಟ್ಟಂತಿದೆ. ಅವರ ಗರಿ, ನಾದಲೀಲೆ, ಉಯ್ಯಾಲೆ ಮುಂತಾದ ಕವನ ಸಂಕಲನಗಳು ಇವತ್ತಿಗೂ ಕೂಡ ಪ್ರಸಿದ್ಧಿ ಪಡೆದಿವೆ.
ವೈವಿಧ್ಯಮಯ ವೈಚಾರಿಕ ಸಾಹಿತ್ಯವನ್ನು ನೀಡಿದ್ದರೂ ಕೂಡ ಅವರು ಯಾವತ್ತೂ ಪ್ರಶಸ್ತಿಗಳ ಹಿಂದೆ ಬೀಳಲಿಲ್ಲ.
1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
1958ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.
1964ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ ಮಾಡಲಾಯಿತು.
1965ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ,
1968ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು.
1973ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕನ್ನಡಿಗರ ಸೌಭಾಗ್ಯವೇ ಸರಿ.
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪಡೆದ ಅಪ್ರತಿಮರು. ಅಲ್ಲದೆ
ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು. ಅಲ್ಲದೆ ನಾಡಿನುದ್ದಕ್ಕೂ ಇವರು ಸಂಚಾರ ಮಾಡಿ ತಮ್ಮ ಸಾಹಿತ್ಯ ಎಲ್ಲೆಡೆ ತಲುಪುವಂತೆ ಮಾಡಿದವರು. ಅದರಿಂದಾಗಿ ಅನೇಕ ಕಡೆಯ ಸನ್ಮಾನಗಳು ನಡೆದಿವೆ.
ನಾನು ಕಾಳಿದಾಸ ಕನ್ನಡದಲ್ಲಿ ಬರೆಯಬೇಕೆಂದು ಬಗೆದಿದ್ದರಿಂದ ಬೇಂದ್ರೆಯಾಗಿ ಹುಟ್ಟಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಜಗದಂಬೆ, ಭೂಮಾತೆ, ಭಾರತಾಂಬೆ, ಕನ್ನಡಾಂಬೆ ಮತ್ತು ತಮ್ಮ ಸ್ವತಃ ತಾಯಿ ಇವರುಗಳನ್ನು ಪಂಚಪ್ರಾಣ ಎಂದು ಹೇಳಿಕೊಂಡಿದ್ದಾರೆ. ಇದು ಒಬ್ಬ ಕವಿಯು ತನ್ನೊಳಗೆ ಅಂದುಕೊಂಡ ಭಾವನಾತ್ಮಕ ಜೊತೆಗೆ ಅರ್ಥಪೂರ್ಣ ಅಂಶಗಳಾಗಿವೆ.
ನಿಜಕ್ಕೂ ಇವರು ವಿವಿಧ ಪ್ರಾಸಗಳ ಮೂಲಕ ಅರ್ಥವನ್ನು ಭಾವಗಳ ಮಿಂಚನ್ನ, ನಾದಲೀಲೆಯ ಮಾಂತ್ರಿಕತೆಯನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ.
ದ ರಾ ಬೇಂದ್ರೆಯವರು ಭಾವಪೂರ್ಣ ಭಾವಗೀತೆಗಳನ್ನು ರಚಿಸುವುದರಲ್ಲಿ ಸಿದ್ದಹಸ್ತರಾಗಿದ್ದರು. ಅವರ ಪ್ರಮುಖ ಹಾಡುಗಳ ಕೆಲವು ಸಾಲುಗಳು……. 'ಮೂಡಲ ಮನೆಯಾ ಮುತ್ತಿನ ನೀರಿನ', 'ಕುಣಿಯೋಣು ಬಾರಾ ಕುಣಿಯೋಣು ಬಾರಾ', 'ಯುಗ ಯುಗಾದಿ ಕಳೆದರೂ', 'ನೀ ಹಿಂಗ ನೋಡಬ್ಯಾಡ ನನ್ನ', ಮತ್ತು 'ಕುರುಡು ಕಾಂಚಾಣ' ಹೀಗೆ ಒಂದೇ ಎರಡೇ?!.
ಬೇಂದ್ರೆಯವರು ಮಾತನಾಡಿದ್ದು, ಬರೆದದ್ದು ಎಲ್ಲವೂ ಕೂಡ ಒಂದು ರೀತಿಯಲ್ಲಿ ವೇದವಾಕ್ಯದಂತಿರುತ್ತದೆ. ಅವರ ಅನೇಕ ನುಡಿಮುತ್ತುಗಳು ಜೀವನದ ತತ್ವಜ್ಞಾನ, ಪ್ರೀತಿ, ಮತ್ತು ಸಾಂಸ್ಕೃತಿಕ ಆಳವನ್ನು ಪ್ರತಿಬಿಂಬಿಸುತ್ತವೆ. "ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ" ಎಂಬುದು ಅವರ ಅತ್ಯಂತ ಪ್ರಸಿದ್ಧ ತಾತ್ವಿಕ ಹೇಳಿಕೆ.
ಬೇಂದ್ರೆಯವರ ಕೆಲವು ಪ್ರಮುಖ ನುಡಿಮುತ್ತುಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ.
ಜೀವನ ತತ್ವದ ಬಗ್ಗೆ "ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ"ಎನ್ನುತ್ತಾರೆ.
ಸಮಯದ ಪ್ರಜ್ಞೆಯ ಬಗ್ಗೆ ಒಂದು ಕಡೆ "ಸಾವಿಗೆ ನಾ ಹೆದರುವುದಿಲ್ಲ. ಯಾಕೆಂದರೆ ನಾ ಇರೋತನಕ ಅದು ಬರೋದಿಲ್ಲ. ಅದು ಬಂದಾಗ ನಾ ಇರುವುದಿಲ್ಲ ಇಂದು ಧಾರ್ಮಿಕವಾಗಿ ನುಡಿಯುತ್ತಾರೆ.
ಆತ್ಮಜ್ಞಾನದ ಬಗ್ಗೆ ಇವರ ಮಾತು ಬೇರೆ ರೀತಿ ಆಗಿದೆ. "ನಿನ್ನೊಳಗೆ ನೀ ಹೊಕ್ಕು ನಿನ್ನ ನೀನೇ ಕಂಡು ನೀನು ನೀನಾಗು ಗೆಳೆಯ" ಎನ್ನುತ್ತಾರೆ.
ಬದುಕಿನ ಬಗ್ಗೆ ಮತ್ತೊಂದು ಕಡೆ ಹೇಳುತ್ತಾರೆ….."ಒಬ್ಬರು ಮತ್ತೊಬ್ಬರನ್ನು ತುಳಿದು ಬದುಕಬಾರದು, ತಿಳಿದು ಬದುಕಬೇಕು" ಎಂದು. ಇಷ್ಟೊಂದು ವಾಸ್ತವ ಅಲ್ಲವೇ.
ಸಾಧನೆಯ ಬಗ್ಗೆ "ಗೆಲ್ಲುತ್ತೇನೆ ಎಂದು ಬಂದವನು ಸೋಲುವುದಕ್ಕೂ ಸಿದ್ಧವಿರಬೇಕು ಎನ್ನುವ ಆಶಾ ಮನೋಭಾವವನ್ನು ತುಂಬುತ್ತಾರೆ.
ಸಂಸ್ಕೃತಿಯ ಬಗ್ಗೆ ಮತ್ತೊಂದು ಅರ್ಥಪೂರ್ಣ ಮಾತುಗಳ ನಾಡಿದ್ದಾರೆ. "ಪ್ರಕೃತಿಯ ಮೇಲೆ ಮಾನವ ಗೆಲುವು ಸಾಧಿಸಿದ ಕ್ರಮಬದ್ಧ ಕಥೆಯೇ ಸಂಸ್ಕೃತಿ ಎಂದು.

ಇನ್ನು ಅನುಭವದ ಬಗ್ಗೆ “ಕಾಯಿಸಿದ್ದರೆ ಮರಳು ಕೂಡ ಸುಗಂಧವುಳ್ಳದ್ದಾಗುತ್ತದೆ” ಪಾಸಿಟಿವ್ ಅಂಶಗಳನ್ನು ತುಂಬುತ್ತಾರೆ.
ಇಂತಹ ಅದೆಷ್ಟೋ ನುಡಿಮುತ್ತುಗಳು ಒಮ್ಮೆ ಓದಿ ಬಿಡುವಂತದ್ದಲ್ಲ. ಮತ್ತೆ ಮತ್ತೆ ಓದಿ ಅದರ ಅರ್ಥವನ್ನು ನಾನಾದರೂ ಅರಿಯಬೇಕು ನಾವು ಓದುವುದಲ್ಲದೆ ಮತ್ತೊಬ್ಬರಿಗೂ ಕೂಡ ತಿಳಿಸುವುದರ ಮೂಲಕ ಅವರಿಗೂ ಕೂಡ ಮಾರ್ಗದರ್ಶಕರಾಗಿ ಪ್ರೇರಕರಾಗಬೇಕು.
ಜೀವನದ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಲು ಅವರ ಕವನಗಳೇ ಅನೇಕ ಸಾಕ್ಷಿಯಾಗಿವೆ. ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಲು ಸ್ಫೂರ್ತಿ ನೀಡುತ್ತವೆ. ಆದುದರಿಂದಾಗಿ ಇವೆಲ್ಲಾ ಅಂಶಗಳನ್ನು ನಾವು ಗಮನಿಸುತ್ತ ಹೋದರೆ ನಮ್ಮ ಯುವಜನತೆ ಸಾಹಿತ್ಯವನ್ನು ಓದದೆ ಇರುವುದಕ್ಕೆ ಅನೇಕ ದುರಂತ ಅಂತ್ಯಗಳನ್ನು ಕಾಣುತ್ತಿದ್ದಾರೆ. ಅತಿಯಾದ ಆಸೆ, ಜೀವನವನ್ನು ಕಂಡುಕೊಂಡ ತಪ್ಪಾದ ರೀತಿ, ಎಲ್ಲವೂ ಕೂಡ ನಮ್ಮ ಕಣ್ಣೆದುರೇ ಸಿಗುತ್ತಿರುವಾಗ ಅದನ್ನ ಬಳಸಿಕೊಂಡು, ಉಳಿಸಿ ನಾವು ಕೂಡ ಮುಂದುವರಿಯಬಹುದು ಎನ್ನುವುದನ್ನು ಅರ್ಥ ಮಾಡಿಸಿದ್ದಾರೆ ಬೇಂದ್ರೆಯವರು.

ಆದರಿಂದಾಗಿ ಮೊದಲು ನಮ್ಮ ಯುವಜನತೆ ಸಾಹಿತ್ಯ ಓದನ್ನ ಮೈಗೂಡಿಸಿಕೊಳ್ಳಬೇಕು. ಕೇವಲ ಪಠ್ಯ ಸಂಬಂಧಿ ವಿಷಯಗಳನ್ನು ಮಾತ್ರ ಓದಿದರೆ ಸಾಲದು. ಸಮಯ ಸಿಕ್ಕಾಗಲಿಲ್ಲ ನಮ್ಮ ನಾಡಿನ ಕವಿಗಳ, ಲೇಖಕರ ಉತ್ಕೃಷ್ಟ ಸಾಹಿತ್ಯವನ್ನು ಓದಬೇಕು. ಅದು ಎಲ್ಲೋ ಒಂದು ಕಡೆ ನಮ್ಮನ್ನ ಪರಿಪಕ್ವತೆಯನ್ನಾಗಿ ಮಾಡುತ್ತದೆ. ನಮ್ಮ ನೋಡುವ ದೃಷ್ಟಿಯು ಕೂಡ ಬದಲಾಗುತ್ತದೆ. ಅದರಿಂದಾಗಿ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅದು ಮುಗಿಯದ ಅಕ್ಷಯ ಪಾತ್ರೆಯ ರೀತಿಯಲ್ಲಿ ತಮ್ಮ ಸಾಹಿತ್ಯ ಸುಧೆಯನ್ನು ಎಲ್ಲೆಡೆ ವಿಸ್ತರಿಸಿದ್ದಾರೆ. ನಮ್ಮ ಕನ್ನಡ ನಾಡು- ನುಡಿ ಇರುವವರೆಗೂ ಕೂಡ ಅವರ ಸಾಹಿತ್ಯ ಸುಧೆ ಶಾಶ್ವತವಾಗಿ ಉಳಿದಿರುತ್ತದೆ.

ಗ್ರಾಮ ಪಂಚಾಯಿತಿಯಿಂದ ನಗರ ಪ್ರದೇಶದವರೆಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಗ್ರಂಥಾಲಯಗಳು ಇವೆ. ಅಲ್ಲಿ ಎಲ್ಲಾ ಸಾಹಿತಿಗಳ ಪುಸ್ತಕಗಳು ಲಭ್ಯವಿರುತ್ತವೆ. ಅವನ್ನ ನಾವು ನಿಯಮಿತವಾಗಿ ಓದಬೇಕು. ಜೊತೆಗೆ ಸಮಯವನ್ನು ಕಾಲಹರಣ ಮಾಡದೆ ಮೊಬೈಲ್ ಇನ್ನಿತರ ಚಟುವಟಿಕೆಗಳಲ್ಲಿ ನಮ್ಮನ್ನ ತೊಡಗಿಸಿಕೊಳ್ಳದೆ. ಅದರಿಂದ ಹೊರಬಂದು ಸಾಹಿತ್ಯ ಕೃಷಿಯನ್ನು ಮಾಡುವಂತಾಗಲಿ.
ಬೇಂದ್ರೆಯವರು ಬದುಕಿದ್ದರೆ ಈಗ 130ನೇ ವರ್ಷವನ್ನು ಆಚರಿಸಿಕೊಳ್ಳುತ್ತಿದ್ದರು. ಅವರು ಇಂದು ನಮ್ಮೊಟ್ಟಿಗೆ ಇಲ್ಲದಿದ್ದರೂ ಅವರು ಸೃಷ್ಟಿಸಿರುವ ಸಾಹಿತ್ಯಕ್ಕೆ ಮಾತ್ರ ಎಂದೂ ಸಾವಿಲ್ಲ!.

ಶ್ರಾವಣಾ ಬಂತು ಕವನ

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು.

ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ.

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನ ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೇಹಗಲು|

ಶ್ರಾವಣಾ ಬಂತು ಹೊಳಿಗಳಿಗೆ| ಅದೆ ಶುಭಗಳಿಗೆ|
ಹೊಳಿಗೆ ಮತ್ತ ಮಳಿಗೆ|
ಆಗ್ಯೇದ ಲಗ್ನ| ಅದರಾಗ ಭೂಮಿ ಮಗ್ನ||

ಶ್ರಾವಣಾ ಬಂತು ಊರಿಗೆ| ಕೆರಿ ಕೇರಿಗೆ|
ಹೊಡೆದ ಝೂರಿಗೆ|
ಜೋಕಾಲಿ ಏರಿ| ಅಡರ್ಯಾವ ಮರಕ ಹಾರಿ|

ಶ್ರಾವಣಾ ಬಂತು ಮನಿಮನಿಗೆ| ಕೂಡಿ ದನಿದನಿಗೆ|
ಮನದ ನನಿಕೊನಿಕೊನಿಗೆ|
ಒಡೆದಾವ ಹಾಡೂ| ರಸ ಉಕ್ಕತಾವ ನೋಡು||
ಶ್ರಾವಣಾ ಬಂತು.

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಹಸಿರುಟ್ಟ ಬಸುರಿಯ ಹಾಂಗ|
ನೆಲಾ ಹೊಲಾ ಹ್ಯಾಂಗ|
ಅರಿಸಿನಾ ಒಡೆಧಾಂಗ|
ಹೊಮ್ಮತಾವ| ಬಂಗಾರ ಚಿಮ್ಮತಾವ||
ಗುಡ್ಡ ದುಡ್ಡ ಸ್ಥಾವರಲಿಂಗ|
ಅವಕ ಅಭ್ಯಂಗ|
ಎರಿತಾವನ್ನೊ ಹಾಂಗ|
ಕೂಡ್ಯಾವ ಮೋಡ| ಸುತ್ತೆಲ್ಲ ನೋಡ ನೋಡ||

ನಾಡೆಲ್ಲ ಏರಿಯ ವಾರಿ||
ಹರಿತಾವ ಝರಿ|
ಹಾಲಿನ ತೊರಿ|
ಈಗ ಯಾಕ| ನೆಲಕೆಲ್ಲ ಕುಡಿಸಲಾಕ||
ಶ್ರಾವಣಾ ಬಂತು.

ಜಗದ್ಗುರು ಹುಟ್ಟಿದ ಮಾಸ|
ಕಟ್ಟಿ ನೂರು ವೇಷ|
ಕೊಟ್ಟ ಸಂತೋಷ|
ಕುಣಿತದ ತಾನsದ ದಣಿತದ|

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು||

ಕಾಳಿಹುಂಡಿ ಶಿವಕುಮಾರ್, ಮೈಸೂರು.

Leave a Reply

Your email address will not be published. Required fields are marked *