ವಿವಿಧತೆಯಲ್ಲಿ ಏಕತೆ ಸಾಧಿಸಿ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗರು : ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಭಿಮತ

ಚಾಮರಾಜನಗರ: ಸ್ವಾಭಿಮಾನಿಗಳು, ಶಾಂತಿಪ್ರಿಯರಾದ ಕನ್ನಡಿಗರು ವೈವಿಧ್ಯಮಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಸಹಬಾಳ್ವೆ ನಡೆಸುತ್ತಿರುವುದು ಹೆಮ್ಮಯ ವಿಚಾರವಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂದೇಶ ನೀಡಿ ಅವರು ಮಾತನಾಡಿದರು.

ಕನ್ನಡನಾಡು ವಿಶಿಷ್ಟ ಸಂಸ್ಕøತಿ, ಆಚಾರ-ವಿಚಾರ, ಶಿಲ್ಪಕಲೆಗೆ ದೇಶದ ಗಮನ ಸೆಳೆದಿದೆ. ಕನ್ನಡಿಗರು ಎಲ್ಲಾ ವರ್ಗದವರೊಂದಿಗೆ ಸಹಬಾಳ್ವೆ ನಡೆಸುವ ಮನೋಭಾವ ಹೊಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ಕನ್ನಡನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ಎಲ್ಲಯೇ ನೆಲೆಸಿದ್ದರೂ ನಾಡು-ನುಡಿಯ ಘನತೆಯನ್ನು ಎತ್ತಿ ಹಿಡಿಯಬೇಕಾಗಿದೆ. ನಾಡು-ನುಡಿ ಉಳಿವಿಗಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ ಹಲವು ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಚಿವರು ತಿಳಿಸಿದರು. 

ಕವಿಗಳು, ಕಲಾವಿದರು ಕನ್ನಡ ಭಾಷೆ, ಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ಕನ್ನಡ ಭಾಷಾ ಸಾಹಿತ್ಯದ ಹೆಮ್ಮೆಯ ದ್ಯೋತಕವಾಗಿದೆ. ಸುಮಾರು 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಇನ್ನೂ ಗಟ್ಟಿಯಾಗಿ ಬೆಳೆಸುವ ಸದುದ್ದೇಶದಿಂದ ಸರ್ಕಾರವು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿದೆ. ಕನ್ನಡ ನಾಡು-ನುಡಿಗೆ ಚಾಮರಾಜನಗರ ಜಿಲ್ಲೆಯ ಕೊಡುಗೆಯು ಅಪಾರವಾಗಿದೆ. ಭಾಷಾ ವಿಷಯದಲ್ಲಿ ಚಾಮರಾಜನಗರವು ಕರ್ನಾಟಕಕ್ಕೆ ಭಾಷೆಯ ತೊಟ್ಟಿಲಾಗಿದೆ. ಪಶ್ಚಿಮದ ಮೂಲೆಹೊಳೆಯಿಂದ ಪೂರ್ವದ ಹೊಗೇನಕಲ್‍ವರೆಗಿನ ಪ್ರದೇಶಗಳಲ್ಲಿ ಗಟ್ಟಿಯಾದ ಕನ್ನಡ ಭಾಷೆಯನ್ನಾಡುವ ಜನಸಮೂಹವಿದೆ ಎಂದರು.

ಪವಾಡಪುರುಷರು ನಡೆದಾಡಿದ ಪುಣ್ಯಭೂಮಿಯಾಗಿರುವ ಚಾಮರಾಜನಗರ ಜಾನಪದ ಕಲೆಗಳ ತವರೂರು ಸಹ ಆಗಿದೆ. ಸರಿಸಾಟಿಯೇ ಇಲ್ಲದ ಜಿಲ್ಲೆಯ ಜಾನಪದ ಸಾಹಿತ್ಯಕ್ಕೆ ಮಲೆ ಮಹದೇಶ್ವರರು, ಮಂಟೇಸ್ವಾಮಿ, ಬಿಳಿಗಿರಿರಂಗ, ಸಿದ್ದಪ್ಪಾಜಿ ಮಹಾಕಾವ್ಯಗಳು ಜಿಲ್ಲೆಗೆ ಕೀರ್ತಿ ತಂದಿವೆ. ಕಂಸಾಳೆ. ಗೊರವರ ನೃತ್ಯ, ವೀರಭದ್ರ ನೃತ್ಯ, ತಂಬೂರಿ, ನೀಲಗಾರರು ಜಿಲ್ಲೆಯ ಸಾಂಸ್ಕøತಿಕ ಪರಂಪರೆಗೆ ಸಾಕ್ಷಿಯಾಗಿದ್ದಾರೆ. ಜಿಲ್ಲೆಯ ಸಾಹಿತಿಗಳು ಕನ್ನಡ ಕಾವ್ಯ, ಕಾದಂಬರಿ, ನಾಟಕ ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಲ್ಲಿಯ ಬುಡಕಟ್ಟು ಜನರ ಜಾನಪದ ಸಾಹಿತ್ಯ, ಸಂಗೀತ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. 

ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷರಾದ ಎಸ್. ಸುರೇಶ್, ಉಪಾಧ್ಯಕ್ಷರಾದ ಮಮತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *