ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು 165ನೇ ದಿನವೂ ಮುಂದುವರೆದ ಪ್ರತಿಭಟನೆ
ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು 165ನೇ ದಿನವಾದ ಇಂದು ಕೂಡಾ ತಮ್ಮ ಹೋರಾಟವನ್ನು ಮುಂದುವರೆಸಿದರು.
164ದಿನಗಳಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಇಂದು ಕೂಡಾ ಹೆದ್ದಾರಿಯನ್ನು ತಡೆದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಖಾಲಿ ಕೊಡಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕಕ್ಕೆ ಭೀಕರ ಬರಗಾಲ ಆವರಿಸುತ್ತಿದೆ. ಮಳೆ ಇಲ್ಲ, ಜಲಾಶಯಗಳು ಸಂಪೂರ್ಣ ಬತ್ತಿ ಹೋಗಿವೆ ಇಂತಹ ಸಂದರ್ಭದಲ್ಲೂ ನೀರು ಹರಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.
ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಇನ್ನೂ ನಾಟಕವಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಒಕ್ಕೂಟದ ವ್ಯವಸ್ಥೆಯ ಮೇಲೆ ಗೌರವ ಇದ್ದರೆ, ಈಗಲಾದರೂ ಮಧ್ಯ ಪ್ರವೇಶ ಮಾಡಿ ಕಾವೇರಿ ನಿರ್ವಹಣಾ ಮಂಡಳಿಯನ್ನು ವಜಾಗೊಳಿಸಬೇಕು. ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವ ಮೂಲಕ ರಾಜ್ಯದ ಜನತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಿಡಿಕಾರಿದರು.
ಎಲ್ಲಿಯವರೆಗೆ ನೀವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗು.ಪುರುಷೋತ್ತಮ್, ನಿಜಧ್ವನಿ ಗೋವಿಂದರಾಜ್, ಚಾ.ವೆಂ.ರಾಜ್ಗೋಪಾಲ್, ಚಾ.ರ.ಕುಮಾರ್, ವೀರಭದ್ರ, ಚಾ.ವೆಂ.ಲೋಕೇಶ್, ಸೋಮವಾರಪೇಟೆ ಭೂಪತಿ, ಸೋಮವಾರಪೇಟೆ ಮಂಜು, ವೆಂಕಟಯ್ಯನ ಛತ್ರದ ಸತೀಶ್, ನಂಜುಂಡಸ್ವಾಮಿ ಇನ್ನಿತರರಿದ್ದರು.