145ನೇ ದಿನವೂ ಕೂಡಾ ಮುಂದುವರೆದ ಕಾವೇರಿ ನೀರಿನ ಪ್ರತಿಭಟನೆ
ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಖಾಲಿ ಬಕೆಟ್‍ಗಳನ್ನು ಹಿಡಿದು 145ನೇ ದಿನವಾದ ಇಂದು ಕೂಡಾ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.
144ದಿನಗಳಿಂದಲೂ ನಿರಂತರವಾಗಿ ಪ್ರತಿನಿತ್ಯ ಪ್ರತಿಭಟನೆ ನಡೆಯುತ್ತಿದ್ದು, ಇಂದು ಕೂಡಾ ಹೆದ್ದಾರಿಯನ್ನು ತಡೆದು ಕರ್ನಾಟಕ ಸೇನಾ ಪಡೆದ ಕಾರ್ಯಕರ್ತರು ಖಾಲಿ ಬಕೆಟ್‍ಗಳನ್ನು ಪ್ರದರ್ಶಿಸುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ಎಲ್ಲರೂ ಕೂಡಾ ನಮ್ಮ ರಾಜ್ಯದ ಜನತೆ ಪಾಲಿಗೆ ಖಾಲಿ ಬಕೆಟ್‍ಗಳಿದ್ದಂತೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಜಲಾಶಯಗಳು ಬತ್ತಿಹೋಗುತ್ತಿವೆ. ಇಂತಹ ಸಂದರ್ಭದಲ್ಲೂ ತಮಿಳುನಾಡಿಗೆ ನೀರನ್ನು ಬಿಡುತ್ತಿರುವುದು ಅತ್ಯಂತಹ ಖಂಡನೀಯ. ತಕ್ಷಣವೇ ನೀರು ಬಿಡುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ಒಕ್ಕೂಟದ ವ್ಯವಸ್ಥೆಯ ಮೇಲೆ ಗೌರವ ಇದ್ದರೆ, ಈಗಲಾದರೂ ಮಧ್ಯ ಪ್ರವೇಶ ಮಾಡಿ ರಾಜ್ಯದ ಜನತೆಗೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡಬೇಕು. ಕಾವೇರಿ ನಿರ್ವಹಣಾ ಮಂಡಳಿಯನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲಿಯವರೆಗೆ ನೀವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಚಾ.ವೆಂ.ರಾಜ್‍ಗೋಪಾಲ್, ವೀರಭದ್ರ, ತಾಂಡವಮೂರ್ತಿ, ಗು.ಪುರುಷೋತ್ತಮ್, ಸೋಮವಾರಪೇಟೆ ಭೂಪತಿ, ಸೋಮವಾರಪೇಟೆ ಮಂಜು, ಮಹೇಶ್‍ಗೌಡ, ಚಾ.ಸಿ.ಸಿದ್ದರಾಜು, ನಂಜುಂಡಸ್ವಾಮಿ ಇನ್ನಿತರರಿದ್ದರು.