ಚಾಮರಾಜನಗರ: ಮುಂಬರುವ ಲೋಕಸಭಾ ಚುನವಣೆಯಲ್ಲಿ ಬಿಜೆಪಿ 400 ಸ್ಥಾನ ಪಡೆದು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಂಸದ ಅನಂತ್‍ಕುಮಾರ್ ಹೆಗಡೆಯನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರ ಹಾಗೂ ವಕೀಲ ಕೆ.ಎನ್. ಕೆಂಪರಾಜು ಒತ್ತಾಯಿಸಿದ್ದಾರೆ.
ಸಂವಿಧಾನ ಬದಲಾಯಿಸಲು 400 ಸ್ಥಾನ ಗೆಲ್ಲಬೇಕು ಎಂದು ಹೇಳಿಕೆ ಕೊಟ್ಟಿರುವ ಕ್ರಮ ಖಂಡನೀಯ. ಬಿಜೆಪಿ ಸರ್ಕಾರ ಸಂವಿಧಾನಕ್ಕೆ ಕೈ ಹಾಕಿದರೆ, ದಲಿತ ಸಮುದಾಯದಲ್ಲಿ ಮತ್ತೊಂದು ಕೋರೆಂಗಾವ್ ಯುದ್ದ ನಡೆಯುವುದಕ್ಕೂ ಸಿದ್ದವಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ಬದಲಾಯಿಸಿದರೆ ದೇಶದಲ್ಲಿ ರಕ್ತಪಾತ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿಗೆ ಇದು ಎಚ್ಚರಿಕೆಯ ಗಂಟೆಯು ಆಗಿದೆ ಎಂದು ಕಿಡಿಕಾರಿದರು.
ಬಿಜೆಪಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳಲು ಹುನ್ನಾರ ಮಾಡುತ್ತಿದೆ. ಬಿಜೆಪಿ ನಾಯಕರು, ಆರ್‍ಎಸ್‍ಎಸ್ ಮುಖಂಡರು ಅನಂತ್‍ಕುಮಾರ್ ಹೆಗಡೆ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಹೀಗಾಗಿ ದಲಿತರು, ಅಲ್ಪಸಂಖ್ಯಾತರು ಎಚ್ಚೆತ್ತು ಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಕೆಂಪರಾಜು ಮನವಿ ಮಾಡಿದ್ದಾರೆ.