ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಜನಮಾನಸದಲ್ಲಿ ಜಾಗೃತಿಗೊಳಿಸುವ ಕಾರ್ಯಕ್ರಮಗಳು ಇನ್ನೂ ಹೆಚ್ಚು ಮೂಡಿ ಬರಲಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ತಿಳಿಸಿದರು.
ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭೀಮ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ದಿಸೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ. ಗಾಯನದ ಮೂಲಕ ಅಂಬೇಡ್ಕರ್ ಅವರ ಕುರಿತು ತಿಳಿಸುವ ಇಂತಹ ಇನ್ನಷ್ಟು ವಿಭಿನ್ನ ಇತರೆ ಕಾರ್ಯಕ್ರಮಗಳೂ ಸಹ ಹೆಚ್ಚು ಆಗಬೇಕಿದೆ. ಮಹಾನ್ ಚೇತನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ವಿಚಾರ ತಿಳಿಸುವ ಕಾರ್ಯಗಳು ನಿರಂತರವಾಗಿರಲಿ ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಸ್ಪøಶ್ಯತೆ, ಅಸಮಾನತೆ ವಿರುದ್ದ ಹೋರಾಡಿದವರು. ಅವರ ವಿಚಾರಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅರ್ಥರ್ಪೂಣವಾಗಿದೆ ಎಂದರು.
ಅಂಬೇಡ್ಕರ್ ಅವರು ವ್ಯಕ್ತಿ ಅಲ್ಲ ದೊಡ್ಡ ಶಕ್ತಿ. ಶಿಕ್ಷಣ ಅಧ್ಯಯನದಿಂದ ಮೇರು ಎತ್ತರಕ್ಕೆ ಬೆಳೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ವಿಶ್ವ ಇರುವವರೆಗೂ ಶಾಶ್ವತವಾಗಿರಲಿದೆ. ಪ್ರಪಂಚದೆಲ್ಲೆಡೆ ಅಂಬೇಡ್ಕರ್ ಅವರ ಜ್ಞಾನದ ಬಗ್ಗೆ ಹೆಚ್ಚಿನ ಗೌರವ ಇದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನ ಪೀಠಿಕೆ ವಾಚಿಸಲಾಯಿತು. ಡಾ. ಬಿ.ಅರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ನಮಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ್, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರಾದ ರಂಗರಾಜು,ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೈಸೂರು ಜಿಲ್ಲೆಯ ಸರಗೂರಿನ ಡಾ. ಅಮ್ಮ ರಾಮಚಂದ್ರ ನೇತೃತ್ವದ ತಂಡದ ಕಲಾವಿದರು ಅಂಬೇಡ್ಕರ್ ಕುರಿತ ಗೀತ ಗಾಯನ ನಡೆಸಿಕೊಟ್ಟರು. 25ಕ್ಕೂ ಹೆಚ್ಚು ಗೀತೆಗಳನ್ನು ಅಮ್ಮ ರಾಮಚಂದ್ರ ಹಾಗೂ ಸಹಕಲಾವಿದರ ಕಂಠದಲ್ಲಿ ಮೂಡಿಬಂದು ನೆರೆದಿದ್ದ ಜನರ ಗಮನ ಸೆಳೆಯಿತು.