ನಾವು ಎಲ್ಲಿಯೇ ಹೋದರು ಸರ್ವೇ ಸಾಮಾನ್ಯವಾಗಿ ಕೇಳಿ ಬರುವ ಮಾತೆಂದರೆ ‘ಏನೋ ಮರಿ ಓದ್ತಾ ಇದ್ದೀಯ’ ಎಂದು ಕೇಳಿದಾಗ, ಆ ಮಗು ಶುಷ್ಕವಾಗಿಯೇ ‘ಅಂಕಲ್ ನಾನು ಇಂತಹ ತರಗತಿಯಲ್ಲಿ ಓದುತ್ತಿದ್ದೇನೆ’ ಎಂದು ಹೇಳಿದ ಕೂಡಲೇ ಪ್ರಶ್ನಿಸಿದವರ ಮುಂದಿನ ಪ್ರಶ್ನೆಯೇ ‘ನಿನ್ನ ಮುಂದಿನ ಗುರಿ ಏನು? ಪುಟ್ಟ; ಏನಾಗಬೇಕು ಅಂದುಕೊಂಡಿದ್ದೀಯ’ ಎಂದು ಕೇಳಿಯೇ ಕೇಳುತ್ತಾರೆ. ಅವರ ಬಲವಾದ ಹಂಬಲ ಏನೆಂದರೆ ಒಬ್ಬ ವ್ಯಕ್ತಿ ವ್ಯಕ್ತಿಯಾಗಿ ಬದುಕಿದರೆ ಆ ಬದುಕಿಗೆ ಬೆಲೆ ಎಂದಿಗೂ ಬರುವುದಿಲ್ಲ, ಆ ವ್ಯಕ್ತಿ ಒಂದು ಶಕ್ತಿಯಾಗಿ ಬೆಳೆಯಬೇಕು. ಆ ಶಕ್ತಿ ಎಲ್ಲಿ ಅಡಗಿದೆ ಎಂದರೆ ಆತನ ಆಲೋಚನಕ್ರಮ, ಮಾಡುವ ಕಾರ್ಯಗಳು, ಕಾಣುವ ಕನಸುಗಳಲ್ಲಿ ಎಂದು ಹೇಳಬಹುದು. ಈ ದೃಷ್ಟಿಯಿಂದ ನಮ್ಮ ಕಾರ್ಯಗಳು ಹೇಗಿರಬೇಕು, ಎಂತಹ ಕಾರ್ಯಗಳಿಂದ ನಮ್ಮ ವ್ಯಕ್ತಿತ್ವ ಅರಳಲು ಸಾಧ್ಯ, ಕಾರ್ಯಗಳ ಕುರಿತಾದ ಮುನ್ನೋಟದ ಅಗತ್ಯವಿದೆಯೇ ಎಂಬೆಲ್ಲಾ ಚಿಂತನೆಗಳ ಹಿನ್ನೆಲೆಗಳಿಂದ ಪ್ರಕೃತ ಲೇಖನವನ್ನು ತಮ್ಮ ಮುಂದೆ ಸಾದರಪಡಿಸುತ್ತಿದೇನೆ.
ಇವತ್ತಿನ ಒತ್ತಡದ ಬದುಕಿನಲ್ಲಿ ಬದುಕುತ್ತಿರುವ ನಾವುಗಳು ಏಕ ಪ್ರಕಾರಕ್ಕಿಂತ ಬಹು ಪ್ರಕಾರದಲ್ಲಿ ಗುರುತಿಸಿಕೊಂಡರೆ ಮಾತ್ರ ಜೀವನ ಮಾಡಲು ಸಾಧ್ಯ. ಆಗೆಂದ ಮಾತ್ರಕ್ಕೆ ಬಹು ಪ್ರಕಾರದಲ್ಲಿ ತೆರೆದುಕೊಂಡ ನಾವುಗಳು ಯಾವುದರಲ್ಲೂ ಯಶಸ್ವಿಯಾಗದೆ ಬದುಕನ್ನು ಒಂದು ಬಗೆಯಲ್ಲಿ ಡೋಲಾಯ ಮಾನವಾಗಿ ಮಾಡಿಕೊಳ್ಳುವುದು ಸರಿಯಾದ ಧೋರಣೆಯಲ್ಲ. ಅಕ್ಷರಾಭ್ಯಾಸ ಪ್ರಾರಂಭಿಸಿದ ದಿನಗಳಿಂದಲೇ ಒಂದು ಮಗುವಿಗೆ ನೀನು ಇದಾಗಬೇಕು, ನೀನು ಅದಾಗಬೇಕು ಎಂಬೆಲ್ಲ ಸೀಮಿತ ವ್ಯಾಪ್ತಿಗಳನ್ನು ಮಗುವಿನ ಮನಸ್ಸಿನ ಮೇಲೆ ಏರುತ್ತಾ ನೀನು ಇದೇ ಆಗಬೇಕು, ಆಗದಿದ್ದರೆ ನಿನ್ನ ಬದುಕೇ ಶೂನ್ಯಮಯ ಎಂದು ತೀರ್ಮಾನಕ್ಕೆ ಬರುವ ಅದೆಷ್ಟೋ ಪೋಷಕರು ಕಣ್ಣಿಗೆ ಬೀಳುತ್ತಾರೆ. ಅವರ ಮನೋಭಿಪ್ರಾಯ ಅವರಿಗೇ ಅದು ಸರಿ ಎಂದು ಕಂಡಿರಬಹುದು ಆದರೆ ಮಗುವಿನ ಮನಸ್ಸಿನಲ್ಲಿ ಇನ್ನೂ ಏನೋ ಆಗಬೇಕೆಂದು ತನಗೆ ಇನ್ನೂ ಏನೋ ಅಗಾಧವಾದ ಪ್ರತಿಭೆ ಇದೆ ಆದರೂ ಆ ಮಗುವಿನ ದೃಷ್ಟಿಕೋನಕ್ಕೆ ಕಣ್ಪಟ್ಟಿ ಕಟ್ಟಿ ಬಾವಿಯೊಳಗಣ ಕಪ್ಪೆ ಮಾಡುವ ಹುನ್ನಾರ ಎಂದಿಗೂ ಸಲ್ಲದಾಗುತ್ತದೆ. ಇಲ್ಲಿ ಒಂದು ಮಾತಂತು ಸತ್ಯ ಮಕ್ಕಳು ಏನಾಗಬೇಕೆಂದು ಬಯಸಿರುವರೋ ಹಾಗೂ ಅವರ ಗುರಿ ಎತ್ತ ಇದೆ ಎಂದು ಗಮ್ಯತೆಯಿಂದ ಗಮನಹರಿಸಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದೇ ಆದರೆ ಅವರಲ್ಲಿ ಹುದುಗಿರುವ ಕಾರ್ಯಕ್ಷಮತೆಯನ್ನು ಹೊರಕ್ಕೆ ಹೆಕ್ಕಿ ತೆಗೆಯಲು ಸಾಧ್ಯ.
ಪರೀಕ್ಷೆಯ ಅಬ್ಬರದ ಉಬ್ಬರವಿಳಿತ ಕಡಿಮೆಯಾಗುತ್ತಿದೆ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯದಲ್ಲಿದೆ, ರಾಜ್ಯಪಠ್ಯಕ್ರಮ ಹೊರತುಪಡಿಸಿ ಹತ್ತನೇ ತರಗತಿಯ ಪರೀಕ್ಷೆಗಳು ಮುಕ್ತಾಯವಾಗಿವೆ. ಈ ನಡುವೆ ರಜೆಯಲ್ಲಿ ಮಕ್ಕಳು ಮೆದುಳಿಗೆ ಒಂದಷ್ಟು ಓದು-ಬರಹದಿಂದ ವಿಶ್ರಾಂತಿ ನೀಡಿ ಆಟ-ಮನರಂಜನೆಯಂತಹ ಸಂಭ್ರಮ-ಖುಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿರಾತಂಕವಾಗಿ ಕಾಲವನ್ನು ಕಳೆಯುತ್ತಿದ್ದಾರೆ. ಪೋಷಕರು ಸಹ ಯಾವುದೇ ತರಹದ ಒತ್ತಡಗಳಿಲ್ಲದೆ ಹಲವು ಜಂಜಡಗಳಿಂದ ಸದ್ಯಕ್ಕೆ ಪಾರಾಗಿ ನಿಟ್ಟುಸಿರು ಬಿಡುತ್ತಾ ನಿಸೂರಾಗಿಯೇ ಮಕ್ಕಳ ಆಟಗಳಲ್ಲಿ ತಾವೂ ಮಕ್ಕಳಂತೆ ಪಾಲ್ಗೊಂಡು ಖುಷಿಯ ಸವಿರುಚಿಯನ್ನು ಅನುಭವಿಸುತ್ತಿದ್ದಾರೆ. ಇಷ್ಟೆಲ್ಲಾ ಇದ್ದಾಗಲು ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳಿಗೆ ಮುಂದಿನ ಹಂತದಲ್ಲಿ ಅವರ ಗುರಿಗಳೇನು? ಅವರ ಮುಂದಿನ ನಡೆ ಏನು?, ಯಾವ ಬಗೆಯ ಕೋರ್ಸ್ ಗಳು ಅತಿ ಅಗತ್ಯವಾಗಿ ಕೊಡಸಬೇಕಾಗಿದೆ, ಯಾವ ಕೋರ್ಸ್ ನಿಂದ ಯಾವ ಲಾಭ, ಯಾವುದಕ್ಕೆ ಬೇಡಿಕೆ ಹೆಚ್ಚಿದೆ, ಯಾವುದರಿಂದ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿದೆ ಎಂಬೆಲ್ಲ ಸದ್ವಿಚಾರಗಳ ಬಗ್ಗೆ ಗಾಢವಾಗಿ ಆಲೋಚಿಸಲು ಸಾಕಷ್ಟು ಅವಕಾಶವಿರುವುದರಿಂದ ಬಿಡುವಿನ ಈ ಅವಧಿಯಲ್ಲಿ ಅದರ ಕಡೆ ಗಮನಹರಿಸುವಂತೆ ಈ ಬರಹ ತಿಳಿಸುತ್ತದೆ. ತರಾತುರಿಯ ನಿರ್ಧಾರಗಳು ಮಕ್ಕಳ ಭವಿಷ್ಯದ ಬದುಕಿಗೆ ಕಲ್ಲುಹಾಕಿದಂತಾಗುತ್ತದೆ. ಈಗಾಗಲೇ ಇರಿಸಿಕೊಂಡಿರುವ ಗುರಿಗಳಿಗೆ ಗರಿಮೂಡಿಸುವ ಸಂದರ್ಭ ಈಗ ಎದುರಾಗಿದೆ ಅದರತ್ತ ಗಮನಹರಿಸಬೇಕು. ಕನಸುಗಳಿಗೆ ಕಾವು ಕೊಟ್ಟು ನನಸು ಮಾಡಬೇಕಿದೆ, ನನಸಾಗುವ ಕನಸುಗಳಿಂದ ಸಾಧನೆಯ ಮೆಟ್ಟಿಲೇರಬೇಕಿದೆ. ಇದೆಲ್ಲದರ ಅವಲೋಕನಕ್ಕೆ ಸಮಾಲೋಚನೆಗೆ ಬೇಕಾದ ಸರಿಯಾದ ಮಾರ್ಗದರ್ಶಿತ್ವ, ಅಗತ್ಯವಿರುವುದರಿಂದ ಚರ್ಚೆ ಮಾಡಿ ಸರಿಯಾದ ತೀರ್ಮಾನಕ್ಕೆ ಬರುವುದು ಅಗತ್ಯ.
ಈ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಗುರಿಯಿರಲೇ ಬೇಕು ಗುರಿಯಿಲ್ಲದ ಬದುಕಿಗೆ ಗರಿ ಮೂಡಲು ಸಾಧ್ಯವಿಲ್ಲ. ವ್ಯಕ್ತಿ ತನ್ನ ತನವನ್ನು ಉಳಿಸಿಕೊಂಡು ದೃಢವಾದ ಹೆಜ್ಜೆ ಇಟ್ಟು ಗುರಿಯ ಕಡೆ ಗಮನಹರಿಸಿದರೆ ಸಾಧನೆ ಮಾಡಲು ಸಾಧ್ಯ. ಸಾಧನೆಯು ಮಾಡುವ ಕಾರ್ಯವನ್ನು ಅತಿ ಆದರಿದಿಂದ ಭಿನ್ನವಾಗಿ-ವಿಭಿನ್ನವಾಗಿ ಅಭಿವ್ಯಕ್ತಿಸುವ ಮನೋಭಾವ ಎಂದು ಅರ್ಥ. ನಾವು ಎಲ್ಲಿ ಹೋದರು ಯಾರನ್ನೇ ಕೇಳಿದರೂ ಸಾಮಾನ್ಯವಾಗಿ ಹೇಳುವ ಅವರ ಮಾತು ಜೀವನದಲ್ಲಿ ಗುರಿ ಇರಬೇಕು, ಸಾಧನೆಯ ಗರಿ ಇರಬೇಕು, ಹಾಗಾದರೆ ಗುರಿ ಎಂದರೆ ಏನು? ಸಾಧನೆ ಎಂದರೇನು? ಸಾಧನೆ ಇಲ್ಲದೆ ಸತ್ತರೆ ಸಾವಿಗೂ ಅವಮಾನ, ಬದುಕಿದ್ದು ಏನೂ ಮಾಡದಿದ್ದರೆ ಬದುಕಿಗೂ ಅಪಮಾನ. ಗುರಿ ಇರಲಿ ಒಂದು ಅದು ಇಂದಲ್ಲದಿದ್ದರೂ ನಾಳೆಯಾದರೂ ಈಡೇರಿಕೆಯಾಗಲಿ ಎಂಬುದು ಅಭಿಲಾಷೆ. ಒಬ್ಬ ವ್ಯಕ್ತಿ ನಾಲ್ಕು ನಾಲ್ಕು ಅಡಿಗೆ ಒಂದೊಂದು ಹಳ್ಳ ತೋಡುತ್ತಿದ್ದ ಆ ವ್ಯಕ್ತಿಯನ್ನು ಹೀಗೇಕೆ ನಾಲ್ಕು ನಾಲ್ಕು ಅಡಿಗೆ ಈ ರೀತಿ ಚಿಕ್ಕ ಚಿಕ್ಕ ಹಳ್ಳ ತೋಡುತ್ತಿರುವೆ ಎಂದು ಪ್ರಶ್ನಿಸಿದಾಗ ಆತ ಹೇಳುವ ಮಾತು ನಮಗೆ ನಗು ತರಿಸುತ್ತದೆ. ನೋಡಿ ಇಲ್ಲಿ ನಾಲ್ಕು ನಾಲ್ಕು ಅಡಿಗೆ ನೂರಾರು ಹಳ್ಳಗಳನ್ನು ತೋಡಿಸಿದರೂ ಒಂದರಲ್ಲು ನೀರಿನ ಒರತೆಯೇ ಕಾಣುತ್ತಿಲ್ಲ ಎಂದಾಗ ಆ ವ್ಯಕ್ತಿ ನಕ್ಕು ಹೇಳಿದ ಸಕಲವನ್ನು ತಿಳಿದ ಜ್ಞಾನಿ ಹೇಳುತ್ತಾನೆ ‘ಅಯ್ಯೋ ಮೂಡಾತ್ಮನೇ ಈ ರೀತಿ ನೂರಾರು ಚಿಕ್ಕ ಚಿಕ್ಕ ಹಳ್ಳ ತೆಗೆಸುವ ಬದಲು ಒಂದೇ ಕಡೆ ಇನ್ನೊಂದಷ್ಟು ಆಳಕ್ಕೆ ಹಳ್ಳ ತೋಡಿದ್ದರೆ ಬಾವಿಯಾಗಿ ನೀರು ಬಂದೇ ಬರುತ್ತಿತ್ತು. ಈಗ ನೋಡು ಒಂದರಲ್ಲು ನೀರಿಲ್ಲ ಜೊತೆಗೆ ಶ್ರಮ-ಸಮಯ-ಹಣ ವ್ಯರ್ಥವಾಯಿತಲ್ಲ ಎಂದು ಹೇಳಿದಾಗ ಅಹ್ವಾನಿ ವ್ಯಕ್ತಿಗೆ ಅರಿವಿನ ಒರತೆ ಜಾಗೃತವಾಯಿತು.
ನಾವು ಜೀವನದಲ್ಲಿ ತಪ್ಪು ಮಾಡುತ್ತಿರುವುದು ಇಲ್ಲಿ ನೂರಾರು ಕಾರ್ಯವನ್ನು ಮಾಡಿ ದೊಡ್ಡದಾಗಿ ಏನೋ ಸಾಧನೆ ಮಾಡಿ ಬಿಡುತ್ತೇವೆ ಎಂದು ಹೇಳಿ ಹೊರಡುವ ನಾವುಗಳು ನೂದರಲ್ಲಿ ಒಂದು ಕ್ಷೇತ್ರವನ್ನು ಮುಟ್ಟದೆ ಕೇವಲ ಪ್ರಯತ್ನದಲ್ಲಿದಲ್ಲಿಯೇ ಪಡೆಯಬೇಕಾದ್ದನ್ನು ಪಡೆಯಿದೆ. ಸಾಧಿಸಬೇಕಾದ್ದನ್ನು ಸಾಧಿಸದೇ ಹೇಳ ಹೆಸರಿಲ್ಲದಂತೆಯೇ ಮರೆಯಾಗಿ ಬಿಡುತ್ತೇವೆ. ಹುಟ್ಟು ನಮ್ಮ ಕೈಯಲ್ಲಿ ಇಲ್ಲ. ಸಾವು ನಮ್ಮ ಕೈಯಲ್ಲಿ ಇಲ್ಲ ನಮ್ಮ ಕೈಯಲ್ಲಿ ಇರುವುದು ಕೇವಲ ಬದುಕು ಮಾತ್ರ, ಆ ಬದುಕಿಗೆ ಬೆಲೆ ಬರುವಂತಹ ಗುರಿವೊಂದು ಇರಬೇಕು. ಆ ಗುರಿ ಕಮರಿ ಹೋಗಲು ಬಿಡದೆ ಹಠದಿಂದಲಾದರೂ ಗೆದ್ದೇ ಗೆಲ್ಲಬೇಕು, ಗುರಿ ಮುಟ್ಟಬೇಕು. ಅದಕ್ಕೆ ಗುರಿ ಒಂದಿರಲಿ ಅದನ್ನು ಮುಟ್ಟುವ ದಾರಿಗಳು ನೂರಾದರೂ ಪರವಾಗಿಲ್ಲ ಎಂದು ಬಲ್ಲವರು ಹೇಳಿದ್ದಾರೆ.
ಸ್ವಾಮಿ ವಿವೇಕನಂದರು ಹೇಳುವಂತೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತಿನಂತೆ ನಮ್ಮ ಕಣ್ಣ ಮುಂದೆ ನಾವು ಏನಾಗಬೇಕು ಅಂದುಕೊಂಡಿದ್ದೇವೋ ಅದೊಂದೇ ಕಾಣಿಸಬೇಕು ಅನ್ಯ ವಿಚಾರಗಳ ಬಗ್ಗೆ ಎಂದು ಯೋಚಿಸಿದೆ ಸದಾ ಗುರಿಯೊಂದೇ ಮನದಲ್ಲಿ ಬೇರೂರಿದ್ದರೆ ಅದನ್ನು ಮುಟ್ಟುವುದು ಖಂಡಿತ ಸಾಧ್ಯ. ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ತಮ್ಮ ವಿದ್ಯೆಕೌಶಲ್ಯ ಮೆರೆವಾಗ ಕೆಳಗಿರುವ ಬಾವಿಯ ನೀರನ ಪ್ರತಿಬಿಂಬದಲ್ಲಿರುವ ಪಕ್ಷಿಯ ಕಣ್ಣಿಗೆ ಗುರಿ ಇಟ್ಟು ಬಾಣ ಪ್ರಯೋಗ ಮಾಡಬೇಕಿರುತ್ತದೆ.
ಗುರು ದ್ರೋಣಾಚಾರ್ಯರು ನಿಮಗೇನು ಕಾಣುತ್ತಿದೆ ಎಂದು ಪ್ರಶ್ನಿಸಿದಾಗ ಒಬ್ಬೊಬ್ಬರು ಪ್ರಯತ್ನಿಸಿ ನನಗೆ ಅದು ಕಾಣಿಸುತ್ತಿದೆ, ಇದು ಕಾಣಿಸುತ್ತಿದೆ ಎಂದು ಹೇಳಿ ಗುರಿಯಿಂದ ವಿಮುಖರಾಗಿದ್ದಾಗ ಅರ್ಜುನ ಮಾತ್ರ ತನಗೆ ಪಕ್ಷಿಯ ಕಣ್ಣು ಬಿಟ್ಟು ಮತ್ಯಾವುದು ಕಾಣುತ್ತಿಲ್ಲ ಎಂದು ಹೇಳಿ ಪಕ್ಷಿಯ ಕಣ್ಣಿಗೆ ಬಾಣ ಪ್ರಯೋಗ ಮಾಡಿಯೇ ಬಿಡುತ್ತಾನೆ ಇದರಿಂದ ಅರ್ಥವಾಗುತ್ತದೆ ಅರ್ಜುನನ ಗುರಿಯ ಮಹತ್ವ ಯಾವ ಬಗೆಯದು ಎಂದು. ಈ ಜಗತ್ತಿನಲ್ಲಿ ವ್ಯಕ್ತಿಯಿಂದ ಆಗದೆ ಇರುವ ಕೆಲಸ ಯಾವುದು ಇಲ್ಲ.
ಆದರೆ ಸೋಮಾರಿತನ, ಆಲಸ್ಯ, ನಾಳೆ ಮಾಡಿದರಾಯಿತು ಎಂಬ ಕೆಲಸಗಳನ್ನು ಮುಂದೂಡುವ ಮನೋಭಾವ ಗುರಿಗಳ ಈಡೇರಿಕೆಗೆ ಅಡ್ಡಿಯಾಗಿಸುತ್ತದೆ. ಎದ್ದು ನಡೆ-ಬಿದ್ದು ನಡೆ ಅನುಭವ ಹೊಂದುವುದು ಮನವು ಎಂದಿಗೂ ಇದ್ದಲೇ ಇರಬೇಡ, ನಡೆಯುತ್ತಿರುವ ಹಾದಿ ವ್ಯಾಧಿ ತರುವಂತಿದ್ದರೆ ಹೊಸ ಹಾದಿಯ ತುಳಿದು ನಾಂದಿ ಆಡಬೇಕು, ದಾರಿದೀಪ ಹುಡುಕಿದರೆ ದೊರಕದು ಮಾಗಿದಾಗ ಆಗುವ ಪ್ರಕ್ರಿಯೆ ಅದು. ದಾರಿ ಕಾಣದೆ ಇರುವಾಗ ದಾರಿದೀಪ ನಮಗೆ ಬೆಳಕು ತೋರುವ ಕೈದೀವಿಗೆ ಎಂದು ಹೇಳುತ್ತಾ ನಾಳೆ ಬದುಕಿದರಾಯಿತು, ನಾಡಿದ್ದು ಮಾಡಿದರಾಯಿತು ಎಂದೆನುತ ಕೈ ಕಟ್ಟಿ ಕೂರುವ ಜೀವಾತ್ಮರು, ಕಾಲಿದ್ದು ನಡೆಯದ ಕುಂಟರು, ಕಿವಿ ಇದ್ದು ಕೇಳದ ಕಿವುಡರು, ಕಣ್ಣಿದ್ದು ಕಾಣದ ಕುರುಡರು, ನನಗೆ ಮಾತ್ರವೇ ಏಕೆ ಈಗಾಯಿತು ಎಂದು ಕೊರಗುವ ಮನಸ್ಸುಗಳು ಹೂದೋಟದ ಬನದೊಳಗೆ ಕೊಳೆತು ನಾರುವ ಕಳೆಗಳೆಂದೆ ನನ್ನ ಭಾವನೆ. ಅರಳಿ ನಗುವ ಬನದೊಳಗೆ ಕಿತ್ತು ಬಿಸಾಡುವ ಕಳೆಯಾಗುವುದಕ್ಕಿಂತ ಕಳೆಗಟ್ಟಿದ ಹೂವಿನ ಪಕಳೆಯಾಗು ಎಂದು ಹೇಳಬೇಕು.
ಪ್ರಯತ್ನ ಪಡದೆ ಇದ್ದರೆ ನೂರಕ್ಕೆ ನೂರರಷ್ಟು ಸೋಲು ಖಚಿತ,
ಹೆಚ್ಚು ಹೆಚ್ಚು ಪರಿಶ್ರಮದಿಂದ ದುಡಿಯಲು
ತೊಡಗಲು ಅದೃಷ್ಟದ ಬಲ ಅಂಟುವುದು ನಿಶ್ಚಿತ,
ಸೋತಾಗ ಅಂಜಿಕೆ ಬೇಡ ಗುರಿಯೆಡೆಗೆ ಇರಲಿ ಕಣ್ಣು, ಗೆದ್ದಾಗ ಖುಷಿಯೂ ಬೇಡ ಬದುಕು ಅನುಗಾಲ ಮಾಗುವ ಹಣ್ಣು ಎಂದಳು ನನ್ನವ್ವ ಸಾಕವ್ವ

ಪರಮೇಶ ಕೆ. ಉತ್ತನಹಳ್ಳಿ,
ಕನ್ನಡ ಉಪನ್ಯಾಸಕ ಹಾಗೂ
ಹವ್ಯಾಸಿ ಬರಹಗಾರ, ಮೈಸೂರು.