
ಸಮಸ್ತರಿಗೂ 79ನೇ "ಸ್ವಾತಂತ್ರ್ಯ ದಿನಾಚರಣೆ"ಯ ಹಾರ್ದಿಕ ಶುಭಾಶಯಗಳು. ಈ "ಸ್ವಾತಂತ್ರ್ಯ" ಎನ್ನುವ ಪದವೇ ನಮಗೆ ಮೈಮನಗಳಿಗೆ ಒಂದು ರೀತಿಯಲ್ಲಿ ಪುಳಕ ನೀಡುತ್ತದೆ!.
ಏಕೆಂದರೆ ಈ ಸ್ವಾತಂತ್ರ್ಯ ಎನ್ನುವ ಮೂರಕ್ಷರವನ್ನ ನಮಗೆ ಬಂದಿರುವುದಕ್ಕೆ ಒಂದು ದೊಡ್ಡ ಇತಿಹಾಸವೇ ಇದೆ. ಆ ಇತಿಹಾಸದಲ್ಲಿ ಅನೇಕ ವೀರ ಸ್ವಾತಂತ್ರ್ಯ ಹೋರಾಟಗಾರರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ತಮ್ಮ ತನು-ಮನವನ್ನೆಲ್ಲ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಸ್ವಾತಂತ್ರ್ಯ ಎನ್ನುವುದು ಕೇವಲ ಒಂದು ದಿನ, ಒಂದು ವರ್ಷದಲ್ಲಿ ಬಂದಿರುವುದಿಲ್ಲ. ದೀರ್ಘ ವರ್ಷ ಬ್ರಿಟಿಷರೊಂದಿಗೆ ಹೋರಾಡಿ, ಅಲ್ಲಿ ಅನೇಕ ಸೋಲು- ಗೆಲುವುಗಳನ್ನ ಕಂಡು, ಸೋತಾಗ ಕುಗ್ಗದೆ..... ಗೆದ್ದಾಗ ಹಿಗ್ಗದೆ..... ಎಲ್ಲವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು, ಯೋಜನಾ ಬದ್ಧ ದಂಗೆಗಳನ್ನ, ಕಾರ್ಯಾಚರಣೆಗಳನ್ನು ಮಾಡಿ ನಂತರ ಅದರಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿ ಬ್ರಿಟಿಷರನ್ನ ಭಾರತದಿಂದ ಹೊರಗೋಡಿಸಿದರು.
ನಾವು ಇತಿಹಾಸದ ಪುಟಗಳಿಂದಲೂ ಕೂಡ ಸ್ವಾತಂತ್ರ್ಯ ಹೋರಾಟದ ಪ್ರತಿ ಅಧ್ಯಾಯಗಳನ್ನು ಓದುತ್ತಾ ಹೋದರೆ ಮೈ-ಮನಗಳು ರೋಮಾಂಚನಗೊಳ್ಳುತ್ತವೆ!.
ಏಕೆಂದರೆ ಆ ಹೋರಾಟದಲ್ಲಿ ಎಷ್ಟೊಂದು ಶ್ರಮವಿತ್ತು, ಎಷ್ಟೊಂದು ಕಷ್ಟವಿತ್ತು ಎನ್ನುವುದರ ಅರಿವಾಗುತ್ತದೆ. "ಹನಿ ಹನಿ ಗೂಡಿದರೆ ಹಳ್ಳ..." ಎನ್ನುವಂತೆ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರು ಕೂಡ ಒಂದೊಂದು ಯೋಚನೆ, ಯೋಜನೆ ಮೂಲಕ ನಾವು ಇವತ್ತು ಸಂಪೂರ್ಣವಾಗಿ ಪಡೆಯುತ್ತಿರುವ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಇದೊಂದು ಹೆಮ್ಮೆಯ ವಿಷಯ.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ ಅಪ್ರತಿಮವಾದದ್ದು. ಇದು 1857 ರಿಂದ 1947 ರ ಆಗಸ್ಟ್ 15 ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ ವಾಗಿರುವಂಥದ್ದು.
ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆಯುತ್ತಾ ಹೋದರೆ ಮಾತನಾಡುತ್ತ ಹೋದರೆ ವರ್ಷಗಳು ಸಾಲದು!. 1757 ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ. ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು. ಅಲ್ಪ ಕಾಲಾನಂತರ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವ್‍ನ ಉಪಾಯಗಳಿಂದ ವಂಗದ ಅಧಿಕಾರವನ್ನು ತನ್ನ ಕೈವಶಮಾಡಿಕೊಂಡಿತು.
ಅಲ್ಲಿಂದ ಮೊದಲ್ಗೊಂಡು ಬಹುಬೇಗ ತಮ್ಮ ರಾಜಕೀಯ ನೀತಿಗಳಿಂದ ಭಾರತದ ಬಹುಭಾಗವನ್ನು ಅವರು ಕೈವಶ ಮಾಡಿಕೊಂಡರು. ಪ್ಲಾಸೀ ಕದನದಿಂದ ಸರಿಯಾಗಿ ನೂರು ವರ್ಷಗಳ ನಂತರ ಅಂದರೆ 1857 ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ( ಸಿಪಾಯಿ ದಂಗೆ) ಎಲ್ಲರಲ್ಲೂ ಒಂದು ರೀತಿಯಲ್ಲಿ ಕ್ರಾಂತಿಯನ್ನು ಉಂಟು ಮಾಡಿತು. ಎಷ್ಟು ದಿನ ಬ್ರಿಟಿಷರ ದೌರ್ಜನ್ಯವನ್ನು ಸಹಿಸಿಕೊಂಡು ನಾವು ಇರಬೇಕು? ಎನ್ನುವ ಮನೋಭಾವ ಎಲ್ಲಾ ಹೋರಾಟಗಾರರಲ್ಲೂ ಕೂಡ ಕಂಡು ಬಂದಿತು.
ಆಂಗ್ಲರ ದಬ್ಬಾಳಿಕೆಯ ವಿರುದ್ಧ ಎಲ್ಲರೂ ಸೆಟದೆದ್ದರು. ಅಲ್ಲದೇ ಸಿಪಾಯಿಗಳೂ, ರಾಜ್ಯಗಳೂ ತಿರುಗಿಬಿದ್ದು ಪ್ರತಿಭಟಿಸಿದವಾದರೂ, ವ್ಯವಸ್ಥಿತವಾದ ಯೋಜನೆಯಿಲ್ಲದಿದ್ದರಿಂದ ದಂಗೆ ಹತ್ತಿಕ್ಕಲ್ಪಟ್ಟಿತು. ಕೊನೆಗೂ ಹೋರಾಟ ನಡೆಯುತ್ತಲೇ ಇತ್ತು. ಸಿಪಾಯಿ ದಂಗೆ ವಿಫಲವಾದ ಮೇಲೆ, ಭಾರತದ ಪ್ರತಿಯೊಬ್ಬ ಹೋರಾಟಗಾರರು, ವಿದ್ಯಾವಂತರು, ಸಾರ್ವಜನಿಕರು ಎಚ್ಚೆತ್ತುಕೊಂಡರು ಹಾಗೂ ಎಲ್ಲೆಡೆ ಈ ಬಗ್ಗೆ ಕ್ರಾಂತಿ ಉಂಟಾಯಿತು.
ಬ್ರಿಟಿಷರಿಗೆ ಗೊತ್ತಿಲ್ಲದ ರೀತಿಯಲ್ಲಿ ಒಳಗೊಳಗೆ ಸ್ವಾತಂತ್ರ್ಯದ ಹೋರಾಟದ ಹೆಜ್ಜೆ ಗುರುತುಗಳು ಮೂಡಿದವು!. ಪ್ರಮುಖವಾಗಿ ರಾಜಕೀಯವಾಗಿ ಸಂಘಟಿತರಾದರು. 1885ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲು ಬ್ರಿಟಿಷ್ ಸಾಮ್ರಾಜ್ಯದ ಅಧೀನತೆಯಲ್ಲಿಯೇ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು.
20ನೇ ಶತಮಾನದ ಪ್ರಾರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗಿ, ಬಾಲ ಗಂಗಾಂಧರ ತಿಲಕ ಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರನ್ನು ನಾವು ನೆನಪಿಸಿಕೊಳ್ಳಲೇಬೇಕು ಇವರ ಸಾರಥ್ಯದಲ್ಲಿ ನಮ್ಮ ದೇಶದ ಇತರ ಹೋರಾಟಗಾರರು ರಾಷ್ಟ್ರ ನಾಯಕರು ಒಂದಾದರು ಎಲ್ಲರಲ್ಲೂ ಕೂಡ ಒಂದು ರೀತಿಯಲ್ಲಿ ಸ್ಪೂರ್ತಿಯ ಸೆಲೆಯುಂಟಾಯಿತು ನಾವು ಸ್ವಾತಂತ್ರ್ಯವನ್ನು ಪಡೆಯಲೇಬೇಕು ಎನ್ನುವ ಅಚಲ ವಿಸ್ವಾಸ ಮೂಡಿತು. 1918 ಹಾಗೂ 1922ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು.
ಭಾರತದ ಎಲ್ಲೆಡೆಯಿಂದ ಹಂತ ಹಂತವಾಗಿ ಅನೇಕ ಜನ ಈ ಆಂದೋಲನದಲ್ಲಿ ಭಾಗಿಗಳಾದರು. 1930ರಲ್ಲಿ ಪೂರ್ಣ ಸ್ವರಾಜ್ಯಕ್ಕೆ ಬದ್ಧವಾದ ಕಾಂಗ್ರೆಸ್ 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಒತ್ತಾಯದ ಬೇಡಿಕೆಯನ್ನು ಮಾಡಿತು. ಬ್ರಿಟಿಷ ಆಡಳಿತವನ್ನು ಕೊನೆಗೊಳಿಸಲು 1942ರಲ್ಲಿ ಸುಭಾಷಚಂದ್ರ ಬೋಸ್ರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಈ ಹೋರಾಟದಲ್ಲಿ ಅನೇಕ ನಿರಂತರ ನೋವುಗಳು, ಸಾವುಗಳು ಬಂದರೂ ಕೂಡ ನಮ್ಮ ಹೋರಾಟಗಾರರು ಧೃತಿಗೆಡಲಿಲ್ಲ ಅದು ಮುಖ್ಯವಾಗುತ್ತದೆ.
ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತ ಹಾಗೂ ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ, ಭಾರತವು 15 ಆಗಸ್ಟ 1947 ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ವನ್ನು ಪಡೆಯಿತು. ಈ ಸಂದರ್ಭ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಸುದಿನವಾಯಿತು.
ನಮಗೆ ಸ್ವಾತಂತ್ರ್ಯ ಬಂದು ಈಗ 79ವರ್ಷಗಳು ಸಂದಿವೆ. ಈ ರಾಷ್ಟ್ರೀಯ ಹಬ್ಬದ ಸಂಭ್ರಮಾಚರಣೆಯಲ್ಲಿ ಇಡೀ ನಾಡಿಗೆ ನಾಡೇ ಸಂಭ್ರಮ ಪಡುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ದುಡಿದ, ಮಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡ ನೆನಪಿಸಿಕೊಳ್ಳಲೇ ಬೇಕಾಗಿದೆ.
ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳು ಕೂಡ ಒಂದೊಂದು ಕಥೆಯನ್ನು ಹೇಳುತ್ತವೆ. ನಮಗೆ ಈ ಸಂದರ್ಭದಲ್ಲಿ ಬಾಲ್ಯದ ದಿನಗಳು ನೆನಪಾಗುತ್ತವೆ!. ನಮಗೆ ಒಂದನೇ ತರಗತಿಯಿಂದ, ಎಸ್ ಎಸ್ ಎಲ್ ಸಿ ವರೆಗೂ ಕೂಡ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಗಳು ಪಠ್ಯಪುಸ್ತಕದಲ್ಲಿ ಅವಲಂಬಿತವಾಗಿದ್ದವು. ಕಾಲೇಜು ಹಂತದಲ್ಲಿ ಮಹಾಪುರುಷರ ದೀರ್ಘ ಚರಿತ್ರೆಗಳು ಕೂಡ ಪಠ್ಯಪುಸ್ತಕವಾದವು. ಈಗಲೂ ಕೂಡ ಇವೆ ಅವನ್ನೆಲ್ಲಾ ನಾವು ಓದುತ್ತಿದ್ದರೆ ನಮಗೆ ರಾಷ್ಟ್ರಪ್ರೇಮ ನಮಗೆ ಗೊತ್ತಾಗದ ರೀತಿಯಲ್ಲಿ ಮೂಡುತ್ತಿತ್ತು.
ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಬಂತೆಂದರೆ ನಾವು ಒಂದು ವಾರದಿಂದಲೂ ಕೂಡ ಶಾಲೆಯಲ್ಲಿ ತಯಾರಾಗುತ್ತಿದ್ದೆವು. ಶಾಲಾ ಮೈದಾನವನ್ನು ಚೊಕ್ಕಟ್ಟವಾಗಿ ಸುತ್ತಿದ್ದೆವು. ನಮ್ಮ ಶಾಲೆಯಲ್ಲಿ ಗುರುಗಳು ಎಲ್ಲರಿಗೂ ಒಂದೊಂದು ಕೆಲಸವನ್ನು ವಹಿಸುತ್ತಿದ್ದರು. ಅದರಂತೆಯೇ ನಾವು ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬೇಕಾಗಿತ್ತು. ಇಲ್ಲದಿದ್ದರೆ ಶಿಕ್ಷೆಯು ನಮಗೆ ಕಟ್ಟಿಟ್ಟ ಬುತ್ತಿಯಾಗಿತ್ತು!. ಅದರಲ್ಲೂ ಆಗಸ್ಟ್ 14ರ ರಾತ್ರಿ ನಮಗೆ ನಿದ್ದೆ ಬರುತ್ತಿರಲಿಲ್ಲ!. ನಾವು ಅಂದು ಬೆಳಿಗ್ಗೆ ಬೇಗನೆ ಎದ್ದು ನಮ್ಮ ಮನೆಯಲ್ಲಿ ದನಕರುಗಳ ಕೊಟ್ಟಿಗೆಯನ್ನ ಸ್ವಚ್ಛಗೊಳಿಸಿ, ನಾವು ಕೂಡ ಸ್ನಾನ ಮಾಡಿ, ಹಿಂದಿನ ದಿನವೇ ಬಿಳಿಯ ಸಮವಸ್ತ್ರಗಳನ್ನು ಹಾಕಿಕೊಳ್ಳಬೇಕಾಗಿತ್ತು, ಸ್ವಲ್ಪ ಬಟ್ಟೆ ಕೊಳೆಯಾದರೂ ಕೂಡ ನಮಗೆ ಶಿಕ್ಷೆ ನೀಡುತ್ತಿದ್ದರು. ಅದರಿಂದಾಗಿ ನಾವು ಸಂಪೂರ್ಣವಾಗಿ ತಯಾರಾಗುತ್ತಿದ್ದೆವು.
ನಮ್ಮ ಬಾವುಟಕ್ಕೆ ಹಿಂದಿನ ದಿನವೇ ಬೀರುವಿನಿಂದ ತೆಗೆದು ಅದನ್ನು ಗೌರವಿತವಾಗಿ ಒಂದೆಡೆ ಇಟ್ಟು, ಆ ಬಾವುಟದೊಳಗೆ ಹೂವನ್ನು ಕೂಡ ಹಾಕುತ್ತಿದ್ದೆವು. ಈಗ ಬಾವುಟದ ಒಳಗಡೆ ಹೂ ಹಾಕಿ ಹಾರಿಸುವ ಒಂದು ಸಂಪ್ರದಾಯ ಇಲ್ಲವಾಗಿದೆ.
ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಊರಿನ ಮುಖಂಡರು, ಶಾಲಾ ಸಮಿತಿಯ ಅಧ್ಯಕ್ಷರು ಎಲ್ಲರೂ ಕೂಡ ಒಟ್ಟಾಗಿ ಭಾಗವಹಿಸುತ್ತಿದ್ದೆವು. ಧ್ವಜಾರೋಹಣ ಸಮಯ ಹತ್ತಿರ ಬರುತ್ತಿದ್ದಂತೆ ನಮಗೆಲ್ಲರೂ ಒಂದು ರೀತಿಯಲ್ಲಿ ರೋಮಾಂಚನ. ಏಕೆಂದರೆ ಬಾವುಟವನ್ನು ಹಾರಿಸುವಾಗ ಅದು ಗಾಳಿಗೆ ಆಕಾಶದಲ್ಲಿ ಎಡ, ಬಲಕ್ಕೆ ಹಾರಾಟ ಮಾಡುತ್ತಿದ್ದರೆ ಕಣ್ಣು ಮುಚ್ಚದಂತೆ ನೋಡುತ್ತಿದ್ದೆವು.
ನಮ್ಮ ಶಾಲೆಯ ದೈಹಿಕ ಶಿಕ್ಷಕರು ಮೊದಲೇ ನಮ್ಮನ್ನೆಲ್ಲ ಪೂರ್ವ ತಯಾರಿ ಮಾಡಿದ್ದರು. ಶಾಲಾ ಮೈದಾನದ ಸುತ್ತ ಮಾರ್ಚ್ ಫಾಸ್ಟ್ ನಡೆಯುತ್ತಿತ್ತು. ಧ್ವಜಾರೋಹಣಕ್ಕೆ ಮುಂಚಿತವಾಗಿ ಎಲ್ಲರೂ ಕೂಡ ಸರತಿಯ ಸಾಲಿನಲ್ಲಿ ನಿಲ್ಲುತ್ತಿದ್ದೆವು. ಧ್ವಜಾರೋಹಣ ಮಾಡಿದ ನಂತರ ಬಾವುಟದೊಳಗೆ ಹಾಕಿದ್ದ ಹೂವು ಬಿಡಿಬಿಡಿಯಾಗಿ ಮೇಲಿಂದ ಕೆಳಗಡೆ ಬೀಳುವಾಗ ಒಂದು ರೀತಿಯಲ್ಲಿ ಖುಷಿಯಾಗುತ್ತಿತ್ತು. ಜೈ ಹಿಂದ್ ಎಂದು ಎಲ್ಲರೂ ನಮ್ಮ ಬಲಗೈಯನ್ನು ಹಣೆಯವರಿಗೆ ಎತ್ತಿ, ಗೌರವ ಸಲ್ಲಿಸುತ್ತಿದ್ದೆವು. ಜನಗಣಮನ ಪ್ರಾರಂಭವಾಗುತ್ತಿತ್ತು. ಎಲ್ಲರೂ ಕೂಡ ರಾಷ್ಟ್ರಗೀತೆಯನ್ನು ರಾಗವಾಗಿ ಗೌರವದಿಂದ ಹಾಡುತ್ತಿದ್ದೆವು. ಈಗಂತೂ ಯಾರು ಕೂಡ ರಾಷ್ಟ್ರಗೀತೆಯನ್ನೇ ಹಾಡುವುದಿಲ್ಲ. ಎಲ್ಲವೂ ಕೂಡ ಒಂದು ರೀತಿಯಲ್ಲಿ ಯಾಂತ್ರಿಕವಾಗುತ್ತಿದೆ. ಸುಗಮ ಸಂಗೀತದವರು ಒಮ್ಮೊಮ್ಮೆ ಹಾಡುತ್ತಾರೆ. ಇಲ್ಲದಿದ್ದರೆ ರೆಕಾರ್ಡ್ ಗೀತೆಗಳನ್ನ ಹಾಕಿ ಬಿಡುತ್ತಾರೆ.
ಈಗಲೂ ಕೂಡ ಯಾವುದೇ ಸರ್ಕಾರಿ ಕಾರ್ಯಕ್ರಮ, ಶಾಲಾ ಕಾಲೇಜು ಕಾರ್ಯಕ್ರಮದ ಪ್ರಾರಂಭದಲ್ಲಿ ನಾಡಗೀತೆ ಜಯ ಭಾರತ ಜನನಿಯ ತನುಜಾತೆ.. ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವುದು ಉಂಟು. ಧ್ವಜಾರೋಹಣದ ನಂತರ ಎಲ್ಲರಿಗೂ ಸಿಹಿ ಹಂಚಿಕೆಯಾಗುತ್ತಿತ್ತು . ಒಂದು ಕಡೆ ಶಾಲಾ ಹಂತದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆದರೆ ತಾಲೂಕಿನಲ್ಲಿ ಇರುವ ಶಾಲೆಗಳು ತಮ್ಮ ಶಾಲೆಯಲ್ಲಿ ಧ್ವಜಾರೋಹಣ ನಡೆಸಿದ ನಂತರ ತಾಲೂಕು ಅಥವಾ ಹೋಬಳಿ ಕೇಂದ್ರದಲ್ಲಿ ಇರುವ ಸ್ಟೇಡಿಯಂ ಗಳಲ್ಲಿ ಮಾರ್ಚ್ ಫಸ್ಟ್ ನಡೆಯುತ್ತಿತ್ತು.
ಜೊತೆಗೆ ಅಲ್ಲಿ ಎಲ್ಲಾ ಶಾಲೆಗಳ ಮಕ್ಕಳು ಒಟ್ಟಾಗಿ ಸೇರುತ್ತಿದ್ದೆವು. ಪ್ರತಿಯೊಂದು ಶಾಲೆಯಲ್ಲಿ ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಲ್ಲದೆ ನಮ್ಮ ರಾಷ್ಟ್ರವನ್ನಾಳಿದ ವೀರ ಮಹಿಳೆಯರ, ಪುರುಷರ ವೇಷಭೂಷಣಗಳೊಂದಿಗೆ ನಾವು ಆ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಬೇಕಾಗಿತ್ತು. ಹಲವು ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಕೂಡ ನೆನಪಿನ ಕಾಣಿಕೆಗಳನ್ನು ನೀಡುತ್ತಿದ್ದರು. ಜೊತೆಗೆ ಬಹುಮಾನಗಳು ಕೂಡ ಸಿಗುತ್ತಿದ್ದವು.
ಮುಖ್ಯವಾಗಿ ನಮ್ಮ ಯುವಜನತೆ ನಮ್ಮ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟದ ಪ್ರತಿಯೊಬ್ಬರ ಜೀವನ ಚರಿತ್ರೆಗಳನ್ನು ಓದಿ ಅಲ್ಲಿನ ಹಲವು ಅಂಶಗಳನ್ನು ತಮ್ಮಲ್ಲೂ ಕೂಡ ಮೈಗೂಡಿಸಿಕೊಳ್ಳಬೇಕು.
ನಮ್ಮ ದೇಶದ ಹಿತಕ್ಕಾಗಿ ಏನಾದರೊoದು ಸೇವೆಯನ್ನು ಮಾಡಲೇಬೇಕು. "ದೇಶ ದೇಶದೊಳಗೆ ನಮ್ಮ ಭಾರತ ಚಂದ...!" ಎನ್ನುವ ಮಾತು ಇದೆ.
ವಿವಿಧತೆಯಲ್ಲಿ ಏಕತೆ ಎನ್ನುವಂತೆ ನಮ್ಮ ಭಾರತದಲ್ಲಿ ಎಲ್ಲಾ ಸಂಪತ್ತುಗಳು ಕೂಡ ಹೇರಳವಾಗಿ ಸಿಗುತ್ತವೆ. ಆ ಸಂಪತ್ತುಗಳನ್ನ ನಾವು ವ್ಯರ್ಥ ಮಾಡದೆ, ಸಮರ್ಪಕವಾಗಿ ಬಳಸಿಕೊಳ್ಳಬೇಕಾಗುತ್ತದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ನಮ್ಮ ಮನೆ- ಮನದಲ್ಲೂ ಕೂಡ ರಾಷ್ಟ್ರ ನಾಯಕರನ್ನು ಸದಾ ಸ್ಮರಿಸಬೇಕು. ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬೆರೆದಂತೆ ನೋಡಿಕೊಳ್ಳಬೇಕು.
ನಮ್ಮ ಭಾರತ ಸಂವಿಧಾನದಲ್ಲಿ ವಿಶೇಷವಾಗಿ ಹಕ್ಕುಗಳು ಮತ್ತು ಕರ್ತವ್ಯಗಳು ಕೂಡ ಇವೆ. ಅನೇಕ ಸ್ವತಂತ್ರವೂ ಕೂಡ ಇದೆ. ನಾವು ಹಕ್ಕುಗಳನ್ನು ಚಲಾಯಿಸಿ, ಕರ್ತವ್ಯವನ್ನು ಮರೆಯುತ್ತಿದ್ದೇವೆ.
ಓ ಭಾರತ ಬಾಂಧವ, ನೆನೆ ನೆನೆ ಆ ದಿನವಾ......!"- ಎನ್ನುವ "ಮಾಡಿ ಮಾಡಿದವರು"- ಚಿತ್ರದ ಗೀತೆಯೂ ಕೂಡ ಈ ಸಂದರ್ಭದಲ್ಲಿ ನೆನಪಾಗುತ್ತದೆ.
ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಸಂಬಂಧಪಟ್ಟಂತೆ ಅನೇಕ ಚಲನಚಿತ್ರಗಳು ಕೂಡ ಬಂದಿವೆ. ಜೊತೆಗೆ ಅನೇಕ ಚಲನಚಿತ್ರ ಗೀತೆಗಳು, ಭಾವಗೀತೆಗಳು, ಭಕ್ತಿಗೀತೆಗಳು ಕೂಡ ನಮ್ಮ ದೇಶದ ಒಳ- ಹೊರಗಿನ ಸಂಪೂರ್ಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಕವಿಗಳ ಲೇಖನಿಯಿಂದ ವ್ಯಕ್ತವಾಗಿದೆ.
ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು.
-ಕಾಳಿಹುಂಡಿ ಶಿವಕುಮಾರ್, ಮೈಸೂರು.