ಬಯಲು ಶೌಚ ಮುಕ್ತ ಮಾದರಿ ಕೋಡಿಮೋಳೆ ಗ್ರಾಮವನ್ನಾಗಿಸಲು ಪಣ ತೊಡೋಣ : ಸಿಪಿಐ ಶಿವನಂಜಶೆಟ್ಟಿ

ಥೈಲ್ಯಾಂಡ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನಪದಕ ಪುರಸ್ಕøತ ಶಿವನಂಜಶೆಟ್ಟರಿಗೆ ಗ್ರಾಮಸ್ಥರಿಂದ ಅಭಿನಂದನೆ

ಚಾಮರಾಜನಗರ: ಕೋಡಿಮೋಳೆ ಗ್ರಾಮವನ್ನು ಬಯಲು ಶೌಚ ಮುಕ್ತ ಮಾದರಿ ಗ್ರಾಮವನ್ನಾಗಿಸಲು ಇಂದಿನಿಂದಲೇ ನಾವೆಲ್ಲರು ಪಣತೊಡೋಣ. ಸಾಮೂಹಿಕ ಶೌಚಾಲಯ ಹಾಗೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಗ್ರಾಮದ ಸ್ವಚ್ಚತೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಂತರರಾಷ್ಟ್ರೀಯ ಕ್ರೀಡಾಪಟು, ಚಿನ್ನಪದಕ ವಿಜೇತರಾದ ಸರ್ಕಲ್ ಇನ್ಸ್‍ಪೆಕ್ಟರ್ ಸಿ. ಶಿವನಂಜನಶೆಟ್ಟಿ ತಿಳಿಸಿದರು.

ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಶ್ರೀಲಕ್ಷ್ಮೀದೇವಿ ಅಮ್ಮನವರ ಜಾತ್ರೆಯ ಅಂಗವಾಗಿ ಬುಧವಾರ ರಾತ್ರಿ ನಡೆದ ಅಭಿನಂದನಾ ಸಮಾರಂಭದಲ್ಲಿ ಯಜಮಾನರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜಾತ್ರೆ, ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಣೆ ಮಾಡೋಣ. ಅದಕ್ಕು ಮಿಗಿಲಾಗಿ ನಾವೆಲ್ಲರು ನಮ್ಮ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿಸಲು ಶ್ರಮಿಸಬೇಕು. ಕೋಡಿಮೋಳೆ ಎಂದರೆ ಬಯಲು ಹಾಗೂ ರಸ್ತೆಯ ಬದಿಯಲ್ಲಿ ಕುಳಿತುಕೊಳ್ಳುತ್ತಾರೆ ಎಂಬ ಅಪಕೀರ್ತಿ ನಮ್ಮ ಗ್ರಾಮಕ್ಕೆ ಅಂಟಿದೆ. ಆದೇ ರೀತಿ ನಮ್ಮ ಗ್ರಾಮಸ್ಥರು ನಡೆದುಕೊಳ್ಳುತ್ತಿದ್ದಾರೆ. ಇದು ತಪ್ಪಬೇಕು. ನಮ್ಮ ಮನೆಯ ಅಕ್ಕ ತಂಗಿಯರು, ತಾಯಿಂದರು ಸಂಜೆಯಾಗುತ್ತಿದ್ದಂತೆ ಬಯಲಿಗೆ ಹೋಗುವುದು ನಮಗೆಲ್ಲ ಅದ ಅವಮಾನ ಅಲ್ಲವೇ? ಇಂದು ಜಾತ್ರೆಗಾಗಿ ಎಲ್ಲರು ಸೇರಿ ಒಂದು ಲಕ್ಷಕ್ಕು ಹೆಚ್ಚು ವೆಚ್ಚ ಮಾಡಿ ಡಿಜೆ ಸೌಂಡ್ ಹಾಕಿಸಿದ್ದೀರಿ. ಇನ್ನು ಮೂರು ದಿನ ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿ ಬಿಟ್ಟರೆ ಮುಗಿಯಿತೇ, ನಮ್ಮ ಮಕ್ಕಳು ವಿದ್ಯಾವಂತರಾಗಬೇಡವೇ? ಅವರು ಇತರರಂತೆ ಉನ್ನತ ವ್ಯಾಸಂಗ ಮಾಡಿ, ದೊಡ್ಡ ಹುದ್ದೆಗಳನ್ನು ಅಲಂಕರಿಸಿ, ಗ್ರಾಮಕ್ಕೆ ಕೀರ್ತಿ ತರಬೇಕು. ಈ ನಿಟ್ಟಿನಲ್ಲಿ ಇಂಥ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು ಎಂದರು.

ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ಬಡ ಮಕ್ಕಳನ್ನು ಗುರುತಿಸಿ, ಇಂಥ ಜಾತ್ರೆಯ ಸಂದರ್ಭದಲ್ಲಿ ಅವರನ್ನು ವೇದಿಕೆ ಆಹ್ವಾನಿಸಿ, ನಗದು ಪುರಸ್ಕಾರ ನೀಡಿ, ಗೌರವಿಸಿದರೆ, ಇನ್ನಿತರ ಮಕ್ಕಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಈ ಕಾರ್ಯಕ್ರಮಗಳನ್ನು ಗ್ರಾಮದ ಯಜಮಾನರು, ಮುಖಂಡರು ಹಾಗೂ ಯುವಕರು ಸೇರಿ ಮಾಡಬೇಕು ಎಂದು ಶಿವನಂಜಶೆಟ್ಟಿ ಮನವಿ ಮಾಡಿದರು.

ಈಗ ಇರುವ ಸಾಮೂಹಿಕ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಜತೆಗೆ ಇನ್ನು ಹೆಚ್ಚಿನ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ನನ್ನ ಕಡೆಯಿಂದ ನಾಲ್ಕು ಶೌಚಾಲಯಗಳನ್ನು ನಿರ್ಮಿಸಿಕೊಡುತ್ತೇನೆ. ಆದೇ ರೀತಿ ಇತರರು ಮುಂದೆ ಬಂತು ಶೌಚಾಲಯಗಳನ್ನು ನಿರ್ಮಿಸಿಕೊಟ್ಟು ಬಳಕೆ ಬಗ್ಗೆ ಅರಿವು ಮೂಡಿಸುವ ಮೂಲಕ ಗ್ರಾಮದಲ್ಲಿ ನೈಮಲ್ರ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿರೋಣ. ಯುವಕರು ಕುಡಿತ ಚಟಕ್ಕೆ ದಾಸರಾಗಬೇಡಿ, ಅಮೌಲ್ಯವಾದ ಸಮಯವನ್ನು ವಿದ್ಯಾಭ್ಯಾಸಕ್ಕೆ ಒತ್ತು ನೀಡಿ, ಶಿಕ್ಷಣದಿಂದ ಮಾತ್ರ ನಮ್ಮ ಸಮುದಾಯ ಬದಲಾವಣೆ ಹೊಂದಲು ಸಾಧ್ಯ ಎಂಬ ಸತ್ಯವನ್ನು ಎಲ್ಲರು ಅರಿತುಕೊಳ್ಳಬೇಕು. ನಾನು ಸಹ ಪೊಲೀಸ್ ಅಧಿಕಾರಿಯಾಗಿ ಕಠಿಣ ಪರಿಶ್ರಮದಿಂದಾಗಿ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಹುಟ್ಟೂರಿನಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ತುಂಬಾ ಹೆಮ್ಮೆ ತಂದಿದೆ ಎಂದು ಶಿವನಂಜನಶೆಟ್ಟಿ ಬಾವುಕರಾದರು.

ಸಮಾರಂಭದಲ್ಲಿ ಚಿನ್ನಪದಕ ವಿಜೇತರಾದ ಶಿವನಂಜಶೆಟ್ಟರನ್ನು ಗ್ರಾಮಸ್ಥರು ಶಾಲು ಹೊದಿ, ಹಾರ ಹಾಕಿ ಮೈಸೂರು ಪೇಟಾ ತೊಡಿಸಿ, ಫಲತಾಂಬುಲ ನೀಡಿ ಸನ್ಮಾನಿಸಿದರು. ಚಂದಕವಾಡಿ ಗ್ರಾ.ಪಂ. ಅಧ್ಯಕ್ಷ ನಟರಾಜು, ಯಜಮಾನರಾದ ಕೋಡಿಮೋಳೆ ಗೋವಿಂದಶೆಟ್ಟಿ, ವಿಷಕಂಠ, ರಂಗಸ್ವಾಮಿ, ನಂಜುಂಡಸ್ವಾಮಿ, ರಆಜು, ಮಹೇಶ್, ಮಹದೇವಶೆಟ್ಟಿ, ನಾಗನಾಯಕ, ಸರ್ವೇಯರ್ ಮಹೇಶ್, ಗ್ರಾ.ಪಂ. ಸದಸ್ಯ ಮಹೇಶ್, ಜಯಶಂಕರ್, ನಂಜುಂಡಸ್ವಾಮಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಶ್ರೀಲಕ್ಷ್ಮೀದೇವಿ ಅಮ್ಮನವರ ಜಾತ್ರೆಯ ಅಂಗವಾಗಿ ಬುಧವಾರ ರಾತ್ರಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು, ಚಿನ್ನಪದಕ ವಿಜೇತರಾದ ಸರ್ಕಲ್ ಇನ್ಸ್‍ಪೆಕ್ಟರ್ ಸಿ. ಶಿವನಂಜನಶೆಟ್ಟಿ ಅವರು ಯಜಮಾನರಿಂದ ಸನ್ಮಾನ ಸ್ವೀಕರಿಸಿದರು.

Leave a Reply

Your email address will not be published. Required fields are marked *