ಶಿವರಾತ್ರಿ ಹಬ್ಬದ ಮಹತ್ವ ತಿಳಿಯೋಣ

ಈ ಶಿವರಾತ್ರಿ ಹಬ್ಬ ಬಂತೆಂದರೆ ಸಾಕು ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಭಕ್ತಿ ಭಾವ ಹೊರಹೊಮ್ಮುತ್ತದೆ. ನಮಗೊತ್ತಿಲ್ಲದ ರೀತಿಯಲ್ಲಿ ನಮ್ಮಲ್ಲಿ ಶಿವನ ಧ್ಯಾನ ಸ್ಥಿತಿಯಲ್ಲಿರುವ ಪ್ರತಿಮೆ, ಲಿಂಗ ಎಲ್ಲವೂ ಕೂಡ ಕಣ್ಣೆದುರು ಬರುತ್ತದೆ.

ಎಲ್ಲೆಲ್ಲೂ ಕೂಡ ಶಿವನ ಕುರಿತಾದ ಪೂಜೆ, ಹಾಡುಗಳು……. ಜನಪದ ಗೀತೆ, ಭಕ್ತಿ ಗೀತೆ, ಚಿತ್ರಗೀತೆ, ಮತ್ತಷ್ಟು ಭಕ್ತಿಯ ಪರಕಾಷ್ಟತೆ ಮುಟ್ಟಲು ಕಾರಣವಾಗಿವೆ.

ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕ್ಕೆ ಸಾಟಿ ಬೇರಿಲ್ಲ ಎಂಬ ಗೀತೆ, ಸೇರಿದಂತೆ ನೂರಾರು ಚಿತ್ರಗೀತೆಗಳು ಕೂಡ ಬರುತ್ತವೆ. ಸರ್ವಂ ಶಿವಮಯಂ ಆಗಿದೆ. ಈ ಜಗವೆಲ್ಲ …..ಒಂದೇ ಮಾತಿನಲ್ಲಿ ಹೇಳುತ್ತದೆ ಸತ್ಯಂ ಶಿವಂ ಸುಂದರಂ ಎಂದು.

ನಮ್ಮ ಭಾರತೀಯರು ಆಚರಿಸುವ ಎಲ್ಲಾ ಹಬ್ಬ ಹರಿದಿನಗಳು ಕೂಡ ಸಾಂಸ್ಕೃತಿಕ ಚೌಕಟ್ಟನ್ನು ಒಳಗೊಂಡಿದೆ. ಅದರಲ್ಲೂ ಶಿವರಾತ್ರಿಯೇ ಸರ್ವ ಶ್ರೇಷ್ಠ ಆಚರಣೆ ಎನ್ನುವ ಭಾವನೆ ಉಂಟಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ ಎಲ್ಲವನ್ನು ಕೂಡ ಮರೆತು, ಶಿವನ ಧ್ಯಾನದಲ್ಲಿ ಮನಸ್ಸು ತುಡಿಯುತ್ತದೆ.

ಸದಾ ಶಿವಧ್ಯಾನ, ಶಿವ ಚಿಂತನೆ, ಶಿವನಾಮದ ಸ್ಮರಣೆ ಎಲ್ಲವನ್ನೂ ಮಾಡುತ್ತಾ ಸಾಗಿದರೆ ಶಿವನು ತನ್ನ ಕರುಣೆಯನ್ನು ಕೂಡ ಭಕ್ತರ ಮೇಲೆ ಕರುಣಿಸುತ್ತಾನೆ.

ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಜೊತೆಗೆ ಉಪವಾಸದ ಮಹತ್ವ ಎಲ್ಲವೂ ಕಣ್ಮುಂದೆ ಬರುತ್ತದೆ. ಜಾಗರಣೆ ಎಂದರೆ ಎಚ್ಚರವಾಗಿರು ಎಂದರ್ಥ. ಯಾವಾಗ ವ್ಯಕ್ತಿಯು ತನ್ನ ಸುಖ ಮತ್ತು ಮೋಹದ ನಿದ್ರೆಯನ್ನು ತೊರೆದು ಎಚ್ಚರದ ಸ್ಥಿತಿಯಲ್ಲಿ ಇರುತ್ತಾನೋ ಅದೇ ನಿಜವಾದ ಜಾಗರಣೆ ಎಂದಾಗಿದೆ.

ಇಡೀ ರಾತ್ರಿ ಮೃತುಂಜಯನ ಕೃಪೆಗೆ ಪಾತ್ರರಾಗಿ ತಮ್ಮ ಕಷ್ಟ ಕಾರ್ಪಣ್ಯಗಳು ಮಾಯವಾಗಿ ಸುಖ, ಶಾಂತಿ, ನೆಲೆಸಲು ಪ್ರಾರ್ಥಿಸುತ್ತಾರೆ. ಜೊತೆಗೆ ಉಪವಾಸ ಮಾಡುವುದು ಕೂಡ ಆರೋಗ್ಯಕ್ಕೆ ಒಳಿತು. ವೈಜ್ಞಾನಿಕ ಕಾರಣವೂ ಕೂಡ ಇದೆ. ಇಂದ್ರಿಯ ನಿಗ್ರಹ, ಹಸಿವಿನ ಅರಿವು, ಆಹಾರದ ಉಳಿತಾಯ ಹೀಗೆ ಒಂದಕ್ಕೊಂದು ಅಂಶಗಳು ಬೆಸೆದುಕೊಂಡಿರುತ್ತದೆ.

ಶಿವನೆಂದರೆ ಅದಮ್ಯ ಚೇತನ ಸ್ವರೂಪಿಯಾಗಿರುವಂಥದ್ದು. ಜೊತೆಗೆ ಒಂದು ಪ್ರಕೃತಿಯ ವಿಸ್ಮಯವಾಗಿದೆ!.

ನಾವು ಸಾಮಾನ್ಯವಾಗಿ ಶಿವಲಿಂಗಗಳಲ್ಲಿ ಎರಡು ವಿಧವನ್ನು ಕಾಣುತ್ತೇವೆ ಒಂದು ಸ್ವಯಂ ಭೂ ಲಿಂಗ ಮತ್ತೊಂದು ಮಾನವ ನಿರ್ಮಿತ ಲಿಂಗ. ಸ್ವಯಂ ಲಿಂಗ ನಮಗೆ ಇತಿಹಾಸದ ಪುಟಗಳಿಂದಲೂ ಕೂಡ ನಮಗೆಲ್ಲ ಒಂದಲ್ಲ ಒಂದು ಸ್ಥಳದಲ್ಲಿ ಕಾಣ ಸಿಗುತ್ತದೆ. ಅಂತಹ ಸ್ಥಳಗಳಲ್ಲಿ ಅನೇಕ ಪ್ರಸಿದ್ಧ ದೇವಸ್ಥಾನಗಳು ಸೃಷ್ಟಿಯಾಗಿವೆ. ಇದರಿಂದಾಗಿ ಅಲ್ಲಿಗೆ ಭಕ್ತರ ನಡಿಗೆ ನಡೆಯುತ್ತದೆ.

ಇನ್ನು ಮಾನವ ನಿರ್ಮಿತ ಶಿವ ದೇವಸ್ಥಾನಗಳು ಕೂಡ ನಮಗೆ ಕಾಣಿಸಿತ್ತವೆ. ದೇವರು ಒಂದೇ ನಾಮ ಹಲವು ಆದರೂ ಕೂಡ ಶಿವನ ಹೆಸರು ನೂರಾರು ಇವೆ.

ಶಿವನಾಮ ಸ್ಮರಣೆ ಮಾಡುತ್ತಾ ಕುಳಿತರೆ ಮೈ-ಮನಗಳಿಗೆ ರೋಮಾಂಚನ ವಾಗುತ್ತದೆ. ಶಿವನ ಚಿತ್ರವನ್ನು ನೋಡಿದರೆ ಸಾಕು ನಮಗೆ ಸರಳವಾಗಿ ಬದುಕುವ ಆಸೆಯಾಗುತ್ತದೆ. ಏಕೆಂದರೆ ಶಿವನೆಂದರೆ ಸ್ಮಶಾನವಾಸಿ, ರುಂಡಮಾಲಾ, ಜಟಾಧಾರಿ, ಭಸ್ಮ ಲೇಪಿತ ಹೊಂದಿದವನು. ಶಿವನಂದರೆ ಸೌಂದರ್ಯ ಜೊತೆಗೆ ಸದಾ ಪರಿವರ್ತನೆಯ ಹರಿಕಾರನಾಗಿದ್ದಾನೆ. ಹೀಗೆ ವಿಭಿನ್ನ ನೆಲೆಗಳಲ್ಲಿ ಕಾಣಸಿಗುವ ದೇವರು ನಮ್ಮ ಶಿವನು.
ಪರಶಿವನ ನೆನೆ ಮನವೇ- ಎನ್ನುವ ಮಾತು ಕೂಡ ಇದೆ. ಶಿವನನ್ನು ಲಿಂಗ ರೂಪದಲ್ಲಿ ಪೂಜಿಸುವ ಸಂಪ್ರದಾಯವಿದೆ. ಈ ಜಗತ್ತು ಒಂದೆಂಬ ಭಾವಕ್ಕೆ ಈ ಲಿಂಗವೇ ಕುರುಹು. ಶಿವನ ಕುರಿತಾಗಿ ಅನೇಕ ಜನಪದ ಕಥೆಗಳಿವೆ, ಪುರಾಣ ಕಥೆಗಳಿವೆ, ಒಂದೊಂದು ಕಥೆಗಳನ್ನು ಕೂಡ ವಿಭಿನ್ನ ದೃಷ್ಟಿಕೋನದಲ್ಲಿ ಶಿವನ ಬಗ್ಗೆ ಚಿತ್ರಣಗಳು ನಮ್ಮ ಕಣ್ಮುಂದೆ ಬರುತ್ತವೆ.

ಶಿವನ ಕುರಿತಾದ ಹಾಡುಗಳು ಮೈ ಮನಗಳಿಗೆ ಮುದ ನೀಡುತ್ತವೆ. ಜೊತೆಗೆ ಶಿವನ ಕುರಿತಾದ ಅನೇಕ ಚಲನಚಿತ್ರಗಳು ಕೂಡ ಅವುಗಳಲ್ಲಿ ಭಕ್ತರ ಭಕ್ತಿಯ ಚಿತ್ರಣವನ್ನು ಸೃಷ್ಟಿಸಿದ್ದಾರೆ. ಜೊತೆಗೆ ನಾಡಿನಾದ್ಯಂತ ಹಲವು ಶಿವನ ಪ್ರಸಿದ್ಧ ದೇವಾಲಯವುಗಳು ಕೂಡ ಇವೆ. ಭಾರತದಲ್ಲಿ ನೂರಾರು ಶಿವನ ದೇಗುಲಗಳಿವೆ ಅವುಗಳಲ್ಲಿ ಪ್ರಮುಖ ಜ್ಯೋತಿರ್ಲಿಂಗಗಳ ಹೆಸರುಗಳು ಕೆಳಕಂಡಂತಿವೆ. ಸೌರಾಷ್ಟ್ರ ಸೋಮನಾಥ, ಶ್ರೀಶೈಲ ಮಲ್ಲಿಕಾರ್ಜುನ, ಉಜ್ಜಯಿನಿ ಮಹಾ ಕಾಳೇಶ್ವರ, ಓಂಕಾರೇಶ್ವರ, ಢಾಕಿನ್ಯ ಭೀಮಶಂಕರ, ಧಾರುಕಾವನ ನಾಗೇಶ್ವರ, ನಾಸಿಕ್ ತ್ರಯಂಬಕೇಶ್ವರ, ಸೇತುಬಂಧ ರಾಮೇಶ್ವರ, ವಾರಣಾಸಿ ವಿಶ್ವನಾಥ, ಪಾರಾಳಿ ವೈದ್ಯನಾಥ, ಹಿಮಾಲಯ ಕೇದಾರನಾಥ ಮುಂತಾದವು.

ಇನ್ನು ನಮ್ಮ ಕರುನಾಡಿನ ಜನಪ್ರಿಯ ಶಿವ ದೇವಾಲಯಗಳೆಂದರೆ ಗೋಕರ್ಣದ ಮಹಾಬಲೇಶ್ವರ, ಕೋಲಾರದ ಕೋಟಿಲಿಂಗೇಶ್ವರ, ಹಳೇಬೀಡಿನ ಹೊಯ್ಸಳೇಶ್ವರ, ಮಂಗಳೂರಿನ ಕದ್ರಿ ಮಂಜುನಾಥ, ಧರ್ಮಸ್ಥಳದ ಶ್ರೀ ಮಂಜುನಾಥ, ಭಟ್ಕಳದ ಮುರುಡೇಶ್ವರ, ಹಂಪಿಯ ವಿರೂಪಾಕ್ಷ, ಐಹೊಳೆಯ ಲಡ್ಖಾನ್, ನಂಜನಗೂಡಿನ ಶ್ರೀಕಂಠೇಶ್ವರ, ಹಂಪಿಯ ಬಡವಿ ಲಿಂಗ, ಬೆಂಗಳೂರಿನ ಗವಿ ಗಂಗಾಧರೇಶ್ವರ, ಇಟಗಿಯ ಮಹಾದೇವ ಹೀಗೆ ಒಂದು ಎರಡೇ ಉದ್ದನೆಯ ಪಟ್ಟಿ ಇದೆ

ಜೊತೆಗೆ ಅನೇಕ ತಾಲೂಕು, ಗ್ರಾಮಗಳಲ್ಲೂ ಕೂಡ ಪುರಾಣ ಪ್ರಸಿದ್ಧ ಶಿವ ದೇವಾಲಯಗಳು ಇವೆ. ಈಗಲೂ ಕೂಡ ಭಕ್ತರ ದಂಡು ಎಲ್ಲಾ ಶಿವಮಂದಿರ ಸ್ಥಳಗಳಿಗೆ ದರ್ಶನ ನೀಡುತ್ತಾರೆ.

ನಾನು ಮೊದಲೇ ಹೇಳಿದಂತೆ ಶಿವನ ಕುರಿತಾದ ಅನೇಕ ಚಿತ್ರಗಳು ಭಕ್ತರಿಗೆ ಪರಿಣಾಮ ಬೀರಿವೆ ಬೇಡರ ಕಣ್ಣಪ್ಪ, ಸತ್ಯ ಹರಿಶ್ಚಂದ್ರ, ಭೂಕೈಲಾಸ, ಭಕ್ತ ಸಿರಿಯಾಳ, ಭಕ್ತ ಮಾರ್ಕಂಡೇಯ, ಶ್ರೀ ಮಂಜುನಾಥ, ಶಿವಕೊಟ್ಟ ಸೌಭಾಗ್ಯ, ಶಿವರಾತ್ರಿ ಮಹಾತ್ಮೆ, ಬಾಲಶಿವ, ಭಕ್ತ ಶಂಕರ, ಮುಂತಾದವು.

ಜೊತೆಗೆ ಇಂಥ ಚಿತ್ರಗಳಲ್ಲಿ ಅನೇಕ ಗೀತೆಗಳು ಕೂಡ ಅಡಗಿವೆ. ಇದರಿಂದಾಗಿ ನಾವು ಶಿವನ ಕುರಿತು ಅಗಾಧವಾದ ಮಾಹಿತಿಯನ್ನು ಚಲನಚಿತ್ರವೆಂಬ ಪರಿಣಾಮಕಾರಿ ಮಾಧ್ಯಮದ ಮೂಲಕವೂ ಕೂಡ ನಾವು ಪಡೆಯಬಹುದಾಗಿದೆ.

ಜೊತೆಗೆ ಈಗ ಕಿರುತೆರೆಯಲ್ಲೂ ಕೂಡ ಶಿವನ ಕುರಿತಾದ ಅನೇಕ ಧಾರಾವಾಹಿಗಳು ಕೂಡ ಪ್ರಸಾರವಾಗಿವೆ. ಆಕಾಶವಾಣಿ ಅಂತಹ ಸದಭಿ ರುಚಿಯ ಮಾಧ್ಯಮದಲ್ಲೂ ಕೂಡ ಶಿವನ ಕುರಿತಾದ ಭಕ್ತಿ ಗೀತೆಗಳು, ಭಾವಗೀತೆಗಳು, ಜೊತೆಗೆ ಚರ್ಚೆಗಳು ನಡೆಯುತ್ತವೆ.

ಸರ್ವ ಅಲಂಕಾರಗಳಿಂದ ಸಿಂಗಾರಗೊಂಡ ಶಿವನ ದೇವಾಲಯಗಳನ್ನು ಶಿವರಾತ್ರಿ ದಿನದಂದು ನೋಡುವುದೇ ಒಂದು ರೀತಿಯಲ್ಲಿ ಸೌಭಾಗ್ಯ. ಅದರಲ್ಲೂ ಮೈಸೂರಿನ ಅರಮನೆಯಲ್ಲಿರುವ ಪುರಾಣ ಪ್ರಸಿದ್ಧ ಶಿವನ ದೇವಾಲಯದಲ್ಲಿ ಚಿನ್ನದ ಕೊಳಗವನ್ನು ಲಿಂಗಕ್ಕೆ ಹಾಕುತ್ತಾರೆ. ಇದು ಪ್ರತಿ ವರ್ಷದ ಶಿವರಾತ್ರಿಯ ವಿಶೇಷ. ಅದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು.

ಜೊತೆಗೆ ಶಿವನ ಕುರಿತಾದ ಅನೇಕ ಮಾಹಿತಿಗಳು ಕೂಡ ಎಲ್ಲೆಡೆ ಲಭ್ಯವಾಗುತ್ತದೆ. ಇದರಿಂದಾಗಿ ಶಿವ ಎಲ್ಲಾ ಭಕ್ತರನ್ನು ಕೂಡ ಸಮಾನ ದೃಷ್ಟಿಯಲ್ಲಿ ನೋಡಿ ಎಲ್ಲರಿಗೂ ಕೂಡ ಆಶೀರ್ವಾದ ಮಾಡುತ್ತಾನೆ ಎನ್ನುವ ನಂಬಿಕೆ ಅಗಾಧವಾಗಿ ಭಕ್ತರಲ್ಲಿ ತುಂಬಿದೆ.

ಈ ಶಿವರಾತ್ರಿಯ ಶುಭ ಸಂದರ್ಭದಲ್ಲಿ ನಾವು ಒಳ್ಳೆಯ ಸಂಕಲ್ಪ ಮಾಡೋಣ. ಸಾಧ್ಯವಾದಷ್ಟು ನಾವು ಯಾರಿಗೂ ತೊಂದರೆ ನೀಡದೆ, ಮೊದಲು ನಮ್ಮ ಅಂತರಂಗದಲ್ಲಿ ಅಡಗಿರುವ ದ್ವೇಷ, ಅಸೂಯೆ ಎಲ್ಲವನ್ನು ತೆರೆದೊಡಿಸಿ, ನಂತರ ನಾವು ಬದುಕಿ ಇತರರನ್ನು ಬದುಕಿಸೋಣ. ಎಲ್ಲರಿಗೂ ಶಿವರಾತ್ರಿ ಹಾರ್ಧಿಕ ಶುಭಾಶಯಗಳು.

ಕಾಳಿಹುಂಡಿ ಶಿವಕುಮಾರ್ ಮೈಸೂರು.

Leave a Reply

Your email address will not be published. Required fields are marked *