“2026ರ ಹೊಸ ವರ್ಷ”ವನ್ನು ಹೊಸ ಸಂಕಲ್ಪಗಳೊಂದಿಗೆ ಬರಮಾಡಿಕೊಳ್ಳೋಣ…!


2025 ವರ್ಷ ಪ್ರಾರಂಭ ಇತ್ತೀಚೆಗೆ ಆಗಿದೆ, ಎಷ್ಟು ಬೇಗ ಈ ವರ್ಷ ಮುಗಿದು ಹೋಯಿತು ಎಂದೆನಿಸದೆ ಇರದು. ಅದು ಮೊದಲು ಹೊಸ ವರ್ಷವಾಗಿತ್ತು. ಈಗ ಹಳೆಯದಾಗಿ ಕಾಲ ಗರ್ಭಕ್ಕೆ ಸೇರಿತು. ಈಗ ಮತ್ತೆ 2026 ಬಂದಿದೆ. ಅದು ಹೊಸ ವರ್ಷವಾಗಿದೆ. ಆದುದರಿಂದಾಗಿ ಹಳೇ ವರ್ಷವನ್ನು ಬೀಳ್ಕೊಟ್ಟು ಹೊಸ ವರ್ಷಕ್ಕೆ ಸ್ವಾಗತ ಕೋರುವ ಕಾಲ ಬಂದಿದೆ. ಜನವರಿ 1 ಹೊಸ ವರ್ಷವನ್ನು ನಾವು ಆಚರಿಸುತ್ತಿದ್ದೇವೆ. ಹಳೆಯ ಮತ್ತು ಹೊಸತುಗಳ ಸಂಗಮ ಇದ್ದರೆ ಜೀವನ ಒಂದು ರೀತಿಯಲ್ಲಿ ಸೊಗಸಾಗಿರುತ್ತದೆ. ಕವಿ ಮೊದಲೇ ಹೇಳಿದ್ದಾರೆ... ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂದು.

ಒಂದೆಡೆ ಒಂದನೆಯ ದಿನಾಂಕದಂದು ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಪರಸ್ಪರ ವಿನಿಯೋಗ ಮಾಡಿಕೊಳ್ಳುತ್ತಾರೆ. ಮುತ್ತೊಂದೆಡೆ ಕ್ಯಾಲೆಂಡರ್ ನ ವರ್ಷ ನಮಗೇಕೆ ನಮ್ಮದೇನಿದ್ದರೂ ಯುಗಾದಿ ಹಬ್ಬಕ್ಕೆ ಹೊಸ ವರ್ಷ ಎನ್ನುವವರು ಇದ್ದಾರೆ. ಜನವರಿಯ ಮೊದಲನೆಯ ದಿನಾಂಕ ಮತ್ತು ಯುಗಾದಿ ಹಬ್ಬ ಎರಡನ್ನು ಕೂಡ ಆಚರಿಸುವವರು ಇದ್ದಾರೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಎನ್ನುವಂತೆ ಏನಿದ್ದರೂ ಹೊಸ ವರ್ಷ ಎಲ್ಲರ ಬಾಳಲ್ಲಿ ಹೊಸದಾದ ಹರ್ಷವನ್ನು ತರುತ್ತದೆ.

ಗ್ರೇಗೋರಿಯನ್ ಕ್ಯಾಲೆಂಡರ್ ಪ್ರಕಾರ ನಾವು ಹೊಸ ವರ್ಷವನ್ನು ಆಚರಿಸುತ್ತಿದ್ದೇವೆ. ಈ ಕ್ಯಾಲೆಂಡರ್ ಇತ್ತೀಚಿನದು ಎಂದು ಹೇಳಲಾಗುತ್ತದೆ. ಕೇವಲ 450 ವರ್ಷಗಳ ಇತಿಹಾಸವಿದೆ. ಆದರೆ ಭಾರತೀಯ ಕ್ಯಾಲೆಂಡರ್ ಗೆ (ಪಂಚಾಂಗ) ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಭಾರತೀಯ ಪಂಚಾಂಗವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಅದು ಪ್ರಾಕೃತಿಕವಾಗಿ ಮತ್ತು ಭೌಗೋಳಿಕವಾಗಿ ನಮ್ಮೊಟ್ಟಿಗೆ ಬೆಸೆದುಕೊಂಡಿದೆ.

ಈ ಸೂರ್ಯ, ಚಂದ್ರ, ಭೂಮಿ ಇವುಗಳ ಆದರಿಸಿ ವೈಜ್ಞಾನಿಕ ರೀತಿಯಲ್ಲಿ ಈ ಕ್ಯಾಲೆಂಡರ್ ಅನ್ನು ರಚಿಸಲಾಗಿದೆ. ಆ ಕ್ಯಾಲೆಂಡರ್ ಬಗ್ಗೆ ತಿಳಿದುಕೊಂಡ ಅನೇಕ ಮಂದಿ ವಿಸ್ತಾರವಾಗಿ ಪರಿಚಯ ಮಾಡುತ್ತಾರೆ.

ಪಂಚಾಂಗದ ಪ್ರಕಾರವಾಗಿ ಸಂವತ್ಸರದ ಮೊದಲ ದಿನ ಬರುವ "ಯುಗಾದಿ ಹಬ್ಬ"ವೇ ಭಾರತದ ಪಾಲಿಗೆ ಹೊಸ ವರ್ಷವಾಗಿದೆ.

ಮತ್ತೆ ನಾವು ಗ್ರೆಗೊರಿಯನ್ ಕ್ಯಾಲೆಂಡರ್ ಮಾನವ ನಿರ್ಮಿತ ವಾಗಿದ್ದು, ಅದು ಇಂದು ಅನಿವಾರ್ಯವಾಗಿ ಜನವರಿ 1 ನಮ್ಮನ್ನು ಎದುರುಗೊಳ್ಳುತ್ತದೆ.

ಮೊದಲು ಕ್ಯಾಲೆಂಡರ್ ಇತಿಹಾಸದ ಬಗ್ಗೆ ಚಿಕ್ಕದಾಗಿ ತಿಳಿದುಕೊಳ್ಳೋಣ. “ಕ್ಯಾಲೆಂಡರ್” ಎಂಬ ಪದ ಮೊದಲು ಬಳಕೆಯಾದದ್ದು ರೋಮನ್ನರ ಕಾಲದಲ್ಲಿ. ಎಂಟನೇ ಶತಮಾನ ಎನ್ನ ಲಾಗಿದೆ. ಆಗ ಪ್ರಾರಂಭದಲ್ಲಿ ವರ್ಷಕ್ಕೆ ಹತ್ತು ತಿಂಗಳು ಮಾತ್ರ ಇತ್ತು. ಅದು ಪ್ರಚಲಿತ ಮಾಸಗಳಿಂದ ಕೂಡಿರಲಿಲ್ಲ ಮಾರ್ಚ್, ಏಪ್ರಿಲ, ಮೇ, ಜೂನ, ಕ್ವಿಂಟೆಲಿಸ್, ಸೆಕ್ಸ್ಲಿಲಿಸ್ , ಸೆಪ್ಟಂಬರ ಅಕ್ಟೋಬರ, ನವಂಬರ ದಶಂಬರ ಎಂದಿತ್ತು!.

ನಂತರ ಜನವರಿ, ಫೆಬ್ರವರಿ ತಿಂಗಳ ನಂಬರ್ ಸೇರಿ 12 ತಿಂಗಳಾದವು. ರೋಮನ್ನರ ಸಾಮ್ರಾಟ್ ಕಾಲದ ಜನವರಿ, ಫೆಬ್ರವರಿ ವರ್ಷ ಕೊನೆಗಿತ್ತು. ಈಗ ಪ್ರಾರಂಭಕ್ಕೆ ಸೇರಿಸಲಾಯಿತು. ಈ ನಡುವೆ ರೋಮನ್ನರ ಜೂಲಿಯಸ್ ಸೀಝರ್ ಹೆಸರಿನಲ್ಲಿ ಜುಲೈ ತಿಂಗಳು ಸೇರಿಸಿದ. ನಂತರ ಆಗಸ್ಟ್ ಸಿಝರ್ ತನ್ನ ಹೆಸರಿನಲ್ಲಿ ಆಗಸ್ಟ್ ತಿಂಗಳು ಸೇರಿಸಿದ. ಈ ರೀತಿಯಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಚಲಿತವಾಯಿತು.
ಆದರೆ ಯುಗಾದಿಯು ನಮಗೆಲ್ಲ ಹೊಸ ವರ್ಷವಾಗಿದೆ. ಇಂಗ್ಲಿಷ್ ಮೂಲದ ಆಚರಣೆಯಾದ ಜನವರಿ- 1 ನಮ್ಮ ಸಂಸ್ಕೃತಿಗೆ ಸರಿಹೊಂದುವುದಿಲ್ಲ ಎನ್ನುವ ಮಾತು ಕೂಡ ಇದೆ. ಆದರೆ ಯುಗಾದಿ ಪ್ರಕೃತಿಯ ಬದಲಾವಣೆಯೊಟ್ಟಿಗೆ ಬಹಳ ಮಹತ್ವವಾದ ಹಿನ್ನೆಲೆಯನ್ನು ಹೊಂದಿದೆ. ಯುಗಾದಿಯ ಆಜು ಬಾಜು ಪ್ರಕೃತಿ ಸುಂದರವಾಗಿ ನವ ವಧುವಿನಂತೆ ಕಂಗೊಳಿಸುತ್ತಿರುತ್ತದೆ. ಕವಿಗಳಿಗೆ ಹೇಳಿ ಮಾಡಿಸಿದ ಕಾಲ.

ನಾ ಮೊದಲೇ ಹೇಳಿದಂತೆ ಹೊಸ ವರ್ಷ ಜನವರಿ-1 ಮತ್ತು ಯುಗಾದಿ ಹಬ್ಬದ ದಿನ ಕೂಡ ಹೊಸ ವರ್ಷವೆಂದು ಎಲ್ಲರೂ ಕೂಡ ಆಚರಿಸುತ್ತಾರೆ. ಕ್ಯಾಲೆಂಡರ್ ಪ್ರಕಾರ ಜನವರಿ ಒಂದು ಹೊಸ ವರ್ಷ. ಆದರೆ ನಮ್ಮ ಹಿಂದುಗಳಿಗೆ ಯುಗಾದಿ ಹಬ್ಬವೇ ಹೊಸ ವರ್ಷಕ್ಕೆ ಮುನ್ನುಡಿ ಆಗುತ್ತದೆ.
ನಮಗೆ ಈಗಲೂ ನೆನಪಿದೆ. ಯುಗಾದಿ ಹಬ್ಬಕ್ಕೆ ನಮಗೆ ಹೊಸ ಬಟ್ಟೆ ಬರುತ್ತಿತ್ತು!. ಮತ್ತೆ ಹೊಸ ಬಟ್ಟೆ ಕಾಣುವುದು ನಾವು ಮುಂದಿನ ಯುಗಾದಿಗೆ ಆಗುತ್ತಿತ್ತು. ಆದುದರಿಂದ ಯುಗಾದಿ ಹಬ್ಬದ ದಿನಗಳು ನಮಗೆ ಈ ಕ್ಷಣದಲ್ಲಿ ನೆನಪಾಗುತ್ತವೆ. ಆಗ ಯುಗಾದಿ ಹಬ್ಬವನ್ನು ನಾವು ಬೇವು- ಬೆಲ್ಲ ತಿಂದು, ಪ್ರಕೃತಿಯೊಂದಿಗೆ ಸಂಭ್ರಮಿಸಿ, ಪರಿಸರವನ್ನು ಪ್ರೀತಿಸುತ್ತಾ ಆಚರಿಸುತ್ತೇವೆ. ಆದರೆ ಈಗ ನೂತನ ಹೊಸ ವರ್ಷ ಜನವರಿ 1 ನಾವೆಲ್ಲರೂ ಹೊಸ ವರ್ಷವೆಂದು ಆಚರಿಸುತ್ತೇವೆ.

ಡಿಸೆಂಬರ್ 31ರ ಮಧ್ಯರಾತ್ರಿ ಯಿಂದಲೆ ಹೊಸ ವರ್ಷದ ಆಚರಣೆ ಶುರುವಾಗುತ್ತದೆ. ಬಗೆ ಬಗೆಯ ಕೇಕ್ಗಳನ್ನು ಕತ್ತರಿಸಿ, ಬಹಳ ದುಂದು ವೆಚ್ಚ ದೊಂದಿಗೆ ಆಚರಿಸುತ್ತೇವೆ. ಈ ಸಮಯದಲ್ಲಿ ಮೋಜು, ಮಸ್ತು ಕೂಡ ನಡೆಯುತ್ತದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈಗ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಟ್ಟುನ ಕ್ರಮ ಕೈಗೊಂಡಿದೆ. ಅದರಿಂದಾಗಿ ನಾವು ನಮ್ಮ ಮನೆಯಲ್ಲಿಯೇ ಕುಟುಂಬದೊಂದಿಗೆ ಹೊಸ ವರ್ಷವನ್ನು ಆಚರಿಸೋಣ.

ಆದರೆ ಈಗ ನಡೆಯುತ್ತಿರುವುದೇ ಬೇರೆ ಈ ಒಂದು ದಿನ ಎಲ್ಲಾ ಸ್ಟಾರ್ ಹೋಟೆಲ್ ಗಳು ಕೂಡ ಬುಕ್ ಆಗಿರುತ್ತವೆ. ಇಂತಿಷ್ಟು ದುಡ್ಡು ಪಾವತಿಸಿದರೆ ಅದ್ದೂರಿಯಾಗಿ ಹೊಸ ವರ್ಷದ ಪಾರ್ಟಿ ಮಾಡಬಹುದಾಗಿದೆ!.

ಯುವಜನತೆ ಈ ರೀತಿಯ ಆಚರಣೆಗೆ ಹೆಚ್ಚಾಗಿ ಆಸಕ್ತಿ ವಹಿಸುತ್ತಿದ್ದಾರೆ. ಇದರಿಂದಾಗಿ ಇದು ನಮ್ಮ ಸಂಸ್ಕೃತಿಗೆ ಹೊಂದುವುದಿಲ್ಲ ಎನ್ನುವ ಮಾತು ಕೂಡ ಇದೆ.

ಮಾನವ ಇತಿಹಾಸದಲ್ಲೇ ಮೊದಲಿಗೆ ಮೆಸಪಟೋಮಿಯ ದೇಶದ ಬ್ಯಾಬಿಲೋನಿಯ ಪ್ರಾಂತ್ಯದಲ್ಲಿ ಕ್ರಿಸ್ತಪೂರ್ವ 2000 ರಲ್ಲಿ ಹೊಸ ವರ್ಷದ ಆಗಮನವಾಗಿರಬಹುದು ಎಂಬ ದಾಖಲೆ ಕೂಡ ಇದೆ.
ಆದುದರಿಂದಾಗಿ ಜನವರಿ 1ನ್ನು ಹಲವರು ಆಚರಿಸುವುದಿಲ್ಲ. ಇನ್ನು ಕ್ಯಾಲೆಂಡರ್ ನೆಪದಲ್ಲಿ ಮಾಸಗಳ ಬದಲಾವಣೆ ಎಂದು ಹಲವರು ತಿಳಿದಿರುತ್ತಾರೆ. ಆದರೆ ಯುಗಾದಿ ಹಬ್ಬವನ್ನು ಎಲ್ಲರೂ ಒಟ್ಟಾಗಿ ಪ್ರಕೃತಿಯೊಂದಿಗೆ ಬೆರೆತು ದೊಡ್ಡವರು, ಚಿಕ್ಕವರು ಎನ್ನದೆ ಆಚರಿಸುವ ಸಂಪ್ರದಾಯ.
ಅಂದು ಪಂಚಾಂಗ ಓದುವುದು, ಪಂಚಾಂಗದ ಇತಿಹಾಸ ತಿಳಿಯುವುದು, ಜೊತೆಗೆ ಮುಂದಿನ ಮಳೆ ರಾಶಿಗಳು, ಶುಭ- ಅಶುಭಗಳ ಲೆಕ್ಕವು ಕೂಡ ನಡೆಯುತ್ತದೆ.
ಈ ಹೊಸ ವರ್ಷ ಬರುತ್ತದೆ, ಹೋಗುತ್ತದೆ ಆದರೆ ಈ ನಡುವೆ ನಾವು ನಮ್ಮ ಸಮಾಜಕ್ಕೆ ಅಥವಾ ವೈಯಕ್ತಿಕ ಸಾಧನೆ ಏನು ಮಾಡುತ್ತೇವೆ ಅದರ ಮೇಲೆ ಅವಲಂಬಿತವಾಗುತ್ತದೆ. ಎಲ್ಲರಿಗೂ ಕೂಡ 365 ದಿನಗಳು ಇದ್ದೇ ಇರುತ್ತವೆ. ಸಾಧಕರಾದಂತವರು ಈ ದಿನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಒಂದಲ್ಲ ಒಂದು ರೀತಿಯಲ್ಲಿ ಯಶಸ್ಸು ಪಡೆಯುತ್ತಾ, ಸಾಧನೆಯ ಶಿಖರವೇರುತ್ತಾರೆ. ಸಾಧಕರಿಗೆ ಸಮಯ ಸಾಲುವುದಿಲ್ಲ ಎಂಬ ಮಾತುಗಳನಾಡುತ್ತಾರೆ. ಸುಮ್ಮನೆ ಕಾಲಹರಣ ಮಾಡುವವರಿಗೆ ಏನಾದರೂ ಕೆಲಸ ಮಾಡಲು ಹೇಳಿದರೆ ನನಗೆ ಸಮಯವೆ ಸಿಗುವುದಿಲ್ಲ ಎನ್ನುತ್ತಾರೆ. ಈ ರೀತಿ ನಾವು ಸಮಯದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸಮಯವನ್ನು ಉಪಯೋಗಿಸಿಕೊಳ್ಳಬೇಕು. ಆಗ ಮಾತ್ರ ಸಮಯದ ಸದ್ಬಳಕೆ ಆಗುತ್ತದೆ.
2025ರ ವರ್ಷವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅನೇಕ ಏಳು ಬೀಳುಗಳು ಕಂಡಿವೆ. ಅನೇಕ ಸಾಧನೆಗಳು ಆಗಿವೆ. ರಾಜ್ಯ ಆಗಿರಬಹುದು, ದೇಶ ಆಗಿರಬಹುದು. ಅಲ್ಲದೇ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಗಣ್ಯರು ನಮ್ಮನ್ನಗಲಿದ್ದಾರೆ. ಹಲವು ಸಾಧಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧಿಸಿ, ಪ್ರಶಸ್ತಿ ಪುರಸ್ಕಾರಕ್ಕೂ ಕೂಡ ಭಾಜನರಾಗಿದ್ದಾರೆ. ಅನೇಕ ವಿಮಾನ, ರೈಲು, ಬಸ್ಸು ದುರಂತಗಳು ಕೂಡ ನಡೆದಿದೆ. ಜೊತೆ ಜೊತೆಗೆ ಪ್ರಕೃತಿಯ ದುರಂತಗಳು ಕೂಡ ನೋವನ್ನುಂಟು ಮಾಡಿವೆ. ಅಪಾರ ಪ್ರಾಣ ಹಾನಿ ಕೂಡ ಆಗಿದೆ. ಹಲವು ಸ್ವಯಂಕೃತ ದುರಂತಗಳು, ಕೆಲವು ಪ್ರಕೃತಿ ದುರಂತಗಳು.
ಇಲ್ಲಿ ನಾವು ಪ್ರಕೃತಿಯಿಂದ ಎಲ್ಲವನ್ನು ಪಡೆದು, ಅದನ್ನು ಸರಿಯಾಗಿ ನೋಡಿಕೊಳ್ಳದೆ ಪ್ರಕೃತಿಗೆ ಧಕ್ಕೆ ತರುತ್ತಿದ್ದೇವೆ. ಅದರ ಫಲವಾಗಿ ಅನೇಕ ದುರಂತಗಳು ನಡೆಯುತ್ತಿವೆ.
ಈ ವರ್ಷವೂ ಕೂಡ ಕಾಡಿನಿಂದ ನಾಡಿಗೆ ಅನೇಕ ಪ್ರಾಣಿಗಳು ದಾಳಿ ಇಟ್ಟಿವೆ. ಅನೇಕರನ್ನ ಬಲಿ ಪಡೆದುಕೊಂಡಿವೆ. ಅವು ಕೂಡ ಸಾವನ್ನಪ್ಪಿವೆ. ಈ ರೀತಿಯಾಗಿ ಕಾಲಚಕ್ರದಲ್ಲಿ ಇವು ನಿರಂತರವಾಗಿ ಏಳು-ಬೀಳುಗಳು ನಡೆಯುತ್ತಲೇ ಇರುತ್ತವೆ.
ದೇಶದ ಮಟ್ಟದಲ್ಲಿ ಹೇಳಬೇಕೆಂದರೆ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹಲವು ವಿಭಾಗಗಳಲ್ಲಿ ಗಮನಾರ್ಹ ದಾಖಲೆಯ ಪ್ರಶಸ್ತಿಗಳು ಬಂದಿವೆ. ಭಾರತ ಇತರ ರಾಷ್ಟ್ರಗಳ ಸಾಲಿನಲ್ಲಿ ತಂತ್ರಜ್ಞಾನ ವಿಷಯದಲ್ಲೂ ಅಗ್ರಸ್ಥಾನ ಪಡೆದಿದೆ.
2025 ಕ್ಕೆ ವಿದಾಯ ಹೇಳಿ 2026 ನೇ ನೂತನ ವರ್ಷವನ್ನು ಎಲ್ಲರೂ ಸ್ವಾಗತಿಸಿದ್ದೇವೆ. ಈ ಸಂದರ್ಭದಲ್ಲಿ ನಾವು ಹೊಸ ವರ್ಷವನ್ನು ಹೊಸದಾದ ಸಂಕಲ್ಪಗಳೊಂದಿಗೆ ಸ್ವಾಗತಿಸೋಣ.

ನಿಮ್ಮ ಸಂಕಲ್ಪಗಳು ಹೀಗಿರಲಿ……..
ಮೊದಲು ಚಿಕ್ಕ ಚಿಕ್ಕ ಗುರಿ, ನಂತರ ಅದೇ ಚಿಕ್ಕ ಗುರಿಗಳು ಒಂದು ದೊಡ್ಡ ಗುರಿಯಾಗಿ ಮಾರ್ಪಾಡಾಗುವ ಪರಿ ನಿಜಕ್ಕೂ ಸೋಜಿಗ!.
ಕೆಲಸದಲ್ಲಿರುವವರು ಮೊದಲು ವೃತ್ತಿಗೆ ಹೆಚ್ಚಿನ ಸಮಯ ಮೀಸಲಿಟ್ಟು ಕಾರ್ಯಕ್ಷಮತೆ ಹೆಚ್ಚಲು ನೋಡಿಕೊಳ್ಳಬೇಕು. ಅವರ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳಬೇಕು. ಏಕೆಂದರೆ ದಿನಂಪ್ರತಿ ನಾವು ಹೆಚ್ಚು ಒಂದಲ್ಲ ಒಂದು ಕೆಲಸದಲ್ಲಿ ತೊಡಗಬೇಕು. ಇದು ಖಾಸಗಿ ಕಚೇರಿ, ಅಲ್ಲದೇ ಕಾರ್ಖಾನೆ ಇನ್ನಿತರ ಕಡೆ ಕೆಲಸಗಳಲ್ಲಿ ತೊಡಗಿರುವ ನೌಕರವರ್ಗದವರಿಗೂ ಕೂಡ ಇದು ಅನ್ವಯಿಸಬೇಕು.

ಇನ್ನು ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲಿಡುವಂತೆ ನೋಡಿಕೊಂಡು, ಮಕ್ಕಳಿಗೆ ಮಾರ್ಗದರ್ಶಕರಾಗಿರಬೇಕು. ತಂದೆ- ತಾಯಿಗಳು ಇಬ್ಬರೂ ಕೂಡ ಕೆಲಸದಲ್ಲಿ ಇದ್ದರೆ, ಮಕ್ಕಳು ಒಂದು ರೀತಿಯಲ್ಲಿ ಒಂಟಿತನದಿಂದ ಕಾಲ ಕಳೆಯುವಂತಾಗುತ್ತದೆ. ಮೊದಲು ಕುಟುಂಬ ಚೆನ್ನಾಗಿದ್ದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿರುತ್ತದೆ ಎಂಬುದು ಗಮನದಲ್ಲಿರಲಿ.
ನಂತರದಲ್ಲಿ ನಮ್ಮ ಪ್ರವೃತ್ತಿಗಳಿಗೆ….. ಆದ್ಯತೆಗೆ ತಕ್ಕಂತೆ ಸಮಯ ಮೀಸಲಿಡಬೇಕು. ನಮ್ಮ ಯಾಂತ್ರಿಕ ಜೀವನದಲ್ಲಿ ಸದಾ ಒಂದಲ್ಲ ಒಂದು ರೀತಿಯಲ್ಲಿ ಒತ್ತಡ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಸದಭಿರುಚಿಯ ಹವ್ಯಾಸಗಳು ಒಂದು ರೀತಿಯಲ್ಲಿ ನಮಗೆ ನವೋಲ್ಲಾಸ ಮೂಡಿಸುತ್ತದೆ. ಪತ್ರಿಕೆ ಓದುವುದು, ರೇಡಿಯೋ ಕೇಳುವುದು, ಟಿವಿಯಲ್ಲಿ ಉತ್ತಮ ಕಾರ್ಯಕ್ರಮ ವೀಕ್ಷಣೆ ಮಾಡುವುದು, ಬರೆಯುವುದು, ಸಂಗೀತ ಕೇಳುವುದು ಹೀಗೆ ಕಣ್ಣೆದುರು ನಾವು ಹೇಗೆಲ್ಲ ರೂಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
ಇನ್ನು ನಮ್ಮ ಆರೋಗ್ಯ ಕಾಳಜಿಗೂ ಸಹ ಒಂದಿಷ್ಟು ಸಮಯ ಬೇಡವೇ?. ನಾವು ಆರೋಗ್ಯವಾಗಿದ್ದರೆ ತಾನೇ ಮತ್ತಷ್ಟು ಯೋಜನೆಗಳು ಮೂಡಿ ಬರಲು ಸಹಕಾರಿ. ನಿಗದಿತ ವ್ಯಾಯಾಮ ಅತ್ಯಗತ್ಯ. ಯೋಗ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು. ಕೋಪ ಕಡಿಮೆ ಮಾಡಿ, ನಗುನಗುತ್ತಾ ಎಲ್ಲರ ಜೊತೆ ಸುಮಧುರ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು.
ಮೊದಲು ನಮ್ಮ ಆಹಾರ-ವಿಹಾರ ಸರಿಯಾಗಿದ್ದರೆ ಆರೋಗ್ಯದ ಸಮಸ್ಯೆ ಬರುವುದೇ ಇಲ್ಲ. ನಾವು ಹೊಸ ವರ್ಷದಲ್ಲಿ ಮುಂಜಾಗ್ರತಾ ಕ್ರಮ ವಹಿಸಲೇಬೇಕು.

ಸ್ನೇಹಿತರೊಂದಿಗೆ ಒಂದಿಷ್ಟು ಸಮಯ ಮೀಸಲಿಟ್ಟು ಭಾವನೆಗಳನ್ನು ಹಂಚಿಕೊಳ್ಳುವುದು ಜೊತೆಗೆ ಹಾಡು, ಹರಟೆ, ನೆನಪುಗಳ ಮೆರವಣಿಗೆ ಸಾಗಲಿ!.

ಯಾರೊಟ್ಟಿಗೂ ಹೇಳಿಕೊಳ್ಳಲಾಗದ ಸಮಸ್ಯೆಯನ್ನು ನಾವು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಮನಸ್ಸು ಹಗುರವಾಗಿ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತವೆ.

ಮುಖ್ಯವಾಗಿ ನಮ್ಮ ಯುವಜನತೆ ಈ ನಿಟ್ಟಿನಲ್ಲಿ ಗಮನಹರಿಸಿ, ಸದಭಿರುಚಿಯ ಸಂಕಲ್ಪಗಳನ್ನು ಹಾಕಿಕೊಂಡು, ಆ ಸಂಕಲ್ಪಗಳು ನೆರವೇರಲು ಪ್ರತಿಕ್ಷಣ, ಪ್ರತಿದಿನ ನಿರಂತರ ಪ್ರಯತ್ನ ಪಟ್ಟರೆ ಒಂದಲ್ಲ ಒಂದು ದಿನ ಗುರಿ ಮುಟ್ಟಬಹುದು.

ಇವತ್ತಿನ ಪರಿಸ್ಥಿತಿ ಹೇಗಾಗಿದೆ ಎಂದರೆ ನಮ್ಮ ಯುವ ಜನತೆಗೆ ಕೇವಲ ಓದುವುದೇ ಮುಖ್ಯವಾಗುತ್ತಿದೆ. ಇವತ್ತು ಸ್ಪರ್ಧಾ ಪ್ರಪಂಚ ನಿಜ, ಆದರೂ ಕೂಡ ಓದಿನ ಜೊತೆಗೆ ಇತರ ಹವ್ಯಾಸಗಳನ್ನು ಕೂಡ ಮೈಗೂಡಿಸಿಕೊಳ್ಳಬೇಕು. ಯುವಜನತೆ ನಮ್ಮ ಗ್ರಾಮೀಣ ಭಾಗದ ದಿನ ಜೀವನ ಮರೆಯಬಾರದು. ತಂದೆ ತಾಯಿಗಳಿಗೆ ಕೃಷಿ ಚಟುವಟಿಕೆಗಳಲ್ಲೂ ನೆರವಾಗಬೇಕು.

ಸಂಗೀತ, ಓದು-ಬರಹ, ಪ್ರವಾಸ, ಒಳ್ಳೆಯವರ ಸಹವಾಸ ಮಾಡಬೇಕು.

ಓ ಕ್ಷಮಿಸಿ ಮರೆತಿದ್ದೆ! ಮುಖ್ಯವಾಗಿ ಮೊಬೈಲ್ ಬಳಕೆ ಕಡಿಮೆ ಮಾಡುವ ಸಂಕಲ್ಪ ವನ್ನು ನಮ್ಮ ಯುವ ಜನತೆ ಮೊದಲು ಮಾಡಬೇಕು. ಮಾಡಲೇಬೇಕು!!. ಇಲ್ಲವಾದಲ್ಲಿ ನಿಮ್ಮ ಹಲವು ಸಂಕಲ್ಪಗಳು ನೆರವೇರದಂತೆ ಕಡಿವಾಣ ಹಾಕಿ ಬಿಡುತ್ತದೆ!.

ಈ ಮೊಬೈಲ್ ಬಂದು ನಮ್ಮ ಸಂಬಂಧಗಳನ್ನೇ ಹಾಳು ಮಾಡಿದೆ. ಎಲ್ಲರೂ ತಲೆತಗ್ಗಿಸಿಕೊಂಡು ಮೊಬೈಲ್ನಲ್ಲಿ ಮುಳುಗಿ ಬಿಟ್ಟಿರುತ್ತಾರೆ!. ಪರಸ್ಪರ ಮಾತುಕತೆ, ವಿಚಾರ ವಿನಿಮಯ, ಸುಮಧುರ ಭಾವನೆ, ಎಲ್ಲವೂ ಕೂಡ ಈಗ ನಾಪತ್ತೆಯಾಗಿದೆ!.

ಸದಭಿರುಚಿ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಮುನ್ನುಗ್ಗು ವಂತಾಗಬೇಕು. ಬಡವರ, ನೊಂದವರ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ದೇಶಕ್ಕಾಗಿ ಏನಾದರೊಂದು ಕೊಡುಗೆ ನೀಡೋಣ.

ಮಾನವ ಜನ್ಮ ಸಿಗುವುದೇ ಅಪರೂಪ. ಈ ಜನ್ಮದಲ್ಲಿ ನಾವು ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿ, ಒಂದಿಷ್ಟು ಸಾಧನೆಯ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗೋಣ. ಅವು ಮತ್ತಷ್ಟು ಜನರಿಗೆ ಸ್ಪೂರ್ತಿಯಾಗಬಲ್ಲವು.

ಬನ್ನಿ ಸ್ನೇಹಿತರೆ, ಕಳೆದು ಹೋದ ಕಾಲ ಮತ್ತೆ ಸಿಗುವುದಿಲ್ಲ. “ಚಿನ್ನದ ಪ್ರತಿಯೊಂದು ಎಳೆಗಳು ಎಷ್ಟು ಮುಖ್ಯವೋ” ಅದೇ ರೀತಿ “ಸಮಯ” ಬಹುಮುಖ್ಯವಾದದ್ದು. ಯಾರು ಏನು ಮಾಡಲಿ, ಬಿಡಲಿ ಕಾಲ ಮಾತ್ರ ತನ್ನ ಶಿಸ್ತುಬದ್ಧ ದಿನಗಳೊಂದಿಗೆ ನಾಗಾಲೋಟದಲ್ಲಿ ಓಡುತ್ತಲೇ ಇರುತ್ತದೆ. ಕಳೆದು ಹೋದ ಕಾಲ ಯಾವತ್ತೂ ಮರಳಿ ಬರುವುದಿಲ್ಲ.

ಸುಮ್ಮನೆ ಕಾಲಹರಣ ಮಾಡದೆ ಕಾಲಚಕ್ರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು……. ಯೋಜನಾಬದ್ಧ ಸಂಕಲ್ಪಗಳನ್ನು ಹಾಕಿಕೊಂಡು…….ಯಶಸ್ಸು ಪಡೆಯೋಣ.


ಕಾಳಿಹುಂಡಿ ಶಿವಕುಮಾರ್ ಮೈಸೂರು.
ಸಂಘಟಕರು, ಲೇಖಕರು,

Leave a Reply

Your email address will not be published. Required fields are marked *