- ಭಕ್ತಾಧಿಗಳು,ಸಾರ್ವಜನಿಕರ ಅಹವಾಲು ಆಲಿಕೆ
ಚಾಮರಾಜನಗರ: ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಕ್ಷೇತ್ರಕ್ಕೆ ಇಂದು ಭೇಟಿ ನೀಡಿದರು.
ಕ್ಷೇತ್ರದ ಸಿದ್ದಪ್ಪಾಜಿ ದೇವಾಲಯಕ್ಕೆ ಭೇಟಿ ಕೊಟ್ಟರು. ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿ ಅಹವಾಲು ಆಲಿಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಬಸವಣ್ಣನವರ ಸಾಮಾಜಿಕ ಚಳುವಳಿಯ ಹೊರಣ ಈ ಪ್ರದೇಶದಲ್ಲಿನ ನೀಲಗಾರರ ಪರಂಪರೆಯಲ್ಲಿ ಅಡಗಿದೆ.
ರಾಚಪ್ಪಾಜಿ ಸಿದ್ಧಾಪ್ಪಾಜಿ, ದೊಡ್ಡಮ್ಮತಾಯಿ, ಚನ್ನಾಜಮ್ಮ ಅವರು ಸಮಾಜದಲ್ಲಿ ಜಾಗೃತಿ ಮೂಡಿಸಿ ಬದಲಾವಣೆಗೆ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಆರಂಭಿಸಿದ ಚಳುವಳಿಯ ಕಿಡಿ ಆರದಂತೆ ನಾವು ನೋಡಿಕೊಳ್ಳಬೇಕಿದೆ ಎಂದರು.
ವಚನಕಾರರು ಸಾಧಕರು ಮನುಕುಲದ ಉದ್ಧಾರಕ್ಕೆ ತ್ಯಾಗ ಮಾಡಿದ್ದಾರೆ. ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಸಹೋದರರಂತೆ ಸೌಹಾರ್ದವಾಗಿ ಬದುಕುವ ಮೂಲಕ ವಚನಕಾರರ,ಸಾಧಕರ ಸಂದೇಶವನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದರು.
ಐತಿಹಾಸಿಕ ಸಂಗತಿಗಳನ್ನು ರಕ್ಷಣೆ ಮಾಡಲು ಹಾಗೂ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸುವುದು ಪ್ರಾಧಿಕಾರ ರಚನೆಯ ಉದ್ದೇಶವಾಗಿದೆ ಎಂದರು.
ಕುಡಿಯುವ ನೀರು,ರಸ್ತೆಯಂತಹ ಮೂಲ ಸೌಲಭ್ಯಗಳನ್ನು ಒದಗಿಸವುದೇ ಪ್ರಾಧಿಕಾರದ ಆದ್ಯತೆಯಾಗಿದೆ. ಚಿಕ್ಕಲೂರು ಕ್ಷೇತ್ರ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು,ದ್ವಿಪಥ ರಸ್ತೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ಜಿಲ್ಲೆಯ ವಿವಿಧ ಮುಖಂಡರು ಸಚಿವರ ಭೇಟಿಯ ವೇಳೆ ಇದ್ದರು.