ಚಾಮರಾಜನಗರ: ಜಿಲ್ಲಾವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಸ್ತೆ ಸಂಚಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ನೂತನ ಕೆ.ಡಿ.ಪಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಾರ್ವಜನಿಕ ಸಂಚಾರಕ್ಕಾಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿರುವ ರಸ್ತೆಗಳಲ್ಲಿ ಸಂಚಾರಿ ಸುರಕ್ಷತಾ ಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನ ಮಾಡಬೇಕು. ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ರಸ್ತೆಗಳ ಗುಣಮಟ್ಟ ಕಾಪಾಡಬೇಕು. ಅಗತ್ಯವಿರುವೆಡೆ ವೃತ್ತಗಳನ್ನು ನಿರ್ಮಿಸಬೇಕು. ಈ ಸಂಬಂಧ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಮೃತ್ 2.0 ಯೋಜನೆ ಜಿಲ್ಲೆಯಲ್ಲಿ ಕೇಂದ್ರಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮಗಳನ್ನು ನಿಯಾಮಾನುಸಾರ ಅಧಿಕಾರಿಗಳು ನನ್ನನ್ನು ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಅನುಷ್ಟಾನಗೊಳಿಸಬೇಕು. ಬೇಸಿಗೆ ಆರಂಭವಾಗುತ್ತಿರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಜಲಜೀವನ್ ಯೋಜನೆಯಡಿ ಕಾಡಂಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಪಡಿಸದೇ ಸಹಕರಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಜಿಲ್ಲೆಯ ಕಾಡಂಚಿನ ಪ್ರದೇಶಗಳು ಹಾಗೂ ಹಾಡಿಗಳಿಗೆ ಸಮರ್ಪಕ ರಸ್ತೆ, ವಿದ್ಯುದ್ದೀಕರಣ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕಾಮಗಾರಿ ಆರಂಭಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ವಿದ್ಯುದ್ದೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದರು.
ಬಳಿಕ ಮಾತನಾಡಿದ ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಅವರು ಜಿಲ್ಲೆಯಲ್ಲಿ ಬಡತನ ಹಾಗೂ ಅರಿವಿನ ಕೊರತೆಯಿಂದ ಬಾಲ್ಯವಿವಾಹಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಯಾವುದೇ ಭಾಗದಲ್ಲಿ ಬಾಲ್ಯವಿವಾಹ ನಡೆಯುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ತಿಳಿವಳಿಕೆ ಹೇಳಬೇಕು. ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಸಂಸದರಾದ ಸುನಿಲ್ ಬೋಸ್ ಅವರು ನಿರ್ದೇಶನ ನೀಡಿದರು.
ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿಯವರು ಬಾಲ್ಯವಿವಾಹಗಳನ್ನು ತಡೆಯಲು ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಿ ಹೆಚ್ಚಿನ ಪ್ರಗತಿ ಸಾಧಿಸುವ ಪಂಚಾಯಿತಿಗೆ ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಿ ಪ್ರಶಸ್ತಿ ನೀಡುವ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಅವರು ಮಾತನಾಡಿ ಜಿಲ್ಲೆಯಲ್ಲಿ ಬ್ಯಾಂಕುಗಳು ಜನರಿಗೆ ಸಕಾಲದಲ್ಲಿ ಸಾಲ ನೀಡಬೇಕು. ಜನರನ್ನು ಪದೆಪದೇ ಅಲೆದಾಡಿಸಬಾರದು. ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಕೇಂದ್ರಸರ್ಕಾರ ಅನುಷ್ಟಾನ ಮಾಡುತ್ತಿದೆ. ಯೋಜನೆಗಳು ಫಲಪ್ರದವಾಗಬೇಕು. ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಬೇಕು ಎಂದರು.
ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಸಮರ್ಪಕವಾಗಿ ನೀಡಬೇಕು. ಇತ್ತೀಚೆಗೆ ಕಾಣಿಸಿಕೊಂಡಿರುವ ಹಕ್ಕಿಜ್ವರ ಇತರೆಡೆಯಿಂದ ಜಿಲ್ಲೆಗೆ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ವಹಿಸಬೇಕು. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಯಾವುದೇ ಲೋಪಗಳಾಗದಂತೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಕಂಡುಬಂದರೆ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಪ್ರಾಣಹಾನಿ ಸಂಭವಿಸದಂತೆ ಎಚ್ಚರ ವಹಿಸುವಂತೆ ಸಂಸದರಾದ ಸುನಿಲ್ ಬೋಸ್ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿರುವ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ವಿತರಿಸಿದರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related