ಜಗತ್ತಿನ ಅಸ್ಥಿರತೆ, ಅಶಾಂತಿ ನಿವಾರಣೆಗೆ ಭಗವಾನ್ ಮಹಾವೀರರ ಚಿಂತನೆಗಳು ದಾರಿದೀಪ : ಪಿ. ಮರಿಸ್ವಾಮಿ

ಚಾಮರಾಜನಗರ: ಜಗತ್ತಿನ ಅಸ್ಥಿರತೆ, ಅಶಾಂತಿ ನಿವಾರಣೆಗೆ ಭಗವಾನ್ ಮಹಾವೀರರ ಆದರ್ಶ ಚಿಂತನೆಗಳು ದಾರಿದೀಪವಾಗಿವೆ ಎಂದು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಅಭಿಪ್ರಾಯಪಟ್ಟರು.

   ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಪ್ರಪಂಚದಲ್ಲಿ ಎಲ್ಲವೂ ಇದೆ, ಆದರೂ ಜಗತ್ತು ಇಂದು ಅಶಾಂತಿಯ ನೆಲೆವೀಡಾಗಿದೆ. ಇಂದು ಜಗತ್ತನ್ನು ಕಾಡುತ್ತಿರುವ ಅಸ್ಥಿರತೆ, ಅಶಾಂತಿಗೆ ಮಹಾವೀರರ ಸತ್ಯ, ಅಹಿಂಸಾ, ತ್ಯಾಗದ ಚಿಂತನೆಗಳು ಬೆಳಕು ಚೆಲ್ಲಲಿವೆ. ಭಗವಾನ್ ಮಹಾವೀರರು ಜಗತ್ತಿನಲ್ಲಿ ಶಾಂತಿ ನೆಲಸುವ ಕೆಲಸ ಮಾಡಿದವರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ಭಗವಾನ್ ಮಹಾವೀರರ ಅಹಿಂಸಾ ತತ್ವ ಇಂದಿಗೂ ಪ್ರಸ್ತುತ ಹಾಗೂ ಅಗತ್ಯವಾಗಿದೆ ಎಂದರು. 

  ಭಾರತ ಶಾಂತಿಪ್ರಿಯ ದೇಶ, ಭಾರತೀಯರು ಶಾಂತಿಪ್ರಿಯರಾಗಿದ್ದು, ದೇಶದಲ್ಲಿ ಪ್ರತಿಯೊಬ್ಬರು ನೆಮ್ಮದಿ ಹಾಗೂ ಸಂತೃಪ್ತ ಜೀವನ ನಡೆಸಲು ಮಹಾವೀರ, ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ಪುರಂದರದಾಸರು ಸೇರಿದಂತೆ ಅನೇಕ ಸಾಧು ಸಂತರು, ದಾರ್ಶನಿಕರು ಪ್ರಬುದ್ಧ ಚಿಂತಕರು ಕಾರಣರಾಗಿದ್ದಾರೆ. ಅವರ ತತ್ವಸಿದ್ದಾಂತಗಳನ್ನು ನಾವು ಅಳವಡಿಸಿಕೊಂಡು ಮುನ್ನೆಡೆಯಬೇಕು ಎಂದು ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ಅವರು ತಿಳಿಸಿದರು.

  ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಅವರು ಮಾತನಾಡಿ ರಾಜಮನೆತನದಲ್ಲಿ ಹುಟ್ಟಿದ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಕುಟುಂಬ ತೊರೆದು ಜಗತ್ತಿನ ಶಾಂತಿಗಾಗಿ ಶ್ರಮಿಸಿದರು. ಇಂದು ಎಲ್ಲರು ಮನೆ, ಜಮೀನು, ಆಸ್ತಿ, ಸಂಪತ್ತಿನ ಸಂಪಾದನೆಯಲ್ಲಿ ತೊಡಗಿದ್ದಾರೆ. ಮಿತಿಮೀರಿ ಸಂಪಾದಿಸುತ್ತಿದ್ದಾರೆ. ಸಾಮಾನ್ಯ ಜೀವನ ನಡೆಸಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಸಂಪಾದಿಸಬೇಕೆಂದ ಭಗವಾನ್ ಮಹಾವೀರರ ಮೌಲ್ಯಯುತ ಚಿಂತನೆಗಳನ್ನು ಎಲ್ಲರೂ ಅನುಸರಿಬೇಕಾಗಿದೆ ಎಂದರು.

  ಮುಖ್ಯ ಭಾಷಣ ಮಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ಅವರು ಮಹಾವೀರರು ವಿಶ್ವದ ಬೆಳಕು ಎಂದರೇ ತಪ್ಪಾಗಲಾರದು. ಸತ್ಯ, ಧರ್ಮ, ನ್ಯಾಯ, ಅಹಿಂಸೆ ಜೈನಧರ್ಮದ ಪರಂಪರೆಯಾಗಿದೆ. ಈ ಜಗತ್ತು ಅಭಿವೃದ್ಧಿಪಥದಲ್ಲಿ ಸಾಗಿ ಅರ್ಥಿಕ ಮುನ್ನಡೆ ಸಾಧಿಸಿದೆ. ಅರ್ಥಿಕ ಮುನ್ನಡೆ ಅಹಂಕಾರ ಹಾಗೂ ನಾನತ್ವದ ಮೂಲವಾಗಿದೆ. ದೇಶ-ದೇಶಗಳ ನಡುವಿನ ಅಹಂಕಾರ ಪರಮಾವಧಿಯ ಯುದ್ಧದಿಂದ ವಿಶ್ವವೇ ಅಲ್ಲೋಲ ಕಲ್ಲೋಲವಾಗಿ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಮಹಾವೀರರ ಅಹಿಂಸೆ, ತ್ಯಾಗ ಮನೋಭಾವ, ಶಾಂತಿ ಚಿಂತನೆಯೇ ವಿಶ್ವದ ಇಂದಿನ ಪರಿಸ್ಥಿತಿಗೆ ಪರಿಹಾರವಾಗಿದೆ ಎಂದು ತಿಳಿಸಿದರು.

  ಭಾರತ ಪುಣ್ಯಭೂಮಿ, ಕರ್ಮಭೂಮಿಯು ಹೌದು. ಪ್ರತಿಯೊಬ್ಬರ ಬದುಕಿನಲ್ಲಿ ಶಾಂತಿಯ ಮೂಲ ಧ್ಯಾನವಾಗಿದೆ. ಮನುಷ್ಯನಿಗೆ ಇಂದು ಅಂತರಿಕ ಸುಖ ಶಾಂತಿ ಅಗತ್ಯವಾಗಿದೆ. ನನ್ನನ್ನು ನಾನು ಅರಿಯಲು ಮುಂದಾಗಬೇಕು. ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಕಳ್ಳತನ ಮಾಡಬಾರದು, ಸರಳ ಸತ್ಯವನ್ನೇ ನುಡಿಯಬೇಕು. ಶೀಲ, ಸಚ್ಚಾರಿತ್ರ್ಯ, ವ್ಯಕ್ತಿತ್ವ ಹೊಂದಬೇಕು ಎಂಬುದು ಮಹಾವೀರರ ತತ್ವದ ಮೂಲ. ಈ ಭೂಮಿಯಲ್ಲಿ ಸೂರ್ಯ, ಚಂದ್ರ ಇರುವವರಗೆ ಮಹಾವೀರರ ತತ್ವಸಿದ್ದಾಂತಗಳು ಜೀವಂತವಾಗಿರಲಿವೆ. ಚಾಮರಾಜನಗರ ಜಿಲ್ಲ್ಲೆಯೂ ಸಹ ಜೈನಧರ್ಮದ ಪ್ರಸಾರ ಕೇಂದ್ರವಾಗಿತ್ತು. ಜಿಲ್ಲೆಯ ಉಮ್ಮತ್ತೂರು, ಕೆಲಸೂರು, ಬೇಗೂರು, ಚಾಮರಾಜನಗರ, ಇತರೆಡೆ ಜೈನರ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿವೆ ಎಂದು ಋಗ್ವೇದಿ ಅವರು ಹೇಳಿದರು.

  ನಗರಸಭೆ ಪೌರಾಯುಕ್ತರಾದ ಪರಶುರಾಮ ಎಂ. ಛಲವಾದಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಪಾಶ್ರ್ವನಾಥ ದಿಗಂಬರ ಜೈನ ಸಂಘದ ಅಧ್ಯಕ್ಷರಾದ ನಿರ್ಮಲ್‍ಕುಮಾರ್, ಶ್ವೇತಾಂಬರ ಜೈನ ಸಂಘದ ಅಧ್ಯಕ್ಷರಾದ ಕನ್ನಯ್ಯಲಾಲ್, ಮುಖಂಡರಾದ ಉಲ್ಲಾಸ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.         

  ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಬೆಳ್ಳಿರಥದಲ್ಲಿ ಅಲಂಕೃತ ಭಗವಾನ್ ಶ್ರೀ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು.

Leave a Reply

Your email address will not be published. Required fields are marked *