ಸಹಸ್ರಾರು ಸಂಖ್ಯೆಯಲ್ಲಿ ಫಲಾನುಭವಿಗಳು, ಕಾರ್ಯಕರ್ತರು ಭಾಗವಹಿಸಲು ಮನವಿ
ಚಾಮರಾಜನಗರ: ರಾಜ್ಯ ಸರ್ಕಾರ ಬಹು ನಿರೀಕ್ಷೀತ ಯೋಜನೆಗಳಾದ 5 ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ಮಾ. 12 ರಂದು ನಡೆಯಲಿದ್ದು, ಈ ಸಮಾವೇಶಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅನೇಕ ಸಂಪುಟದ ಸಚಿವರು ಆಗಮಿಸುವÀರು. ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ, ಎಂಎಸ್‍ಐಎಲ್‍ಎಂ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾ. 12 ರಂದು ನಡೆಯುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕುರಿತು ಪಕ್ಷದ ಮುಖಂಡರ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂತು 9 ತಿಂಗಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆದುಕೊಂಡಿದ್ದಾರೆ. ಐದು ಗ್ಯಾರಂಟಿಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಅನ್ನ ಭಾಗ್ಯ ಹಾಗೂ ವಿದ್ಯಾನಿಧಿ ಯೋಜನೆಯನ್ನು ಜಾರಿ ಮಾಡಿ, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈ ಎಲ್ಲಾ ಫಲಾನುಭವಿಗಳನ್ನು ಸಂಘಟನೆ ಮಾಡಿ, ಜಿಲ್ಲಾ ಕೇಂದ್ರದಲ್ಲಿ ಮಾ. 12 ರಂದು ಜಿಲ್ಲಾಡಳಿತದಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಆಯೋಜನೆ ಮಾಡಿದೆ. ಜಿಲ್ಲಾಡಳಿತ ವತಿಯಿಂದ ನಡೆಯುವ ಈ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಸಂಘಟಿಸಿ, ಸಮಾವೇಶಕ್ಕೆ ಕರೆತರುವ ಜವಾಬ್ದಾರಿ ನಮ್ಮದಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿರುವ ಗ್ಯಾರಂಟಿ ಯೋಜನೆಯ ಫಲಾನುಭವಿಗಳನ್ನು ಸಂಘಟಿಸಿ, ಸಮಾವೇಶಕ್ಕೆ ಕರೆತರುವ ಮೂಲಕ ಸಮಾವೇಶ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನಮ್ಮ ಪಕ್ಷದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟದ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಿ ನಮ್ಮ ಜಿಲ್ಲೆಯಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸುವುದು ನಮ್ಮ ಅದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರು ಸಹ ಕಾರ್ಯನ್ಮುಖವಾಗಿ ಐದು ಯೋಜನೆಗಳ ಫಲಾನುಭವಿಗಳು ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸುತ್ತಿರುವುದು ಹೆಮ್ಮೆ. ಮಾ. 12 ರಂದು ಸಮಾವೇಶ ಅಭೂತ ಪೂರ್ವ ಯಶಸ್ವಿಯಾಗಬೇಕು. ಇದು ಸರ್ಕಾರಿ ಕಾರ್ಯಕ್ರಮವಾದರು ಸಹ ನಮ್ಮ ನಾಯಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಹಾಗು ಕಾರ್ಯಕರ್ತರು ಫಲಾನುಭವಿಗಳೊಂದಿಗೆ ಸಮಾವೇಶದಲ್ಲಿ ಭಾಗವಹಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಐದು ಗ್ಯಾರಂಟಿಗಳನ್ನು ಜಾರಿ ಮಾಡಿ,ನಮ್ಮ ಸರ್ಕಾರ ಬಹಳ ಯಶಸ್ವಿಯಾಗಿ ಮುನ್ನಡೆಯುವ ಜೊತೆಗೆ ಇತರೇ ರಾಜ್ಯಗಳಿಗೆ ಮಾದರಿಯಾಗಿದೆ. ಏನೂ ಮಾಡದ ಬಿಜೆಪಿ ಕೇವಲ ಧರ್ಮ, ಜಾತಿಗಳ ನಡುವೆ ಕಲಹ ತಂದು ಜನರನ್ನು ಮರಳು ಮಾಡಿ ಮತ ಪಡೆಯುತ್ತಿದೆ. ಐದು ಗ್ಯಾರಂಟಿಗಳ ಮೂಲಕ ಜನರ ಮನಸ್ಸು ಗೆದ್ದಿರುವ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಗೆ ಸಜ್ಜು ಗೊಳಿಸಲು ಈ ಸಮಾವೇಶ ಸಹಕಾರಿಯಾಗಿದೆ. ನಮ್ಮ ನಾಯಕರಿಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರು ಒಗ್ಗಟ್ಟಿನಿಂದ ಮಾಡೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್ ಅಸ್ಗರ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಸಮಾವೇಶವನ್ನು ಯಶಸ್ವಿಗೊಳಿಸಲು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಕ್ರಿಯವಾಗಿ, ಫಲಾನುಭವಿಗಳನ್ನು ಸಂಘಟಿಸಿ, ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಬೇಕು. ಗ್ಯಾರಂಟಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ನಮ್ಮ ಚಾಮರಾಜಗನರ ತಾಲೂಕು ಪ್ರಥಮವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮಕ್ಷೇತ್ರದಿಂದ ಫಲಾನುಭವಿಗಳನ್ನು ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಸಭೆಯಲ್ಲಿ ಅನೇಕ ಮುಖಂಡರು ಮಾತನಾಡಿ, ಸಮಾವೇಶ ಯಶಸ್ವಿ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪು. ಶ್ರೀನಿವಾಸನಾಯಕ, ಸಿ.ಎ. ಮಹದೇವಶೆಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಕೆರೆಹಳ್ಳಿ ನವೀನ್, ರಮೇಶ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಫ್ಜಲ್ ಷರೀಪ್, ಮುಖಂಡರಾದ ಸೈಯದ್ ರಫಿ, ಎಎಚ್‍ಎನ್ ಖಾನ್, ಎಪಿಎಂಸಿ ಅಧ್ಯಕ್ಷ ಸೋಮೇಶ್, ನಿರ್ದೇಶಕರಾದ ಆಲೂರು ಪ್ರದೀಪ್, ಮಾಜಿ ಅಧ್ಯಕ್ಷ ಶಿವಸ್ವಾಮಿ, ನಾಗೇಂದ್ರ, ಮುಖಂಡರಾದ ಮಹೇಶ್‍ಕುದರ್, ಎಸ್‍ಪಿಕೆ ಉಮೇಶ್, ಕಾಗಲವಾಡಿ ಚಂದ್ರು, ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ನಾಗೇಂದ್ರ, ಎಸ್. ರಾಜು, ದೊಡ್ಡರಾಯಪೇಟೆ ಮೂರ್ತಿ, ರವಿಗೌಡ, ಮಹದೇವಸ್ವಾಮಿ, ಮಹದೇವಶೆಟ್ಟಿ, ಮೋಹನ್ ನಗು, ಶಂಕುತಲಾ, ಅಕ್ಷಯ್, ಪುರುಷೋತ್ತಮ್, ಮಹೇಶ್, ರವಿಬಿಸಲವಾಡಿ, ಮೊದಲಾದವರು ಇದ್ದರು.