
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಉದಯವಾಣಿ ವರದಿಗಾರ ಕೆ.ಎಸ್. ಬನಶಂಕರ ಆರಾಧ್ಯ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ 30 ವರ್ಷಗಳಿಂದ ನಾನಾ ಪತ್ರಿಕೆ ಹಾಗೂ ಟಿವಿ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಬನಶಂಕರ ಆರಾಧ್ಯರಿಗೆ 2025ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು, ಆಂದೋಲನ, ಸೂರ್ಯೋದಯ ಪತ್ರಿಕೆ ಹಾಗೂ ಟಿ.ವಿ. 9 ಚಾಮರಾಜನಗರ ಜಿಲ್ಲಾ ವರದಿಗಾರರಾಗಿದ್ದರು. ಇದೀಗ ಕಳೆದ 14 ವರ್ಷಗಳಿಂದ ಉದಯವಾಣಿ ಜಿಲ್ಲಾ ವರದಿಗಾರರಾಗಿದ್ದಾರೆ.
ನರಹಂತಕ ವೀರಪ್ಪನ್ ಕಾರ್ಯಾಚರಣೆಯ ಪ್ರಮುಖ ಘಟನೆಗಳ ವರದಿ, ಡಾ. ರಾಜ್ ಹಾಗೂ ಮಾಜಿ ಸಚಿವ ಎಚ್. ನಾಗಪ್ಪ ಅಪಹರಣ ಸಂದರ್ಭದಲ್ಲಿನ ವರದಿಗಳನ್ನು ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ನಗರದಲ್ಲಿ ನಡೆದ ಆಕ್ಸಿಜನ್ ದುರಂತದ ಸುದ್ದಿಗಳನ್ನು ಎಳೆ ಎಳೆಯಾಗಿ ಕಟ್ಟಿಕೊಟ್ಟಿದ್ದರು.
ಇವರಿಗೆ ಈ ಹಿಂದೆ ಚಾಮರಾಜನಗರ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೇವೆಗಾಗಿ ೨೦೧೪ ರಲ್ಲಿ ವಾರ್ಷಿಕ ಪ್ರಶಸ್ತಿ, ೨೦೧೭ ರಲ್ಲಿ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ಸತ್ಯ ನಾರಾಯಣ್ ಪ್ರಶಸ್ತಿ, ೨೦೨೩ ರಲ್ಲಿ ಚಾಮರಾಜನಗರ ರೋಟರಿ ಸಂಸ್ಥೆ ಪ್ರಶಸ್ತಿ, ೨೦೧೫ ರಲ್ಲಿ ಲಯನ್ಸ್ ಸಂಸ್ಥೆ ಪ್ರಶಸ್ತಿ,. ೨೦೧೬ರಲ್ಲಿ ಚಾಮರಾಜನಗರ ಕನ್ನಡ ಸಂಘಟನೆಗಳ ಪ್ರಶಸ್ತಿಗಳು ಲಭಿಸಿದ್ದವು.
ಅಭಿನಂದನೆ; ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗೆ ಭಾಜನರಾಗಿರುವ ಬನಶಂಕರ ಆರಾಧ್ಯ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಘಟಕವು ಅಭಿನಂದಿಸಿದೆ. ಅಲ್ಲದೇ ಈ ಬಾರಿ ಪ್ರಶಸ್ತಿಗೆ ಜಿಲ್ಲೆಯವರನ್ನು ಪರಿಗಣಿಸಿದ್ದಕ್ಕೆ ರಾಜ್ಯ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದು ಸಂಘದ ಅಧ್ಯಕ್ಷ ಆರ್. ಎನ್. ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ತಿಳಿಸಿದ್ದಾರೆ.