ಚಾಮರಾಜನಗರ: ಮದ್ಯ, ತಂಬಾಕು, ಮಾದಕ ಪದಾರ್ಥಗಳ ಸೇವನೆಯನ್ನು ತ್ಯಜಿಸಲು ದೃಢಸಂಕಲ್ಪ ಮಾಡುವಂತೆ ಸೆಂಟ್‍ಕಿಟ್ ಮತ್ತು ನೆವಿಸ್(ವೆಸ್ಟ್ ಇಂಡೀಸ್)ನ ವಿಂಡ್ಸರ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸನ್ ಮತ್ತು ಬ್ಯಿಹೇವಿಯರ್ ಸೈನ್ಸಸ್ ವಿಭಾಗದ ಮುಖ್ಯಸ್ಥರು ಹಾಗೂ ಪಾಸಿಟಿವ್ ಸೈಕಾಲಜಿಸ್ಟ್ ಪ್ರಾಧ್ಯಾಪಕರಾದ ಡಾ. ವಿ. ಸಂಪತ್ ಅವರು ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಜಿಲ್ಲಾಮಟ್ಟದ ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಮನುಷ್ಯನ ದೇಹದಲ್ಲಿ ಮೆದುಳು ಸೇರಿದಂತೆ ವಿವಿಧ ಅಂಗಾಂಗಳು 25ನೇ ವಯಸ್ಸಿನವರೆಗೆ ಮಾತ್ರ ಬೆಳವಣಿಗೆಯಾಗಲಿವೆ. ಈ ಹಂತದಲ್ಲಿ ದೇಹ ಮತ್ತು ಮನಸ್ಸಿನ ಬೆಳವಣಿಗೆಗೆ ದುಷ್ಪರಿಣಾಮ ಉಂಟುಮಾಡುವ ಮದ್ಯ, ತಂಬಾಕು, ಮಾದಕ ವಸ್ತುಗಳ ಸೇವನೆ ತ್ಯಜಿಸಿ ಆರೋಗ್ಯಕರ ಸಮಾಜ ಕಟ್ಟುವುದು ಇಂದು ಅತ್ಯಾವಶ್ಯಕವಾಗಿದೆ. ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗುವ ವ್ಯಕ್ತಿಗಳನ್ನು ಸಮಾಜದಲ್ಲಿ ದೃಷ್ಠಿಕೋನ ಬದಲಾಗಲಿದೆ. ಇದರಿಂದ ಸಮಾಜ ಹಾಗೂ ಕುಟುಂಬದ ಸ್ವಾಸ್ಥ್ಯ ಹಾಳಗಲಿದೆ. ದುಶ್ಚಟಗಳನ್ನು ತ್ಯಜಿಸಿ ಪ್ರತಿಯೊಬ್ಬರು ಇತರರಿಗೆ ಮಾದರಿಯಾಗುವಂತೆ ಬದುಕಬೇಕು ಎಂದರು.
ಮನುಷ್ಯನ ಮೆದುಳಿನ ಮೇಲೆ ದುಷ್ಪರಿಣಾಮ ಬೀರಿ ಮನಸ್ಸನ್ನು ಬದಲಾಯಿಸುವ ವಸ್ತುಗಳೇ ಮಾದಕ ವಸ್ತುಗಳಾಗಿವೆ. ಬೀಡಿ, ಸಿಗರೇಟ್, ಅಪೀಮು, ಗಾಂಜಾ, ಆಲ್ಕೋಹಾಲ್ ವ್ಯಕ್ತಿಯನ್ನು ಮಾಯೆಯ ಮಾದರಿಯಲ್ಲಿ ಸೆಳೆಯುವ ಮಾದಕ ವಸ್ತುಗಳಾಗಿದ್ದು, 10 ರಿಂದ 15ನೇ ವಯಸ್ಸಿನಲ್ಲಿ ಮಾದಕ ವ್ಯಸನಿಗಳಾಗುವ ಸಂಭವವೇ ಹೆಚ್ಚಾಗಿದೆ. ವ್ಯಕ್ತಿಯ ಜೀವನದಲ್ಲಿ ಬರುವ 25ನೇ ವಯಸ್ಸು ಚಿನ್ನದಂತಹ ಹಂತವಾಗಿದೆ, ಆದರೆ ಅಷ್ಟೇ ಅಪಾಯಕಾರಿ ಹಂತವೂ ಆಗಿದೆ. ಒಮ್ಮೆ ಕುತೂಹಲಕ್ಕಾಗಿ ಬಳಸುವ ಮಾದಕ ವಸ್ತುಗಳು ಮುಂದಿನ ದಿನಗಳಲ್ಲಿ ಚಟವಾಗಿ ಪರಿವರ್ತನೆಯಾಗಲಿದೆ. ಮತ್ತೆ ಅವುಗಳನ್ನು ಬಿಡುವುದು ದುಸ್ಸಾಹಸವೇ ಆಗಲಿದೆ ಎಂದು ಹೇಳಿದರು.
ದೇಶದಲ್ಲಿ 11.8 ಮಿಲಿಯನ್ ಜನರು ಮಾದಕ ವಸ್ತುಗಳ ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 75.5 ರಷ್ಟು ಯುವಜನರು ಮಾದಕ ಪದಾರ್ಥಗಳನ್ನು ಬಳಸುತ್ತಿದ್ದಾರೆ. ಇದು ಮುಂದಿನ ಭವಿಷ್ಯದ ಚಿಂತನೆಯಾಗಿದೆ. ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕವೆಂದು ಅರಿವಿದ್ದರೂ ಸಹ ಪ್ರತಿಷ್ಠೆಗಾಗಿ, ಸಾಮಾಜಿಕ ಹಾಗೂ ವ್ಯಯಕ್ತಿಕ ಸಮಸ್ಯೆಗಳ ಒತ್ತಡದಿಂದ ಹಾಗೂ ಕ್ಷಣಿಕ ಆಸೆಗಾಗಿ ಒಂದುಬಾರಿ ಉಪಯೋಗಿಸಿ ನೋಡುವ ಹಂಬಲ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಸೇವನೆ ತ್ಯಜಿಸಲು ಇಂದೇ ಮನಸ್ಸು ಮಾಡಬೇಕು. ಉತ್ತಮ ಕೌಟುಂಬಿಕ ಹಾಗೂ ಸಾಮಾಜಿಕ ಪ್ರಜ್ಞೆ ಎಲ್ಲರಲ್ಲೂ ಜಾಗೃತವಾಗಬೇಕು ಎಂದರು. ಸ್ವಾಭಾವಿಕವಾಗಿ ಸಾಕಷ್ಟು ವಿಷಕಾರಿ ಅಂಶಗಳು ಮನುಷ್ಯನ ದೇಹ ಸೇರಲಿವೆ. ಜೊತೆಗೆ ಮಾದಕ ವಸ್ತುಗಳ ಸೇವನೆ ದೇಹದ ಜೀವಕೋಶಗಳನ್ನು ನಾಶಗೊಳಿಸಲಿವೆ, 1 ಸಿಗರೇಟ್ ಸೇವನೆಯಿಂದ 7 ಸಾವಿರ ರಸಾಯನಿಕಗಳು ದೇಹ ಪ್ರವೇಶಿಸಲಿವೆ. ಲಿವರ್ ನಾಶವಾಗಲಿದೆ. ಪುರುಷ ಬಂಜೆತನ ಕಾಡಲಿದೆ. ಮನಸ್ಸಿಗೆ ಖುಷಿಕೊಡುವ ಮೆದುಳಿನಲ್ಲಿರುವ ಡೋಕೊಮಿನ್‍ಗೆ ತೀವ್ರ ಹಾನಿಯಾಗಿ ತಿನ್ನುವ ಆಹಾರದಲ್ಲಿ ರುಚಿ ಕ್ಷೀಣಿಸಲಿದೆ. ಅದ್ದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರು ಮಾದಕ ವಸ್ತುಗಳ ಸೇವನೆ ತ್ಯಜಿಸಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಡಾ. ಸಂಪತ್ ಅವರು ಕಿವಿಮಾತು ಹೇಳಿದರು.