ತಳಮಟ್ಟದ ಸಮಸ್ಯೆ ಪರಿಹರಿಸಲು ಗ್ರಾಮ ಸಭೆಗಳನ್ನು ಸದ್ಭಳಕೆ ಮಾಡಿಕೊಳ್ಳಿ

ರಾಜ್ಯ ವಿಕೇಂದ್ರಿಕರಣ ಯೋಜನೆ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಿ.ಆರ್. ಪಾಟೀಲ

ಚಾಮರಾಜನಗರ: ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ತಳಮಟ್ಟದ ಸಮಸ್ಯೆ ಪರಿಹರಿಸಲು ಗ್ರಾಮಸಭೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಿ.ಆರ್. ಪಾಟೀಲ ಅವರು ಸಲಹೆ ಮಾಡಿದರು.

  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ವಿಕೇಂದ್ರಿಕರಣ ಬಲವರ್ಧನೆ ಹಾಗೂ ವಾರ್ಷಿಕ ಕರಡು ಯೋಜನೆ ರೂಪಿಸುವ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಪ್ರತಿಯೊಬ್ಬ ಸಾರ್ವಜನಿಕರು ಗ್ರಾಮಸಭೆಯ ಸದಸ್ಯರಾಗಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಸತಿ, ವಿದ್ಯುತ್ ಸೇರಿದಂತೆ ಇತರೆ ಮೂಲಸೌಲಭ್ಯಗಳ ಸಮಸ್ಯೆಗಳು ಗ್ರಾಮಸ್ಥರಿಗೆ ತಿಳಿದಿರುತ್ತದೆ. ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ನಡೆಯುವ ಗ್ರಾಮಸಭೆಗಳಿಗೆ ಸರ್ಕಾರವು ಹೆಚ್ಚಿನ ಅಧಿಕಾರ ನೀಡಿದೆ. ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ಕೈಗೊಳ್ಳುವ ನಿರ್ಣಯಗಳು ಪ್ರಮುಖವಾಗಲಿವೆ. ಗ್ರಾಮಸಭೆಗಳಲ್ಲಿ ಬಡವರು, ಅವಕಾಶವಂಚಿತರನ್ನು ಗುರುತಿಸಿ ಸರ್ಕಾರದ ಸವಲತ್ತುಗಳನ್ನು ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದರು. 

  ಗ್ರಾಮಪಂಚಾಯಿತಿಗಳು ಗ್ರಾಮಸಭೆಗಳ ಮೂಲಕ ಅನುಷ್ಟಾನಗೊಳಿಸುವ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ, ಮೇಲ್ವಿಚಾರಣೆ, ಮೌಲ್ಯಮಾಪನ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆ ಇಲಾಖೆಯ ಕೈಪಿಡಿಯಲ್ಲಿ ನಿಯಮವಿದೆ. ಅಧಿಕಾರಿಗಳು ಗ್ರಾಮಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಗ್ರಾಮೀಣ ಹಾಗೂ ನಗರ ಯೋಜನೆಗಳನ್ನು ರೂಪಿಸುವಲ್ಲಿ ಅಧಿಕಾರಿಗಳು ಸಕ್ರಿಯರಾಗಬೇಕು. ಅ ಮೂಲಕ ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಸಮಿತಿ ಅಧ್ಯಕ್ಷರು ತಿಳಿಸಿದರು.

  ಅಧಿಕಾರ ವಿಕೇಂದ್ರಿಕರಣ ಬಲವರ್ಧನೆಗೊಳಿಸಲು 2027-28ನೇ ಸಾಲಿಗೆ ವಾರ್ಷಿಕ ಕರಡು ಯೋಜನೆ ರೂಪಿಸಬೇಕಾಗಿದ್ದು, ಗ್ರಾಮಗಳ ಮೂಲ ಸಮಸ್ಯೆಗಳನ್ನು ಪರಾಮರ್ಶಿಸಿ ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳು ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು. ಗ್ರಾಮಸಭೆಗಳಲ್ಲಿ ಗ್ರಾಮೀಣ ಜನರ ಸಲಹೆಗಳಿಗೆ ಆದ್ಯತೆ ನೀಡಬೇಕು. ಅವರ ಕುಂದುಕೊರತೆಗಳಿಗೆ ಕಿವಿಯಾಗಬೇಕು. ಕಾನೂನಿನಡಿ ಸರ್ಕಾರ ಕೊಟ್ಟಿರುವ ಅಧಿಕಾರ ದುರುಪಯೋಗವಾಗದಂತೆ ಜವಾಬ್ದಾರಿಯುತವಾಗಿ ಸದ್ಭಳಕೆ ಮಾಡಿಕೊಂಡು ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ಆಗಮಾತ್ರ ಪಂಚಾಯಿತಿಗಳು ಗ್ರಾಮ ಸರ್ಕಾರಗಳಾಗಿ ಆಡಳಿತ ನಡೆಸಿ ಗ್ರಾಮ ಸ್ವರಾಜ್ಯಗಳಾಗಲು ಸಾಧ್ಯವಾಗಲಿದೆ ಎಂದರು.

  ಗ್ರಾಮಪಂಚಾಯಿತಿಗಳಲ್ಲಿ ನಡೆಯುವ ಗ್ರಾಮಸಭೆಗಳಿಗೆ ಸರ್ಕಾರ ನೀಡಿರುವ ಅಧಿಕಾರವನ್ನು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ವಾರ್ಡ್ ಸಭೆಗಳಿಗೂ ನೀಡಿದೆ. ವಾರ್ಡ್‍ಗಳ ಪ್ರಗತಿಗಾಗಿ ನಗರ, ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಅಲ್ಲಿನ ಜನರ ಜೊತೆ ಚರ್ಚಿಸಿ ಎಲ್ಲರಿಗೂ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಬೇಕು. ವ್ಯವಸ್ಥೆಯಲ್ಲಿ ಯಾವುದೇ ಲೋಪಗಳಾಗದಂತೆ ಗ್ರಾಮಾಭಿವೃದ್ಧಿಗಾಗಿ ತಳಮಟ್ಟದ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಮಿತಿ ಅಧ್ಯಕ್ಷರಾದ ಡಿ.ಆರ್. ಪಾಟೀಲ ಅವರು ತಿಳಿಸಿದರು.

  ಇದೇ ವೇಳೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಪಂಚಾಯತ್ ವ್ಯವಸ್ಥೆ ಕಾಲಕಾಲಕ್ಕೆ ಬದಲಾಗುತ್ತಿದೆ. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಜಿಲ್ಲಾ ಪಂಚಾಯಿತಿ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯವಸ್ಥೆಗಳನ್ನು ಜಾರಿ ಮಾಡಿದರು. ಗ್ರಾಮಪಂಚಾಯಿತಿಗಳ ಅಭಿವೃದ್ಧಿಗೆ ಗ್ರಾಮಸಭೆಗಳು ಪೂರಕವಾದ ಉತ್ತಮ ವ್ಯವಸ್ಥೆಯಾಗಿದೆ. ಗ್ರಾಮಸಭೆಗಳ ನಿರ್ಣಯಗಳಿಗೆ ತುಂಬಾ ಮಹತ್ವವಿದೆ. ಗ್ರಾಮಸಭೆಗಳಲ್ಲಿ ಅಯ್ಕೆಯಾದ ಫಲಾನುಭವಿಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅದರೆ ಗ್ರಾಮಸಭೆಗಳು ಕಾಲಕಾಲಕ್ಕೆ ನಡೆಯದಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.

   ಗ್ರಾಮಸಭೆಗಳನ್ನು ಕ್ರಮಬದ್ಧವಾಗಿ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ರೂಪಿಸಿ ಗ್ರಾಮಸಭೆಯಲ್ಲಿ ಅನುಮೋದನೆ ಪಡೆಯಬೇಕು. ಗ್ರಾಮಸಭೆ ಬಗ್ಗೆ ಜನರಲ್ಲಿ ವಿಶ್ವಾಸ, ನಂಬಿಕೆ ಬರಬೇಕು. ಪಂಚಾಯಿತಿ ಅಧಿಕಾರಿಗಳಿಗೆ ಸರ್ಕಾರ ನೀಡಿರುವ ಅಧಿಕಾರವನ್ನು ಸರಿಯಾಗಿ ನಿಭಾಯಿಸಬೇಕು. ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮದ ಎಲ್ಲಾ ಜನರು ಗ್ರಾಮಸಭೆಯಲ್ಲಿ ಪಾಲ್ಗೊಂಡು ಅಭಿವೃದ್ಧಿಗೆ ಪೂರಕ ಚರ್ಚೆಗಳನ್ನು ನಡೆಸಿದರೆ ಪಂಚಾಯಿತಿ ಆಡಳಿತ ಸಮರ್ಪಕವಾಗಲಿದೆ. ಗ್ರಾಮ ಪಂಚಾಯಿತಿಗಳು ಸದೃಢಗೊಳ್ಳಲಿವೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದರು. 

   ಬಳಿಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಿ.ಆರ್. ಪಾಟೀಲ ಅವರು ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವಶ್ಯ ಸಲಹೆ, ಸೂಚನೆಗಳನ್ನು ನೀಡಿದರು. 

  ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ. ಶೃತಿ, ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್, ವೆಂಕಟೇಶ್, ಜಿಲ್ಲಾಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಮಸ್ಥೆಗಳ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *