- ಮಾರಿಗುಡಿ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಮೆರವಣಿಗೆ ನಗರದಲ್ಲಿ ನಾಯಕ ಸಮುದಾಯದ ಶಕ್ತಿ ಪ್ರದರ್ಶನ
- ನಿರಪರಾಧಿಯ ಮೇಲೆ ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿಗಳ ಅಮಾನತ್ತಿಪಡಿಸುವವರೆಗೂ ಧರಣಿ ಮುಂದುವರಿಯುತ್ತದೆ
- ಮೊಳಗಿದ ವಾಲ್ಮೀಕಿ, ಜೈಭೀಮ್ ಘೋಷಣೆ, ಅಂಬೇಡ್ಕರ್ ರವರ ಪುತ್ಥಳಿ ಗೆ ಮಾಲಾರ್ಪಣೆ
ಚಾಮರಾಜನಗರ: ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ಲೆಕ್ಸ್ ಹರಿದ ಹಾಗೂ ಬುದ್ದರ ಪ್ರತಿಮೆಯನ್ನು ಧ್ವಂಸಗೊಳಿಸಿರುವ ನೈಜ ಅಪರಾಧಿಗಳನ್ನು ಬಂಧಿಸಿ, ನಿರಪರಾಧಿಗಳನ್ನು ಬಿಡುಗಡೆಗೊಳಿಸಬೇಕು, ನಿರಪರಾಧಿ ಬಿಡುಗಡೆಗೊಳಿಸಬೇಕು, ನಿರಪರಾಧಿ ಮೇಲೆ ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಮಾರಿಗುಡಿ ಮುಂಭಾಗದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ಪು.ಶ್ರೀನಿವಾಸನಾಯಕ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ಕೆಲಹೊತ್ತು ರಸ್ತೆತಡೆ ನಡೆಸಿ, ಪೋಲಿಸ್ ದೌರ್ಜನ್ಯ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು. ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣೆ ಆರಂಭಿಸಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ಧರ ಬಗ್ಗೆ ನಾಯಕ ಜನಾಂಗವು ಅತ್ಯಂತ ಪ್ರೀತಿ, ಗೌರವ ಉಳ್ಳವರಾಗಿದ್ದು, ಇತ್ತೀಚೆಗೆ ಚಾಮರಾಜನಗರ ತಾಲ್ಲೂಕು ಜ್ಯೋತಿಗೌಡನಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ಲಕ್ಸ್ ಹರಿದು ಮತ್ತು ಬುದ್ದ ಪ್ರತಿಮೆಯನ್ನು ಧ್ವಂಸಗೊಳಿಸಿರುವುದನ್ನು ಅತ್ಯಂತ ಉಗ್ರವಾಗಿ ಖಂಡಿಸುವುದರ ಜೊತೆಗೆ ಉಗ್ರ ಶಿಕ್ಷೆಗೆ ಒಳಪಡಿಸಲು ಸೂಕ್ತ ಕಾನೂನು ಕೈಗೊಳ್ಳಬೇಕು.
ಆದರೆ ಈ ವಿಷಯದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿದ್ದು, ಪ್ರಾಮಾಣಿಕವಾಗಿ ತನಿಖೆಯನ್ನು ಮಾಡುತ್ತಿಲ್ಲ. ನಿರಪರಾಧಿಗಳನ್ನು ವಿಚಾರಣೆಗೆ ಕರೆದು ದೈಹಿಕವಾಗಿ ಹಲ್ಲೆ ಮಾಡಿರುವ ಅಧಿಕಾರಿಗಳು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ಪು.ಶ್ರೀನಿವಾಸನಾಯಕ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷ ಹೆಚ್.ವಿ.ಚಂದ್ರು, ಯಳಂದೂರು ಉಮಾಶಂಕರ್, ಜಯಸುಂದರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಜಿ.ಪಂ.ಮಾಜಿ ಸದಸ್ಯ ಸೋಮನಾಯಕ, ಯ.ರಾಜುನಾಯಕ, ಕಪಿನಿನಾಯಕ, ಕೃಷ್ಣನಾಯಕ, ಚೆಂಗುಮಣಿ, ಶಿವುವಿರಾಟ್, ಬುಲೆಟ್ ಚಂದ್ರು, ರಾಜೇಶ್, ನಾಗೇಂದ್ರ, ಚಂದ್ರಶೇಖರ್, ಸೋಮೇಶ್, ರಾಮನಾಯಕ, ಚಾ.ಸಿ.ಸೋಮನಾಯಕ, ಅಜಯ್ ಗೌಸ್, ಶಿವರಾಜ್, ಶಿವರಾಮು, ವರದನಾಯಕ, ಮಹೇಂದ್ರ, ಗಣೇಶ್, ಚಂದ್ರಶೇಖರ್, ವೆಂಕಟೇಶ್, ಸುರೇಶ್ ನಾಗ್, ರಾಮಚಂದ್ರನಾಯಕ, ಅಗರರಾಜು , ಶಕುಂತಲಾ,ಗೀತಾ ಸಿದ್ದರಾಜು, ರೇಖಾ, ನಾರಾಯಣ್ ಹಾಗೂ ಜಿಲ್ಲೆಯ ಎಲ್ಲ ಗ್ರಾಮದ ನಾಯಕ ಜನಾಂಗದ ಯಜಮಾನರು, ಕುಲಸ್ಥರು ಭಾಗವಹಿಸಿದ್ದರು.