ಚಾಮರಾಜನಗರ: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟ ವತಿಯಿಂದ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು
ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಳ್ಳಿ ವೃತ್ತ, ಪಚ್ಚಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ನಂತರ ಮೆರವಣಿಗೆಯು ,ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಬಸವನಪುರ ರಾಜಶೇಖರ ಮಾತನಾಡಿ, ಕಳೆದ 36 ವರ್ಷಗಳಿಂದಲೂ ಒಳಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರಲಾಗಿದ್ದು, ಒಳಮೀಸಲಾತಿ ವಿಧೇಯಕವು ರಾಜ್ಯಪಾಲರ ಸಹಿ ಪಡೆದು ಅನುಮೋದನೆಗೊಂಡಿದೆ ಎಂದು ಸಂತೋಷ ಪಡುವ ಸಂದರ್ಭದಲ್ಲಿ ಒಳ ಮೀಸಲಾತಿ ಅನ್ವಯವಾಗದಂತೆ 56,462 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂಬ ಮಾರ್ಚ್16ರ ಸಚಿವ ಸಂಪುಟದ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ಘೋರ ಅನ್ಯಾಯವಾಗಿದೆ. ಆ ಮೂಲಕ 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹ ಎಸೆಯಲಾಗಿದೆ. ಸರ್ಕಾರದ ಈ ತೀರ್ಮಾನವನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದರು.
ಚುನಾವಣೆ ಪೂರ್ವದಲ್ಲಿ ಸರ್ಕಾರ ಬಂದ ಮೊದಲನೇ ಅಧಿವೇಶನದಲ್ಲಿಯೇ ಒಳ ಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಚಿತ್ರದುರ್ಗ ಸಮಾವೇಶದಲ್ಲಿಯೂ ಅದೇ ಭರವಸೆ ನೀಡಲಾಗಿತ್ತು. ಸರ್ಕಾರ ಬಂದು 2 ವರ್ಷ ಮುಗಿಯುತ್ತಿದ್ದರೂ ಒಳಮೀಸಲಾತಿಯನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಹೋರಾಟದ ಒತ್ತಡಕ್ಕೆ ಮಣಿದು ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಗೆ ತರುತ್ತೇವೆಂದು ತಾತ್ವಿಕವಾಗಿ ಒಪ್ಪಿಕೊಂಡು 25
2025 ಆಗಸ್ಟ್ 25 ರಂದು ಆದೇಶ ಹೊರಡಿಸಿದ್ದೀರಿ. 2025ರ ಚಳಿಗಾಲದ ಅಧಿವೇಶನದಲ್ಲಿ ಶಾಸನ ಬದ್ದ ಕಾಯ್ದೆ ಮಾಡಿಕೊಂಡು ರಾಜ್ಯಪಾಲರಿಂದ ಅಂತಿಮ ಅಂಗೀಕಾರ ಪಡೆಯಲಾಗಿದೆ. ಇಷ್ಟೆಲ್ಲ ಇದ್ದರೂ ಒಳ ಮೀಸಲಾತಿ ಇಲ್ಲದೇ ನೇಮಕಾತಿಗಳನ್ನು ಭರ್ತಿ ಮಾಡುವಂತೆ ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲ ಎಂಬುದನ್ನು ಸಾರುತ್ತದೆ ಎಂದರು.
ಭಾರತದ ಹಲವಾರು ರಾಜ್ಯದಲ್ಲಿ ಪ.ಜಾತಿ/ಪ.ಪಂಗಡ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಅನುಷ್ಠಾನ ಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ 2022 ಡಿಸೆಂಬರ್ 28ರಂದು ಜಾರಿಗೆ ಬಂದ ಪ.ಜಾ 17% ಮತ್ತು ಪ.ಪಂ 7% ಮೀಸಲು ಪ್ರಮಾಣ ಹೆಚ್ಚಳದಂತೆ ಉದ್ಯೋಗಗಳನ್ನು ನೀಡದೆ ಪರಿಶಿಷ್ಟ ಜಾತಿಗೆ 2% ಕಡಿತ ಎಂದರೆ 1129 ಮತ್ತು ಪರಿಶಿಷ್ಟ ಪಂಗಡಕ್ಕೆ 4% ಕಡಿತ ಎಂದರೆ 2,258 ಒಟ್ಟು ಪ.ಜಾ-ಪ.ಪ ದಲಿತ ಸಮುದಾಯಕ್ಕೆ ಸಿಗಬೇಕಾದ 3387ಕ್ಕು ಹೆಚ್ಚಿನ ಹುದ್ದೆಗಳನ್ನು ತಪ್ಪಿಸಿ 56,432ಹುದ್ದೆಗಳ ಭರ್ತಿಗೆ ಮುಂದಾದ ಪರಿಶಿಷ್ಟ ಜಾತಿಗಳ ವಿರೋಧಿ ನೀತಿಯ ಆದೇಶ ಹಿಂಪಡೆಯಬೇಕು.ಸರ್ಕಾರ ನುಡಿದಂತೆ ನಡೆಯಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.
ಅಧ್ಯಕ್ಷ ಹೆಚ್.ಹೆಚ್ ನಾಗರಾಜು ಮಾತನಾಡಿ, ನ್ಯಾ.ನಾಗಮೋಹನ್ ದಾಸ್ ಅವರ ಒಳಮೀಸಲಾತಿಯನ್ನು ಸರ್ಕಾರ ಕೂಡಲೇ ಯಥಾವತ್ತಾಗಿ ಜಾರಿ ಮಾಡಬೇಕು. ಒಳಮೀಸಲಾತಿ ಇಲ್ಲದೆ ರಾಜ್ಯ ಸರ್ಕಾರವು ಯಾವುದೇ ಹುದ್ದೆಗಳನ್ನು ಭರ್ತಿ ಮಾಡಬಾರದು. ಒಳಮೀಸಲಾತಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅರಕಲವಾಡಿ ಜವರಯ್ಯ, ಅರಕಲವಾಡಿ ನಾಗೇಂದ್ರ, ಚಾ.ಗು.ನಾಗರಾಜ್, ವಕೀಲರಾದ ಬೂದಿತಿಟ್ಟು ರಾಜೇಂದ್ರ, ಬ್ಯಾಂಕ್ ಬಸವರಾಜು, ಎಲ್ ಐಸಿ ರಾಜಣ್ಣ, ಹಸಗೂಲಿ ಸಿದ್ದಯ್ಯ, ಮೂಡಹಳ್ಳಿ ಮೂರ್ತಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಮೂಡಹಳ್ಳಿ ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್, ಮುಖಂಡರಾದ ಎಲ್ ಐಸಿ ರಾಜಣ್ಣ, ಕೆಸ್ತೂರುಮರಪ್ಪ , ಸಿ.ಎಚ್.ರಂಗಸ್ವಾಮಿ, ಮೂಡಹಳ್ಳಿ ರಾಚಪ್ಪ, ರಾಮಸಮುದ್ರ ಶಿವಣ್ಣ, ದ್ವಾರ್ಕಿ ಬಸವರಾಜು, ಶಿವಮಲ್ಲು, ಗೋಪಿ, ಸುನೀಲ್, ವಸಂತ್,ಹನುಮಂತು, ಚಂದ್ರು, ಹನೂರು ಗುರುಸ್ವಾಮಿ, ಬೂದುಬಾಳು ಮಹದೇವು, ಡಾ.ದುಂಡಯ್ಯ ವಕೀಲರಾದ ಸಿದ್ದೇಶ್, ಸಿದ್ದಯ್ಯ, ಪ್ರಭು, ಬೆಳ್ಳಿಯಪ್ಪ, ಸುಂದರ್, ಲಿಂಗರಾಜು, ನಾಗಮಲ್ಲು, ಶಿವಣ್ಣ, ಮುರುಗೇಶ್, ಗಣೇಶಪ್ಪ ಇತರರು ಭಾಗವಹಿಸಿದ್ದರು.
, ಇತರರು ಭಾಗವಹಿಸಿದ್ದರು.