ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವು ನಗರದಲ್ಲಿಂದು ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ರೇಣುಕಾಚಾರ್ಯರು ಇಷ್ಟಲಿಂಗ ಪೂಜೆಯ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೇಲೆ ಅರಿತುಕೊಳ್ಳಬೇಕೆಂಬ ತತ್ವವನ್ನು ಪ್ರಚಾರ ಮಾಡಿದರು. ಸಮಾಜದಲ್ಲಿ ಮೇಲು ಕೀಳು ಎಂಬುದು ಇಲ್ಲ. ಎಲ್ಲರು ಸಮಾನರೆಂದು ಸಾರಿದರು. ಸಮಾಜದ ಸಮಾನತೆ ಧಾರ್ಮಿಕ ಸಾಮರಸ್ಯತೆಗೆ ರೇಣುಕಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನಾ) ಅವರು ರೇಣುಕಾಚಾರ್ಯರ ತತ್ವ ಸಿದ್ದಾಂತಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ. ಅವರ ಆದರ್ಶ ಮಾರ್ಗದರ್ಶನ ಸಮಾಜಕ್ಕೆ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವದ ಶುಭಾಶಯಗಳನ್ನು ಕೋರುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ರೇಣುಕಾಚಾರ್ಯರು ಅದ್ವೈತ ತತ್ವವನ್ನ ಪ್ರತಿಪಾದಿಸಿ ಎಲ್ಲ ಜೀವಿಗಳಲ್ಲೂ ಶಿವನ ಅಂಶವಿದೆ ಎಂದರು. ಇಷ್ಟಲಿಂಗವನ್ನು ಧರಿಸುವ ಮೂಲಕ ನಿತ್ಯ ಶಿವನೊಂದಿಗೆ ಸಂಬಂಧವನ್ನು ಕಾಪಾಡಬೇಕೆಂಬ ತತ್ವವನ್ನು ಅವರು ಬೋಧಿಸಿದರು ಎಂದು ತಿಳಿಸಿದರು.
ದಾರ್ಶನಿಕರ, ಮಹಪುರುಷರ ಜಯಂತಿಗಳನ್ನು ಆಚರಿಸುವ ಉದ್ದೇಶ ಅವರ ಆದರ್ಶಗಳಿಂದ ಜಗತ್ತು ಬೆಳಕಾಗಲಿ ಎಂಬುದೇ ಆಗಿದೆ. ಇವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸರ್ವರ ಶ್ರೇಯಸ್ಸು ಬಯಸಬೇಕು ಎಂಬುದು ಮುಖ್ಯ ಅಶಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು.
ಇದೇ ವೇಳೆ ರೇಣುಕಾಚಾರ್ಯರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ನಮಿಸಿದರು. ಪಾರ್ವತಿ ಮಹಿಳಾ ಸಮಾಜದ ಆಶಾ ರಮೇಶ ಹಾಗೂ ತಂಡದವರು ಭಕ್ತಿ ಗೀತೆ ಗಾಯನ ನಡೆಸಿಕೊಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಪೂರ್ವ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಿ.ಪಿ. ನವೀನ್, ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ್, ಹೆಚ್.ಬಿ. ವಿಶ್ವಕುಮಾರ್, ಮಹದೇವಸ್ವಾಮಿ, ಮಂಜುನಾಥ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related