

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿಂದು ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 156ನೇ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಹೊರವಲಯದ ಯಡಬೆಟ್ಟದ ಬಳಿಯ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಪಕ್ಕದಲ್ಲಿರುವ ಗಾಂಧೀ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿಜೀಯವರ ಪುತ್ಥಳಿಗೆ ಮಾಲಾರ್ಪಣೆ, ಗಾಂಧಿಜೀಯವರಿಗೆ ಪ್ರಿಯವಾದ ಭಜನೆ, ಮಕ್ಕಳಿಂದ ಗಾಂಧೀ ವೇಷಭೂಷಣ ಪ್ರದರ್ಶನ, ಬಾಪೂಜೀ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸೇರಿದಂತೆ ಇತರೆ ಕಾರ್ಯಕ್ರಮಗಳ ಮೂಲಕ ಗಾಂಧಿ ಜಯಂತಿಯನ್ನು ಸ್ಮರಣೀಯಗೊಳಿಸಲಾಯಿತು.
ಜಯಂತಿ ಅಂಗವಾಗಿ ಮೊದಲಿಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 121ನೇ ಜನ್ಮದಿನ ಪ್ರಯುಕ್ತ ಗಣ್ಯರ ಭಾವಚಿತ್ರಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಇತರೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಗಣ್ಯರು ಕಾರ್ಯಕ್ರಮದ ಜ್ಯೋತಿ ಬೆಳಗಿಸಿದರು. ಗಾಂಧಿಜೀಯವರಿಗೆ ಪ್ರಿಯವಾದ ಭಜನಾ ಕಾರ್ಯಕ್ರಮವನ್ನು ಕಲಾವಿದರಾದ ಮಾಂಬಳ್ಳಿ ಅರುಣ್ ಕುಮಾರ್ ಮತ್ತು ತಂಡದವರು ನಡೆಸಿಕೊಟ್ಟರು. ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಪ್ರೌಢಶಾಲಾ, ಪದವಿ ಪೂರ್ವ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಇದೇ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಈ ಬಾರಿಯ ಗಾಂಧಿ ಜಯಂತಿ ಕಾರ್ಯಕ್ರಮವನ್ನು ವಿಶೇಷವಾಗಿ ಮಕ್ಕಳ ಜೊತೆ ಆಚರಿಸಲಾಗುತ್ತಿದೆ. ಮಕ್ಕಳು ಎಂದರೇ ಗಾಂಧಿಜೀಯವರಿಗೆ ಅಚ್ಚುಮೆಚ್ಚು. ಗಾಂಧಿಜೀ ಬಹಳ ತಮ್ಮ ಜೀವನದುದ್ದಕ್ಕೂ ಸರಳ ಜೀವನ ನಡೆಸಿದವರು. ಅವರ ಸರಳತೆ, ಸಜ್ಜನಿಕೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅವರ ಹಾದಿಯಲ್ಲಿ ಮುನ್ನೆಡೆಯಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಗಾಂಧಿಜೀಯವರ ಅತ್ಯ, ಅಹಿಂಸೆ, ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಮಾರ್ಗದರ್ಶನ ನಮಗೆ ಅವಶ್ಯವಾಗಿದೆ. ದೇಶಕಟ್ಟಲು ಗಾಂಧಿಜೀಯವರ ವ್ಯಕ್ತಿತ್ವ ಅನುಕರಣೀಯ, ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ತಹಸೀಲ್ದಾರ್ ಗಿರಿಜಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ರಮೇಶ್, ವಾರ್ತಾ ಸಹಾಯಕರಾದ ಸುರೇಶ್‍ಕುಮಾರ್, ಜಿಲ್ಲಾಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿಜೀಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲೆಯ ಹನೂರು ತಾಲೂಕಿನ ಶ್ರೀ ವಿವೇಕಾನಂದ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಎಸ್. ಸಮೀಕ್ಷಾ ಅವರು ಪ್ರಥಮ, ದಿವ್ಯಾ ಎಸ್. ಅವರು ದ್ವಿತೀಯ, ಮಹಾಲಕ್ಷ್ಮೀ ತೃತೀಯ ಹಾಗೂ ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ಚಾಮರಾಜನಗರ ತಾಲೂಕು ಅರಕಲವಾಡಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಐಶ್ವರ್ಯ ಅವರು ಪ್ರಥಮ, ಎಂ. ರಂಜಿತಾ ದ್ವಿತೀಯ, ಪ್ರಣತಿ ಎಂ. ತೃತೀಯ ಮತ್ತು ಪದವಿ-ಸ್ನಾತಕೋತ್ತರ ಪದವಿ ವಿಭಾಗದಲ್ಲಿ ನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಸುಮ ಅವರು ಪ್ರಥಮ, ಮಂಗಳಗೌರಿ ಎನ್. ದ್ವಿತೀಯ ಹಾಗೂ ಸಯಿಮಾ ಹಬೀಬ್ ಅವರು ತೃತಿಯ ಸ್ಥಾನ ಪಡೆದು ಕಾರ್ಯಕ್ರಮದಲ್ಲಿ ಬಹುಮಾನ ಸ್ವೀಕರಿಸಿದರು.