ಅರಣ್ಯ ಹುತಾತ್ಮರ ದಿನದ ಅರ್ಥಪೂರ್ಣ ಸ್ಮರಣೆ : ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ

ಚಾಮರಾಜನಗರ: ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣಾ ದಿನವನ್ನು ನಗರದ ಗುಂಡ್ಲುಪೇಟೆ ವೃತ್ತದ ಬಳಿ ಇರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕದಲ್ಲಿಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅರಣ್ಯ ಇಲಾಖೆಯ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಪ್ರಭಾವತಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಶ್ರೀಪತಿ, ಇತರೆ ಗಣ್ಯರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ನಮನ ಸಲ್ಲಿಸಿದರು. 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ನಾಡಿನ ಅಮೂಲ್ಯ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆ ಕಾರ್ಯದಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಶ್ರಮ ಅರಣ್ಯ ಕಳ್ಳಸಾಗಣೆ, ಮರಗಳ್ಳರು, ದಂತಚೋರರೊಂದಿಗೆ ಹೋರಾಡಿ ಬಲಿದಾನಗೈದ ಹುತಾತ್ಮರ ಸ್ಮರಣೆ ಅವಶ್ಯವಾಗಿದೆ. ಹುತಾತ್ಮರ ಕುಟುಂಬಕ್ಕೆ ಸಾಂತ್ವಾನ, ಧೈರ್ಯ ತುಂಬಬೇಕಿದೆ ಎಂದರು.

ದೇಶಾದ್ಯಂತ ಸೆಪ್ಟೆಂಬರ್ 11ರಂದು ಅರಣ್ಯ ಹುತಾತ್ಮರ ಸ್ಮರಣಾ ದಿನವನ್ನು ಆಚರಿಸಲಾಗುತ್ತಿದೆ. ದಿ. ಪಿ. ಶ್ರೀನಿವಾಸ್ ಅವರಿಗೆ ಭಾರತ ಸರ್ಕಾರ ಕೀರ್ತಿಚಕ್ರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಅಸಾಧಾರಣಾ, ಧೈರ್ಯಶೀಲ ಪ್ರಯತ್ನಗಳಿಂದ ಸಮರ್ಪಣಾ ಮನೋಭಾವದಿಂದ ಹುತಾತ್ಮರಾದ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ಸೆಪ್ಟೆಂಬರ್ 11 ಬಹಳ ಮಹತ್ವಪೂರ್ಣ ದಿನವಾಗಿದೆ. 1730ರ ಸೆಪ್ಟೆಂಬರ್ 11ರಂದು ಅಂದರೆ 295 ವರ್ಷಗಳ ಹಿಂದೆ ಜೋಧ್‍ಪುರ ಮಹಾರಾಜ ಅಭಯ್‍ಸಿಂಗ್ ಅರಮನೆ ಕಟ್ಟಲು ಅಗತ್ಯವಿದ್ದ ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ತನ್ನ ಸೈನಿಕರಿಗೆ ಆದೇಶವಿತ್ತ. ಆದರೆ ಇದಕ್ಕೆ ಅವಕಾಶ ನೀಡದ ಬಿಷ್ಣೋಯಿ ಸಮುದಾಯದ ಪುರುಷ, ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 363 ಜನರನ್ನು ಸೈನಿಕರು ಕೊಂದರು. ನೈಸರ್ಗಿಕ ಸಂಪತ್ತು,  ಪರಿಸರ ಸಂರಕ್ಷಣೆಗಾಗಿ ಬಿಷ್ಣೋಯಿ ಜನರ ತ್ಯಾಗ, ಬಲಿದಾನ ಸ್ಮರಿಸಲು ಭಾರತ ಸರ್ಕಾರ ರಾಷ್ಟ್ರೀಯ ಹುತಾತ್ಮ ದಿನವೆಂದು ಘೋಷಿಸಿದ್ದು, ಪ್ರತಿವರ್ಷ ಹುತಾತ್ಮರನ್ನು ಸ್ಮರಿಸಲಾಗುತ್ತಿದೆ ಎಂದು ನ್ಯಾಯಾಧೀಶರಾದ ಪ್ರಭಾವತಿ ಅವರು ತಿಳಿಸಿದರು.

ಬಿಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಶ್ರೀಪತಿ ಅವರು ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎನ್. ಮಂಜುನಾಥ ಅವರು ಹುತಾತ್ಮರ ನಾಮವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ನಂತರ ಪೊಲೀಸ್ ವಾದ್ಯವೃಂದದಿಂದ ಶತಶತಮಾನಗಳ ಚಿರನೂತನ ಗೀತೆ ‘ಅಬೈಡ್ ವಿತ್ ಮಿ’ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.    

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‍ಕರ್ ಅಕ್ಷಯ್ ಅಶೋಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಅರಣ್ಯ ಇಲಾಖೆಯ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *