ಚಾಮರಾಜನಗರ: ನಾಗಾಪುರ ದೀಕ್ಷಾಭೂಮಿಗೆ ಪ್ರವಾಸ ಹೊರಟ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳ ಬಸ್‍ಗಳಿಗೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಚಾಲನೆ ನೀಡಿದರು.
ನಗರದಲ್ಲಿಂದು ಚಾಮರಾಜನಗರ ತಾಲೂಕಿನಿಂದ ನಾಗಾಪುರ ದೀಕ್ಷಾಭೂಮಿಗೆ ಹೊರಟ 2 ಬಸ್‍ಗಳಿಗೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಸಿರು ನಿಶಾನೆ ತೋರಿದರು. ಬುದ್ಧ ವಂದನೆ ಸ್ವೀಕರಿಸಿ ಪ್ರವಾಸ ಹೊರಟವರಿಗೆ ಶುಭ ಹಾರೈಸಿದರು.
ದೀಕ್ಷಾ ಭೂಮಿಗೆ ಪ್ರವಾಸ ಹೊರಟವರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ ಸ್ಥಳ ದೀಕ್ಷಾ ಭೂಮಿಗೆ ಯಾತ್ರೆಗಾಗಿ ಉಚಿತ ಪ್ರವಾಸವನ್ನು ಸರ್ಕಾರದ ವತಿಯಿಂದ ಕಲ್ಪಿಸಲಾಗಿದೆ ಎಂದರು.
ನಾಗಾಪುರ ದೀಕ್ಷಾ ಭೂಮಿ ಪ್ರಸಿದ್ದ ಯಾತ್ರಾಸ್ಥಳವಾಗಿದ್ದು, ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಅಂಬೇಡ್ಕರ್ ಅನುಯಾಯಿಗಳು ಭೇಟಿ ನೀಡಿ ದೀಕ್ಷಾ ಭೂಮಿಯ ದರ್ಶನ ಪಡೆಯುತ್ತಿದ್ದಾರೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದ ಅವರು ಪ್ರವಾಸ ಹೊರಟವರು ತಂಡದ ಜೊತೆಯೇ ಇದ್ದು, ಅವಶ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ನಳಂದ ಬೌದ್ಧ ವಿಹಾರದ ಮಹೇಶ್, ಅಧಿಕಾರಿಗಳು, ಇತರರು ಇದೇ ಸಂದರ್ಭದಲ್ಲಿ ಇದ್ದರು.
ನಾಗಾಪುರದಲ್ಲಿರುವ ದೀಕ್ಷಾ ಭೂಮಿಗೆ ಪ್ರವಾಸ ಹೊರಡುವವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಸಹ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಿಂದ ಒಟ್ಟು 10 ಬಸ್‍ಗಳು ದೀಕ್ಷಾ ಭೂಮಿಗೆ ಪ್ರವಾಸ ಹೊರಟವು. ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನಿಂದ ತಲಾ 3, ಚಾಮರಾಜನಗರ 2 ಮತ್ತು ಗುಂಡ್ಲುಪೇಟೆ ಹಾಗೂ ಯಳಂದೂರು ತಾಲೂಕಿನಿಂದ ತಲಾ 1 ಬಸ್‍ಗಳಲ್ಲಿ ಪ್ರವಾಸಕ್ಕಾಗಿ ನೊಂದಾಯಿಸಿಕೊಂಡಿದ್ದ ಜಿಲ್ಲೆಯ ಒಟ್ಟು 395 ಮಂದಿ ಅನುಯಾಯಿಗಳು ದೀಕ್ಷಾ ಭೂಮಿ ಪ್ರವಾಸಕ್ಕೆ ಹೊರಟರು.