ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಉತ್ಪಾದಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ, ಮಾರಾಟ ಮೇಳಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ

ಚಾಮರಾಜನಗರ, ಮಾರ್ಚ್ 07 (ಕರ್ನಾಟಕ ವಾರ್ತೆ):- ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘದ ಗುಂಪುಗಳ ಸದಸ್ಯರು ಉತ್ಪಾದಿಸಿರುವ ಉತ್ಪನ್ನಗಳ ಮೂರು ದಿನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿ ಇಂದು ಚಾಲನೆ ನೀಡಿದರು.

      ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಮಾರ್ಚ್ 7 ರಿಂದ 9 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಯೋಜಿಸಲಾಗಿರುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಶಾಸಕರು ಉದ್ಘಾಟಿಸಿ ಮಾರಾಟ ಮಳಿಗೆಗಳನ್ನು ವೀಕ್ಷಿಸಿದರು. 

      ಪ್ರತಿ ಮಳಿಗೆಗೂ ಭೇಟಿ ನೀಡಿ ಅಲ್ಲಿ ಇಡಲಾಗಿದ್ದ ವಿವಿಧ ಬಗೆಯ ಉತ್ಪನ್ನಗಳು ಹಾಗೂ ತಯಾರಿ, ಆದಾಯ ಕುರಿತು ಮಹಿಳಾ ಸದಸ್ಯರಿಂದಲೇ ಶಾಸಕರು ಮಾಹಿತಿ ಪಡೆದರು. ಹಲವು ಮಳಿಗೆಗಳಲ್ಲಿ ಶಾಸಕರು ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಾರಾಟಕ್ಕೆ ಉತ್ತೇಜನ ನೀಡಿದರು. ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದ್ದ ಪಾನಿಪುರಿಯನ್ನು ಶಾಸಕರು ಸವಿದರು. 

      ಇದೇ ವೇಳೆ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದಲೂ ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳ ಮಾರಾಟಕ್ಕಾಗಿ ಮಳಿಗೆಯೊಂದನ್ನು ತೆರೆಯಲಾಗುವುದು. ಈ ಮೂಲಕ ಸ್ಥಳೀಯರಿಗೆ ಉತ್ತೇಜನ ನೀಡಲಾಗುವುದು ಎಂದರು. 

      ಮಹಿಳೆಯರು ಹಲವು ಗೃಹ ಕೈಗಾರಿಕೆಗಳಲ್ಲಿ ತೊಡಗಿ ಹಪ್ಪಳ, ಉಪ್ಪಿನಕಾಯಿ, ಜೇನುತುಪ್ಪ, ಬಿದಿರು ಬುಟ್ಟಿ ಸೇರಿದಂತೆ ಅನೇಕ ಕರಕುಶಲ ವಸ್ತುಗಳು, ತಿನಿಸುಗಳನ್ನು ತಯಾರಿಸುತ್ತಿದ್ದಾರೆ. ಸ್ವಾವಲಂಬಿ ಜೀವನಕ್ಕಾಗಿ ಮಹಿಳೆಯರು ಇಂದು ಹೆಚ್ಚು ಸಂಖ್ಯೆಯಲ್ಲಿ ಇಂತಹ ಉತ್ಪನ್ನಗಳನ್ನು ಸಹಾಯ ಸಂಘಗಳ ಮೂಲಕ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ಆರ್ಥಿಕ ಸಬಲೀಕರಣಕ್ಕೂ ಅನುಕೂಲವಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. 

      ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪಕಾರ್ಯದರ್ಶಿಗಳು ಹಾಗೂ ಎನ್.ಆರ್.ಎಲ್.ಎಂ ನೋಡಲ್ ಅಧಿಕಾರಿ ಶೃತಿ, ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕೌಶಲ್ಯಭಿವೃದ್ದಿ ಇಲಾಖೆಯ ಮಲ್ಲೇಶ್, ವೆಂಕಟನಾಯಕ್, ಇತರೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *