ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ ಅಭಿಯಾನಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಂದ ಚಾಲನೆ

ಚಾಮರಾಜನಗರ: ರೇಬಿಸ್ ರೋಗ ನಿಯಂತ್ರಣಕ್ಕಾಗಿ ಶ್ವಾನಗಳಿಗೆ ಉಚಿತವಾಗಿ ನೀಡುವ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿಂದು ಚಾಲನೆ ನೀಡಿದರು.

ನಗರದ ಇಂದಿರಾ ಕ್ಯಾಂಟೀನ್ ಹತ್ತಿರದಲ್ಲಿರುವ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಅವರಣದಲ್ಲಿ ವಿಶ್ವ ರೇಬಿಸ್ ಮುಕ್ತ ಮಾಸಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ರೇಬಿಸ್ ಹಾಗೂ ಹುಚ್ಚುನಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮವನ್ನು ಶಾಸಕರು ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಾಕುನಾಯಿ ಅಥವಾ ಹುಚ್ಚು ನಾಯಿಗಳು ಮಕ್ಕಳಿಗೆ, ವಯಸ್ಕರಿಗೆ, ಪ್ರಾಣಿಗಳಿಗೆ ಕಚ್ಚಿದರೆ ಸಕಾಲದಲ್ಲಿ ರೇಬಿಸ್ ಲಸಿಕೆ ಹಾಕಿಸಬೇಕು. ರೋಗದಿಂದ ಪಾರಾಗಲು ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಪ್ರತಿಯೊಬ್ಬರು ರೇಬಿಸ್ ಲಸಿಕೆಯ ಕುರಿತು ಜಾಗೃತಿ ಹೊಂದಬೇಕು. ಈ ನಿಟ್ಟಿನಲ್ಲಿ ಪಶು ವೈದ್ಯಕೀಯ ಇಲಾಖೆಯಿಂದ ಒಂದು ತಿಂಗಳ ಕಾಲ ಜಿಲ್ಲೆಯಾದ್ಯಂತ ರೇಬಿಸ್ ರೋಗ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ನಗರಸಭೆ ನಿಯಮಿತವಾಗಿ ಸಂತಾನಹರಣ ಲಸಿಕೆ ಹಾಕುವುದರ ಮೂಲಕ ಜನರಿಗೆ ಹಾಗೂ ಯಾವುದೇ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ತಿಂಗಳ ಕಾಲ ನಡೆಯುವ ಈ ಲಸಿಕಾ ಅಭಿಯಾನ ಯಶಶ್ವಿಯಾಗಲಿ, ಇಲಾಖೆಯು ವರ್ಷಕ್ಕೆ ಒಂದು ಬಾರಿ ಹಮ್ಮಿಕೊಳ್ಳುವ ಅಭಿಯಾನವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಏರ್ಪಡಿಸಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ. ಮಂಜುನಾಥ್ ಅವರು ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ರೇಬಿಸ್ ಲಸಿಕೆ ಕಂಡುಹಿಡಿದ ಲೂಯಿ ಫ್ಯಾಶ್ಚರ್ ಸ್ಮರಣಾರ್ಥ ಪ್ರತಿವರ್ಷದಂತೆ ಈ ಬಾರಿಯೂ ಜಿಲ್ಲೆಯಾದ್ಯಂತ ಸಾಕುನಾಯಿಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮವನ್ನು ಇಲಾಖೆ ವತಿಯಿಂದ ಆಯೋಜಿಸಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಪಶು ವೈದ್ಯಕೀಯ ಪಾಲಿಕ್ಲಿನಿಕ್ ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ, ಜನಾರ್ಧನ್, ಡಾ. ಮಂಜುನಾಥ್, ಡಾ. ನಟರಾಜು, ಡಾ. ಮೂರ್ತಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಗೋವಿಂದಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಾಕುನಾಯಿಗಳಿಗೆ ಹಾಕಲು ರೇಬಿಸ್ ಲಸಿಕೆಯನ್ನು ವೈದ್ಯರಿಗೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *