ಚಾಮರಾಜನಗರ: ಯುವಕರು ಹಾಗೂ ಸಾರ್ವಜನಿಕರನ್ನು ಕ್ರೀಡೆಗೆ ಉತ್ತೇಜಿಸುವ ಸಲುವಾಗಿ ಸುವರ್ಣಾವತಿ ಜಲಾಶಯದಲ್ಲಿಂದು ಆರಂಭವಾದ ಜಲ ಸಾಹಸ ಕ್ರೀಡೋತ್ಸವಕ್ಕೆ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.

ತಾಲೂಕಿನ ಅಟ್ಟುಗೂಳಿಪುರ ಗ್ರಾಮದಲ್ಲಿರುವ ಸುವರ್ಣಾವತಿ ಜಲಾಶಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ 2 ದಿನಗಳ ಜಲ ಸಾಹಸ ಕ್ರೀಡೋತ್ಸವವನ್ನು ಜಲಾಶಯಕ್ಕೆ ದೀಪಾರತಿ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಜಾನಪದ ಕಲೆಗಳ ತವರೂರು ಚಾಮರಾಜನಗರ ಜಿಲ್ಲೆ ಪ್ರವಾಸಿ ತಾಣವಾಗಿಯೂ ಹೆಸರುವಾಸಿಯಾಗಿದೆ. ವಿಶೇಷ ಅನುದಾನ ಬಳಸಿ ಸುವರ್ಣಾವತಿ ಜಲಾಶಯವನ್ನು ಅಭಿವೃದ್ಧಿಪಡಿಸಲು 2008ರಿಂದಲೂ ಬೇಡಿಕೆ ಇಡುತ್ತಿದ್ದೇನೆ. ಜಲಾಶಯವನ್ನು ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಡಿಸಲು 43 ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.
ಜಲ ಸಾಹಸ ಕ್ರೀಡೆಗೆ ಜಿಲ್ಲೆಯಲ್ಲಿ ಉತ್ತಮ ವಾತಾವರಣವಿದೆ. ಸುವರ್ಣಾವತಿ ಜಲಾಶಯ ಸೇರಿದಂತೆ ಸುತ್ತಮುತ್ತಲಿನ ಕೆರೆಗಳು ತುಂಬಿದರೆ ಜಲ ಸಾಹಸ ಕ್ರೀಡೆಗೆ ಅನುಕೂಲವಾಗಲಿದೆ. ಕ್ರೀಡೋತ್ಸವದಲ್ಲಿ ಸಾರ್ವಜನಿಕರು, ಯುವಜನರು ಹೆಚ್ಚಾಗಿ ಪಾಲ್ಗೊಂಡು ಮುಂದಿನ ದಿನಗಳಲ್ಲಿ ಜಲಸಾಹಸ ಕ್ರೀಡೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳ (ಸ್ವಿಮ್ಮಿಂಗ್ ಫೂಲ್) ನಿರ್ಮಾಣಕ್ಕಾಗಿ 15 ಕೋಟಿ ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಇದೇ ವೇಳೆ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದು, ಕ್ರೀಡೆಗೆ ಪ್ರೇರೇಪಿಸಲು ಜಲಸಾಹಸ ಕ್ರೀಡೆ ಸಹಕಾರಿಯಾಗಿದೆ. ರಾಜ್ಯಮಟ್ಟದಲ್ಲಿ ಜಲಸಾಹಸ ಕ್ರೀಡೆ ಪ್ರಚಲಿತವಾಗಬೇಕು. ಜಲ ಸಾಹಸ ಕ್ರೀಡೆಯನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಆಯೋಜಿಸಬೇಕು. ಜಿಲ್ಲೆಯ ಯುವಕರು ಹಾಗೂ ಸಾರ್ವಜನಿಕರು ಜಲಸಾಹಸ ಕ್ರೀಡೆಯ ಸದುಪಯೋಗ ಪಡೆಯುವಂತೆ ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಎರಡು ದಿನಗಳ ಕಾಲ ಆಯೋಜನೆಯಾಗಿರುವ ಜಲಸಾಹಸ ಕ್ರೀಡೋತ್ಸವದಲ್ಲಿ ಮೊದಲ ದಿನ ಯುವಕರು, ವಿವಿಧ ಕಾಲೇಜು ವಿದ್ಯಾರ್ಥಿಗಳು ಮತ್ತು ಎರಡನೇ ದಿನ ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ. ಜಲಸಾಹಸ ಕ್ರೀಡೆ ಆಯೋಜನೆ ಕ್ರೀಡಾಪಟುಗಳು ಹೊರಹೊಮ್ಮಲು ಉತ್ತಮ ವೇದಿಕೆಯಾಗಲಿದೆ. ಕ್ರೀಡೆಯಲ್ಲಿ ಭಾಗವಹಿಸಲು ತರಬೇತಿಯೂ ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿಯ ಪ್ರಶಿಕ್ಷಕರಾದ ಶಬ್ಬೀರ್, ದಿನೇಶ್ ಎಸ್. ಸುವರ್ಣಾ, ಅಟ್ಟುಗೂಳಿಪುರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಧರ್ಮರಾಜ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.