ಭಾರತದಲ್ಲಿಯೇ ಮೊದಲ ಆಕಾಶವಾಣಿ ಎಂಬ ಕೀರ್ತಿಗೆ ಭಾಜನವಾಗಿರುವ ಮೈಸೂರು ಆಕಾಶವಾಣಿ, ಎಫ್ಎಂ 100.6 ರಲ್ಲಿ ಮೈಸೂರು ಆಕಾಶವಾಣಿಗೆ 90 ವರ್ಷ ತುಂಬಿದ ಸಂಭ್ರಮದಲ್ಲಿ "ಆಕಾಶವಾಣಿಗೆ ತೊಂಬತ್ತು: ನೆನಪುಗಳ ಹೊತ್ತು!." ಈ ಶೀರ್ಷಿಕೆಯಡಿಯಲ್ಲಿನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮೈಸೂರಿನ ಲೇಖಕ, ಸಂಗ್ರಹಕ , ಗಾಯಕ ಕಾಳಿಹುಂಡಿ ಶಿವಕುಮಾರ್ ರವರು ಭಾಗವಹಿಸುವರು.
ಈ ಕಾರ್ಯಕ್ರಮವು 09.12.2025 ರ ಮಂಗಳವಾರ ಬೆಳಿಗ್ಗೆ 8:30 ರಿಂದ 9:00 ಗಂಟೆವರೆಗೆ ಪ್ರಸಾರವಾಗಲಿದೆ. ಇದೇ ಕಾರ್ಯಕ್ರಮವು ಬುಧವಾರ ರಾತ್ರಿ 8:15 ರಿಂದ 8:45 ರವರೆಗೆ ಮರು ಪ್ರಸಾರವಾಗಲಿದೆ.
ಈ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಕಾಳಿಹುಂಡಿ ಶಿವಕುಮಾರ್ ರವರು ಆಕಾಶವಾಣಿಯೊಂದಿಗೆ 35ಕ್ಕೂ ಹೆಚ್ಚು ವರ್ಷಗಳ ತಮ್ಮ ದಟ್ಟ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಮೈಸೂರು ಅವಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಾಧಿಕಾರಿಯಾದ ದಿಗ್ವಿಜಯ್ ಬಿ ರವರು ಶಿವಕುಮಾರ್ ರವರ ಸಂದರ್ಶನ ಮಾಡಲಿದ್ದಾರೆ.
ವೃತ್ತಿಯಲ್ಲಿ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕಪರಿಶೋಧನಾಧಿಕಾರಿಯಾಗಿ ಪ್ರಸ್ತುತ ಸಾಲಿಗ್ರಾಮ ತಾಲೂಕು ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾಳಿಹುಂಡಿ ಶಿವಕುಮಾರ್ ರವರು ಪ್ರವೃತ್ತಿಯಲ್ಲಿ ಪತ್ರಿಕೆಗಳ ಸಂಗ್ರಹಕ, ಹಾಗೂ ಲೇಖಕರಾಗಿ ನಾಡಿನ ಎಲ್ಲಾ ಪತ್ರಿಕೆಗಳಿಗೂ ಬರೆಯುತ್ತಾರೆ. ಜೊತೆಗೆ ಮೈಸೂರು ಆಕಾಶವಾಣಿಯ ಖಾಯಂ ಶ್ರೋತೃವಾಗಿದ್ದಾರೆ. ದೀಪ್ತಿ ಸಾಂಸ್ಕೃತಿಕ ವೇದಿಕೆಯ ಮೂಲಕ ಅನೇಕ ಸಾಧಕರಿಗೆ ಸನ್ಮಾನ, ಕನ್ನಡ ನಾಡು ನುಡಿ ಕುರಿತ ಪ್ರದರ್ಶನ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದಾರೆ.
ಬಾಲ್ಯದಿಂದಲೂ ಕೂಡ ಆಕಾಶವಾಣಿಯನ್ನು ನಿರಂತರವಾಗಿ ಕೇಳಿದ್ದರ ಫಲವಾಗಿ ಆಕಾಶವಾಣಿಗೆ 90 ತುಂಬಿದ ಈ ಸಂದರ್ಭದಲ್ಲಿ ನನ್ನನ್ನು ಸಂದರ್ಶನ ಮಾಡುತ್ತಿರುವುದು ಹೆಮ್ಮೆಯಾಗಿದೆ. ಆಕಾಶವಾಣಿಯಿಂದ ನಾನು ಬರೆಯುವುದನ್ನು, ಓದುವುದನ್ನು, ಮಾತನಾಡುವುದನ್ನು ಮತ್ತು ಹಾಡುವುದನ್ನು ಕೂಡ ಕಲಿತಿದ್ದೇನೆ. ಜೊತೆಗೆ ಅನೇಕ ಅಧಿಕಾರಿಗಳು, ಸ್ನೇಹಿತರು ಪರಿಚಯವಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆಕಾಶವಾಣಿ ಕಾರ್ಯಕ್ರಮಗಳನ್ನು ದಿನನಿತ್ಯ ಎಲ್ಲರೂ ಕೇಳುವಂತಾಗಲಿ, ಆಕಾಶವಾಣಿ ಆಬಾಲವೃದ್ಧರಾದಿಯಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದೆ, ಅದರ ಸದುಪಯೋಗ ಪಡೆದುಕೊಳ್ಳಲಿ ಎಂದು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಾಚಾರಿ, ಕಾರ್ಯದರ್ಶಿ ಟಿ ಎನ್ ರಾಜೇಶ್ವರಿ, ಮತ್ತು ಪದಾಧಿಕಾರಿಗಳು, ಸದಸ್ಯರುಗಳು ಅಭಿನಂದಿಸಿದ್ದಾರೆ.