ನಗರದ ಬಿ. ರಾಚಯ್ಯ ಜೋಡಿರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ

ಚಾಮರಾಜನಗರ: ಜಿಲ್ಲಾ ಕೇಂದ್ರದ ಬಿ. ರಾಚಯ್ಯ ಜೋಡಿ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುವ 3.80 ಕೋಟಿ ರೂ. ವೆಚ್ಚದ ಕಾಮಗಾರಿಗೆ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. 

  ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರಿನ ರಸ್ತೆ ಭಾಗದಲ್ಲಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಭುವನೇಶ್ವರಿ (ಪಚ್ಚಪ್ಪ) ವೃತ್ತದಿಂದ ಡಿವೈಎಸ್‍ಪಿ ಕಚೇರಿವರೆಗೆ ಸಮಗ್ರವಾಗಿ ರಸ್ತೆ ಅಭಿವೃದ್ದಿಯಾಗಲಿದೆ. ಪಾದಚಾರಿ ಮಾರ್ಗ, ವಿದ್ಯುತ್ ದೀಪ, ಇನ್ನಿತರ ವ್ಯವಸ್ಥೆಯು ರಸ್ತೆ ಅಭಿವೃದ್ದಿಯಲ್ಲಿ ಸೇರಿದೆ ಎಂದರು. 

  ಭುವನೇಶ್ವರಿ ವೃತ್ತ, ಸರ್ಕಾರಿ ಆಸ್ಪತ್ರೆ ಬಳಿಯ ವೃತ್ತ ಹಾಗೂ ಡಿವೈಎಸ್‍ಪಿ ಕಚೇರಿ ವೃತ್ತಗಳನ್ನು ಅಭಿವೃದ್ದಿ ಪಡಿಸಲಾಗುತ್ತದೆ. ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತದೆ. ಒಟ್ಟಾರೆ ರಸ್ತೆಯ ಸಮಗ್ರ ಅಭಿವೃದ್ದಿ ಕಾರ್ಯಗಳು ನಡೆಯಲಿವೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು. 

  ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನೀರು ಪೂರೈಸಲು ಕೊಳವೆಬಾವಿಗಳನ್ನು ಕೊರೆಯಿಸಲಾಗುವುದು. ನಗರಕ್ಕೆ ಅಗತ್ಯ ಪ್ರಮಾಣದಲ್ಲಿ ನೀರು ಸರಬರಾಜು ಮಾಡುವ ಯೋಜನೆ ಹಾಗೂ ಒಳಚರಂಡಿ ಸಂಪರ್ಕ ಸಂಬಂಧ ಯೋಜನೆಗೆ ಈಗಾಗಲೇ ಟೆಂಡರ್ ಆಗಿದ್ದು, ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲು ಸಿದ್ದತೆ ಕೈಗೊಳ್ಳಲಾಗುತ್ತದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದರು. 

  ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಇನ್ನಿತರ ಮುಖಂಡರು ಇದ್ದರು.

Leave a Reply

Your email address will not be published. Required fields are marked *