ನಾರಾಯಣಗುರುಗಳ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತ : ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ

ಚಾಮರಾಜನಗರ: ತಳಸಮುದಾಯದ ಜನರನ್ನು ಅಸಮಾನತೆಯಿಂದ ಸಮಾನತೆಯೆಡೆಗೆ ಕೊಂಡೋಯ್ದ ಬ್ರಹ್ಮಶ್ರೀ ನಾರಾಯಣಗುರುಗಳ ಮಾನವೀಯ ಮೌಲ್ಯಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದರು.

  ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಬ್ರಹ್ಮಶ್ರೀ ನಾರಾಯಣಗುರು ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತೀಯ ಅಸಮಾನತೆ ತಾಂಡವಾಡುತ್ತಿದ್ದ ಅಂದಿನ ಸಮಾಜದಲ್ಲಿ ತಳಸಮುದಾಯಕ್ಕೆ ಸಮಾನತೆ ಹಾದಿ ತೋರಿದವರು ನಾರಾಯಣಗುರುಗಳು. ನಾರಾಯಣರ ತತ್ವಸಿದ್ದಾಂತ, ಮಾನವೀಯ ಮೌಲ್ಯಗಳಿಂದ ಪ್ರೇರಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾರಾಯಣಗುರುಗಳ ಜಯಂತಿ ಕಾರ್ಯಕ್ರಮವನ್ನು ರಾಜ್ಯಮಟ್ಟದಲ್ಲಿ ಆಚರಿಸಲು ಅನುವು ಮಾಡಿಕೊಟ್ಟಿದ್ದಾರೆ. ರಾಜ್ಯಸರ್ಕಾರವು ಎಲ್ಲಾ ಸಮುದಾಯಗಳ ದನಿಯಾಗಿದೆ. ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕನ್ನಡ ಶಾಲೆಗಳನ್ನು ಉಳಿಸಲು ಅನುದಾನಿತ ಶಿಕ್ಷಣ ಸಂಸ್ಥೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ತಿಳಿಸಿದರು.

ನಾರಾಯಣಗುರುಗಳ ವಿಚಾರಧಾರೆಗಳನ್ನು ಶಾಲಾಮಕ್ಕಳ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. ಪ್ರಸ್ತುತ ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಶಕ್ತಿಯಾಗಿರುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕಿದೆ. ಪಕ್ಕದ ಕೇರಳ ರಾಜ್ಯವು ಸಾಕ್ಷರತೆಯಲ್ಲಿ ಶೇ. 99ರಷ್ಟು ಪ್ರಗತಿ ಸಾಧಿಸಲು ನಾರಾಯಣಗುರುಗಳ ಮಾದರಿ ಪರಿಶ್ರಮವೇ ಕಾರಣವಾಗಿದೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವಂತೆ ದೇವಸ್ಥಾನಗಳ ಗಂಟೆ ಸದ್ದಿಗಿಂತ ಶಾಲೆಗಳಲ್ಲಿ ಗಂಟೆ ಸದ್ದು ಕೇಳಬೇಕು. ಶಾಲೆಗಳು, ಗ್ರಂಥಾಲಯಗಳು ಹೆಚ್ಚಾಗಬೇಕು. ಮಕ್ಕಳು, ಜನರು, ಸಮುದಾಯ ಸುಶಿಕ್ಷಿತರಾಗಬೇಕು ಎಂದು ಸಚಿವರಾದ ಮಧು ಬಂಗಾರಪ್ಪ ಅವರು ಸಲಹೆ ಮಾಡಿದರು.

ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 12ನೇ ಶತಮಾನದಲ್ಲಿ ಸಮಸಮಾಜಕ್ಕಾಗಿ ಕ್ರಾಂತಿಕಾರಕ ಬದಲಾವಣೆ ತಂದ ಬಸವಣ್ಣನವರಂತೆ ನಾರಾಯಣಗುರುಗಳು ಕೇರಳದಲ್ಲಿ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದರು. ಬಾಲ್ಯವಿವಾಹ ನಿರ್ಮೂಲನೆಗೆ ಚಳವಳಿ ನಡೆಸಿದರು. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರವು ಆದ್ಯತೆ ನೀಡಿದ್ದು, ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದೆ. ಜಿಲ್ಲೆಯಲ್ಲಿ ಹೊಸ ಶಾಲಾಕಟ್ಟಡಗಳ ಅಗತ್ಯವಿದೆ. ನವೀಕರಣಕ್ಕಾಗಿ ಎಂ.ಎಸ್.ಐ.ಎಲ್ ಹಾಗೂ ಸಿ.ಎಸ್.ಆರ್ ನಿಧಿ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಸಮುದಾಯ ಭವನಕ್ಕಾಗಿ ಜಾಗ ಗುರುತಿಸುವ ಕೆಲಸವಾಗಬೇಕಿದೆ. ಸಮುದಾಯ ಉನ್ನತ ಶಿಕ್ಷಣ ಪಡೆದು ಸಂಘಟಿತವಾಗಬೇಕು ಎಂದು ಹೇಳಿದರು.

ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ಜಾತಿ ಆಧಾರಿತ ತಾರತಮ್ಯ ವಿರೋಧಿಸಿದ ಶ್ರೇಷ್ಠ ಆದರ್ಶ ಜೀವಿ ನಾರಾಯಣಗುರುಗಳು. ಸ್ವಾತಂತ್ರ್ಯಪೂರ್ವದಲ್ಲಿ ತುಳಿತಕ್ಕೊಳಗಾದ ತಳ ಸಮುದಾಯಗಳ ಶಿಕ್ಷಣ ಹಾಗೂ ಸಮಾನತೆಗಾಗಿ ಶ್ರಮಿಸಿದ ನಾರಾಯಣಗುರು ಅವರು ಜಾತೀಯ ಸಂಕೋಲೆಗಳಿಂದ ಮುಕ್ತರಾಗಲು ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಪ್ರತಿಪಾದಿಸಿದರು. ಮನುಷ್ಯತ್ವದ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ ನಾರಾಯಣಗುರುಗಳು ತೋರಿದ ಹಾದಿಯಲ್ಲಿ ಮುನ್ನೆಡೆದು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು ಎಂದರು.

ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್ ಅವರಂತೆ ನಾರಾಯಣಗುರುಗಳು ಕೇರಳದಲ್ಲಿ ಸಾಮಾಜಿಕ ಸುಧಾರಣೆಗೆ ಮಹತ್ವ ನೀಡಿದರು. ತಳಸಮುದಾಯದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಜೀವನವನ್ನೆ ಮುಡಿಪಾಗಿಟ್ಟ ನಾರಾಯಣಗುರು ಅವರು ಸರ್ವಕಾಲಕ್ಕೂ ಆದರ್ಶಪ್ರಾಯರಾಗಿದ್ದಾರೆ ಎಂದರು.

ಮುಖ್ಯಭಾಷಣ ಮಾಡಿದ ಸಾಹಿತಿಗಳಾದ ಸೋಮಶೇಖರ ಬಿಸಲ್ವಾಡಿ ಅವರು ಮಾನವತೆಯನ್ನು ಮೈಗೂಡಿಸಿಕೊಂಡಿದ್ದ ಜಾತಿಯತೆಯನ್ನು ತೀವ್ರವಾಗಿ ವಿರೋಧಿಸಿದ್ದ ನಾರಾಯಣಗುರುಗಳು ಬೀದಿಗಿಳಿದು ಹೋರಾಟ ಮಾಡದೇ ಮೌನಕ್ರಾಂತಿ ಆರಂಭಿಸಿ ಮೌಢ್ಯತೆ, ಕಂದಾಚಾರಗಳ ವಿರುದ್ಧ ಚಾಟಿ ಬೀಸಿದರು. ತತ್ವಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಯೋಗಸಿದ್ಧಗಳ ಅಪಾರ ಪಾಂಡಿತ್ಯ ಪಡೆದಿದ್ದ ನಾರಾಯಣಗುರುಗಳು ಕರ್ಮಯೋಗದ ಬಗ್ಗೆ ದೂರದೃಷ್ಠಿ ಹೊಂದಿದ್ದ ತಪಸ್ವಿಯಾಗಿದ್ದರು ಎಂದರು.

ದೇವಸ್ಥಾನಗಳಲ್ಲಿ ದೇವರನ್ನು ಕೂರಿಸದೇ ಗ್ರಂಥಾಲಯಗಳನ್ನು ಸ್ಥಾಪಿಸಿ ಜನರಿಗೆ ಶಿಕ್ಷಣದ ಅರಿವು ಮೂಡಿಸಿದರು. ಬಾಲ್ಯವಿವಾಹದ ನಿವಾರಣೆಗೆ ಚಳವಳಿಯ ರೂಪ ಕೊಟ್ಟು ಜನರನ್ನು ಜಾಗೃತಗೊಳಿಸಿದರು. ಮಹಿಳೆಯರು ಸೊಂಟದ ಮೇಲೆ ಕುಪ್ಪಸ ತೊಡದಂತಹ ಕಟ್ಟಳೆಗೆ ಮುಕ್ತಿ ತೋರಿಸಿದರು. ಮದ್ಯಪಾನ ತಡೆಯಲು ಅರಿವು ಶಿಬಿರಗಳನ್ನು ಏರ್ಪಡಿಸಿದರು. ಬಹುಪತ್ನಿತ್ವವನ್ನು ತೀವ್ರವಾಗಿ ಖಂಡಿಸಿದರು. ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಲು ದೇಶದ ವಿವಿಧೆಡೆ ಹಾಗೂ ವಿದೇಶಗಳಲ್ಲೂ ಸಂಚಾರ ಕೈಗೊಂಡರು ಎಂದು ಸೋಮಶೇಕರ ಬಿಸಲ್ವಾಡಿ ಅವರು ತಿಳಿಸಿದರು.

ಶಿವಮೊಗ್ಗ ತೀರ್ಥಹಳ್ಳಿ ತಾಲೂಕು ಗರ್ತಿಕೆರೆಯ ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ರೇಣುಕಾನಂದ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

  ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ನಗರಸಭೆಯ ಅಧ್ಯಕ್ಷರಾಧ ಸುರೇಶ್, ಉಪಾಧ್ಯಕ್ಷರಾದ ಮಮತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿದೇಶಕರಾದ ರಾಜು, ಸಮುದಾಯದ ಮುಖಂಡರಾದ ಚಿನ್ನೇಗೌಡ, ಪೋತರಾಜು, ಸಮಾಜದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿಮಂದಿರದಿಂದ ಜಿಲ್ಲಾಡಳಿತ ಭವನವರೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಮರವಣಿಗೆ ನಡೆಯಿತು.

Leave a Reply

Your email address will not be published. Required fields are marked *