ಎಸ್. ಆರ್. ರಂಗನಾಥನ್ ಅವರ ಜನ್ಮದಿನ 'ರಾಷ್ಟ್ರೀಯ ಗ್ರಂಥಪಾಲಕರ ದಿನ'ವೂ ಹೌದು. ಈ ಸಂದರ್ಭದಲ್ಲಿ ಮಂಗಳವಾರ ಕೆ ಆರ್ ನಗರ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಯ ಗ್ರಂಥಪಾಲಕರಿಗೆ ಪುಸ್ತಕಗಳನ್ನ ವಿತರಿಸಿ, ಸನ್ಮಾನಿಸುವುದರ ಮೂಲಕ ಆಚರಿಸಲಾಯಿತು.
ಎಸ್ ಆರ್ ರಂಗನಾಥನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರವೀಂದ್ರ ರಾಜನ್, ಅಸೋಸಿಯೇಟ್ ಪ್ರೊಫೆಸರ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕೆ ಆರ್ ನಗರ ಇವರು ಗ್ರಂಥಾಲಯದ ರೂಪುರೇಷೆಗಳ ಬಗ್ಗೆ ಅರ್ಥಪೂರ್ಣವಾಗಿ ಗ್ರಂಥಪಾಲಕರಿಗೆ ತಿಳಿಸಿದರು. ಪ್ರತಿಯೊಬ್ಬ ಗ್ರಂಥಪಾಲಕರು ಮುಖ್ಯವಾಗಿ ಮೂರು ತಿಂಗಳ ಗ್ರಂಥಾಲಯ ತರಬೇತಿಯನ್ನ ಪಡೆದುಕೊಂಡರೆ ತುಂಬಾ ಅನುಕೂಲವಾಗುತ್ತದೆ. ಆ ತರಬೇತಿಯಲ್ಲಿ ಯಾವ ಯಾವ ಪುಸ್ತಕಗಳನ್ನ ಹೇಗೆ ವಿಂಗಡಿಸಿ ಜೋಡಿಸಬೇಕು, ಅದರ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲಾಗುವುದು ಎಂದರಲ್ಲದೆ ನಿಮ್ಮ ನಿಮ್ಮ ಗ್ರಂಥಾಲಯದಲ್ಲಿ ಯಾವ ಯಾವ ರೀತಿಯ ಓದುಗರು ಬರುತ್ತಾರೆ ಎಂಬುದು ನಿಮಗೆ ತಿಳಿದಿರುತ್ತದೆ. ಅಂತಹ ಸಂದರ್ಭದಲ್ಲಿ ಅವರ ಅಭಿರುಚಿಗೆ ತಕ್ಕಂತೆ ಬೇಕಾಗುವ ಪುಸ್ತಕಗಳನ್ನ ಮತ್ತು ಸಮಸ್ಯೆಗಳನ್ನು ಆಲಿಸಿ ಅದನ್ನ ಮೇಲಾಧಿಕಾರಿಗಳಿಗೆ ವರದಿ ಮಾಡಿ, ಇರುವ ಸಮಸ್ಯೆಯನ್ನು ಬಗೆಹರಿಸಲು ಮುಖ್ಯ ಸೇತುವೆಯಂತೆ ನೀವು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಇಂದಿನ ತಂತ್ರಜ್ಞಾನದ ಯುಗದಲ್ಲೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಓದಿದ ಅನೇಕರು ಕೆ ಎ ಎಸ್, ಐಎಎಸ್ ಮುಂತಾದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಅದನ್ನ ಆಧಾರವಾಗಿಟ್ಟುಕೊಂಡು ನೀವು ಸ್ಪರ್ಧಾತ್ಮಕ ವಿಷಯಗಳಿಗೆ ಹೆಚ್ಚಿನ ಪುಸ್ತಕಗಳು ನಿಮ್ಮ ಗ್ರಂಥಾಲಯದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಕೆ ಆರ್ ನಗರ ತಾಲೂಕು ಪಂಚಾಯಿತಿಯ ಕಚೇರಿ ವ್ಯವಸ್ಥಾಪಕರಾದ ಸತೀಶ್ ಕುಮಾರ್ ಕೆ ಎಸ್ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಲ್ಲಿ ತಮ್ಮ ಬಾಲ್ಯದ ದಿನಗಳಲ್ಲಿದ್ದ ಗ್ರಂಥಾಲಯಕ್ಕೂ ಪ್ರಸ್ತುತ ಡಿಜಿಟಲ್ ಹಂತದ ವರೆಗೂ ಸಾಗಿರುವ ಗ್ರಂಥಾಲಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೈಸೂರಿನ ನಗರದ ಮುಖ್ಯ ಗ್ರಂಥಾಲಯದಲ್ಲಿ ತಾವು ಮತ್ತು ಸ್ನೇಹಿತರು ಪ್ರತಿ ದಿನ ಸಮಯ ಸಿಕ್ಕಾಗಲಿಲ್ಲ ಗ್ರಂಥಾಲಯಕ್ಕೆ ಓದಲು ಹೋಗುತ್ತಿದ್ದೆವು. ಕೆಲವೇ ಕೆಲವು ಸ್ಪರ್ಧಾತ್ಮಕ ಪುಸ್ತಕಗಳಿದ್ದ ಕಾಲದಲ್ಲಿ ಅದನ್ನೇ ಜೆರಾಕ್ಸ್ ಮಾಡಿಸಿಕೊಂಡು ಓದಿದ್ದು ಉಂಟು. ಈ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ನಾವು ಮನವಿ ಸಲ್ಲಿಸಿದ್ದರಿಂದ ಪ್ರತ್ಯೇಕವಾಗಿ ಸ್ಪರ್ಧಾತ್ಮಕ ಪುಸ್ತಕಗಳಿಗಾಗಿಯೇ ಪ್ರತ್ಯೇಕ ವಿಭಾಗ ಮಾಡಿದರು. ಇದು ಎಲ್ಲರಿಗೂ ಅನುಕೂಲವಾಯಿತು ಎಂದು ಈಗಲೂ ಕೂಡ ವಾಟ್ಸಪ್ ಗ್ರೂಪ್ ಮಾಡಿದ್ದಾರೆ ಅಲ್ಲಿ ಓದಿದ ಅನೇಕರು ಹಲವು ಹುದ್ದೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಮ್ಮ ಓದಿನ ದಿನಗಳನ್ನು ನೆನಪು ಮಾಡಿಕೊಂಡರು.
ಕೆ ಆರ್ ನಗರ ತಾಲೂಕು ಪಂಚಾಯಿತಿಯ ತಾಲೂಕು ಯೋಜನಾಧಿಕಾರಿ ನಂದೀಶ್ ಎಂ ಎನ್ ಮಾತನಾಡಿ.... ಮನುಷ್ಯ ಸಾಯಬಹುದು ಆದರೆ ಪುಸ್ತಕಗಳಿಗೆ ಸಾವಿಲ್ಲ. ಪುಸ್ತಕಗಳನ್ನ ಯೋಜಿತ ರೀತಿಯಲ್ಲಿ ಸಂಗ್ರಹಿಸಿದ್ದೇ ಆದರೆ ಅವು ಶಾಶ್ವತವಾಗಿ ನಮ್ಮೊಟ್ಟಿಗೆ ಇರುತ್ತವೆ. ನಮ್ಮ ಕಾಲಾನಂತರ ಮುಂದಿನ ಪೀಳಿಗೆಗೂ ಪುಸ್ತಕಗಳು ಬಳುವಳಿಯಾಗಿ ಉಳಿಯುತ್ತವೆ. ವಿಷಯವಾರು ವಿಂಗಡಣೆಯ ಮೂಲಕ ಪುಸ್ತಕಗಳನ್ನು ಸಮರ್ಪಕವಾಗಿ ಜೋಡಿಸಬೇಕು. ಜೊತೆಗೆ ಯಾರೇ ಸಾರ್ವಜನಿಕ ಓದುಗರು ಬಂದರೆ ಸರಿಯಾಗಿ ಸ್ಪಂದಿಸಿ, ಅವರು ಪುಸ್ತಕ ಓದಲು ಪ್ರೇರೇಪಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಸಾಲಿಗ್ರಾಮ ಗ್ರಾಮ ಪಂಚಾಯಿತಿ ಗ್ರಂಥಾಲಯದ ದಿವ್ಯಕುಮಾರಿ ಮತ್ತು ಹೆಬ್ಬಾಳು ಗ್ರಾಮ ಪಂಚಾಯಿತಿಯ ಗ್ರಂಥಾಲಯದ ಅಪ್ಸಾನಾ ಭಾನು ರವರನ್ನು ಸನ್ಮಾನಿಸಲಾಯಿತು. ಜೊತೆಗೆ ಹಾಜರಿದ್ದ ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕು ಪಂಚಾಯಿತಿಯ ಗ್ರಂಥಪಾಲಕರಿಗೆಲ್ಲ ಪುಸ್ತಕಗಳನ್ನ ವಿತರಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿಗಳಾದ ಮೋಹನಕುಮಾರಿ ಮತ್ತು ಕೆ ವಿ ಶಿವಕುಮಾರ್, ಸಾಲಿಗ್ರಾಮ ತಾಲೂಕು ಪಂಚಾಯಿತಿಯ ತಾಲೂಕು ಯೋಜನಾಧಿಕಾರಿ ನಂದೀಶ್, ಕಚೇರಿಯ ಸಿಬ್ಬಂದಿಗಳಾದ ಕರಿಗೌಡರು, ನರೇಂದ್ರ ದೀಪು, ಕಾರ್ತಿಕ್, ಪ್ರದೀಪ್ ಮುಂತಾದವರು ಹಾಜರಿದ್ದರು.
Like this:
Like Loading...
Related