ಚಾಮರಾಜನಗರ: ನವ ಉದ್ಯಮ ಸ್ಥಾಪಿಸಲು ಹಾಗೂ ವ್ಯವಹಾರ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಇರುವ ಕಾರ್ಯಗಾರಗಳು ವಿದ್ಯಾರ್ಥಿಗಳಿಗೆ ಅತ್ಯಮೂಲ್ಯವಾಗಿದ್ದು, ವಿದ್ಯಾರ್ಥಿ ಜೀವನದ ನಂತರ ಉದ್ಯೋಗ ಸೃಷ್ಟಿಸಿಕೊಳ್ಳಲು ನೆರವಾಗಲಿವೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದೊರೈರಾಜ್ ಅವರು ತಿಳಿಸಿದರು.
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಇನ್‍ಕ್ಯೂಬೇಷನ್ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಶೇ. 75ಕ್ಕಿಂತ ಅಧಿಕ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆಧುನಿಕ ಕೃಷಿಯ ಜೊತೆಗೆ ದೇಶದ ಬೆಳವಣಿಗೆಯಲ್ಲಿ ಉದ್ಯಮವು ಅತಿ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನದ ಬಳಿಕ ಉದ್ಯೋಗ ಅರಸಿ ಹೋಗುವ ಬದಲಾಗಿ ನೀವೇ ಸ್ವಂತ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬೇಕು. ನಿಮ್ಮ ಕೌಶಲಗಳಿಗೆ ತಕ್ಕಂತೆ ಹೊಸ ಹೊಸ ಉದ್ಯಮಗಳು ಆರಂಭವಾಗಬೇಕು. ಹೆಚ್ಚು ಉದ್ಯಮಗಳು ಸ್ಥಾಪನೆಯಾದರೆ ದೇಶ ಪ್ರಗತಿಯಾಗುತ್ತದೆ. ಜಿಡಿಪಿಯು ಹೆಚ್ಚಾಗಿ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಓರ್ವ ಉದ್ಯಮದಾತ ಮನಸ್ಸು ಮಾಡಿದರೆ ಕನಿಷ್ಠ 10 ಜನಕ್ಕೆ ಉದ್ಯೋಗ ನೀಡಬಹುದು. ನವೋದ್ಯಮ ಆರಂಭಿಸುವ ಆಕಾಂಕ್ಷಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಆರ್ಥಿಕ ನೆರವು ಸಿಗಲಿದೆ. ಸರ್ಕಾರದ ಅನೇಕ ಯೋಜನೆಗಳಿದ್ದು ನವೋದ್ಯಮ ಸ್ಥಾಪಿಸುವವರಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಹಲವು ಇಲಾಖೆಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡು ಉದ್ಯೋಗದಾತರಾಗ ಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ದೊರೈರಾಜ್ ಅವರು ತಿಳಿಸಿದರು.
ಬೆಂಗಳೂರಿನ ಎಂ.ಎಸ್.ಎಂ.ಇ. ಸಂಸ್ಥೆಯ ಎ.ಡಿ.ಓ. ಶಿವಕುಮಾರ್ ಅವರು ಮಾತನಾಡಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ.ಎಸ್.ಎಂ.ಇ) ಸಂಸ್ಥೆಯು ಸ್ವಂತ ಉದ್ಯೋಗ ಆರಂಭಿಸಲು ಆಸಕ್ತಿ ಇರುವ ಉದ್ಯೋಗಾಕಾಂಕ್ಷಿಗಳಿಗೆ ಹಣಕಾಸು ನೆರವು ನೀಡಲು ಸರ್ಕಾರದಿಂದ ಸ್ಥಾಪಿತವಾಗಿರುವ ಸಂಸ್ಥೆಯಾಗಿದೆ. ರಾಷ್ಟ್ರೀಯ ಆರ್ಥಿಕತೆಯಲ್ಲಿ ಒಟ್ಟು ದೇಶೀಯ ಉತ್ಪನ್ನದ ಮೂರನೇ ಒಂದು ಭಾಗ ಎಂ.ಎಸ್.ಎಂ.ಇ ಚಟುವಟಿಕೆಗಳಿಂದ ಬರಲಿದೆ. ಹೊಸ ಉದ್ಯಮ, ವ್ಯವಹಾರ ತಾಂತ್ರಿಕ ಆಲೋಚನೆ, ಉತ್ಪಾಧಿಸಿದ ಸರಕುಗಳ ಮಾರಾಟ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಎಂ.ಎಸ್.ಎಂ.ಇ. ಸಂಸ್ಥೆಯು ಸಹಾಯಕವಾಗಿದೆ ಎಂದು ಶಿವಕುಮಾರ್ ಅವರು ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲೀಡ್ ಬ್ಯಾಂಕ್ ಮ್ಯಾನೇಜರ್ ಎಂ.ಎನ್. ಸುರೇಖಾ ಅವರು ಮಾತನಾಡಿ ಉದ್ಯೋಗ ಆರಂಭಿಸಲು ಆಸಕ್ತಿ ಇರುವ ನವ ಉದ್ಯಮದಾರರಿಗೆ ಅಗತ್ಯವಿರುವ ಆರ್ಥಿಕ ಸೌಲಭ್ಯಗಳನ್ನು ಪಬ್ಲಿಕ್ ಸೆಕ್ಟರ್ ಬ್ಯಾಂಕಗಳ ಮೂಲಕ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ಉದ್ಯಮ ನಿರ್ವಹಿಸಿದರೆ ಯಶಸ್ವಿ ಉದ್ಯಮಿಗಳಾಗಬಹುದು ಎಂದರು.
ಅಧ‍್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಮಧು ವಿದ್ಯಾರ್ಥಿಗಳು ಕೆಲಸಕ್ಕಾಗಿ ಹಾತೊರೆಯುವ ಬದಲು ತಾವೇ ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ ಹೊರಹೊಮ್ಮಬೇಕು. ದೆಶದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಸಲಹೆ ಮಾಡಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯ್ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಎಸ್.ಎನ್. ದೇವೇಂದ್ರ ಕುಮಾರ್, ಮೈಸೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಜಿ.ಬಿ. ಜನಾರ್ಧನ ಸ್ವಾಮಿ, ಸಂಯೋಜಕರಾದ ಡಾ. ಸಂದೀಪ್, ಡಾ. ಮನೀಲ್ ರಾಜ್, ಸಹಾಯಕ ಆಡಳಿತಾಧಿಕಾರಿಗಳಾದ ಜೆ. ಮಹದೇವು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.