ಚಾಮರಾಜನಗರ: ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಕೆರೆಗಳಿದ್ದು ಈ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಎಂ.ಎಸ್.ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಚಾಮರಾಜನಗರ ತಾಲೂಕಿನ ಕೋಡಿಮೋಳೆ ಕೆರೆಯಲ್ಲಿ ನಿರ್ಮಿಸಿರುವ ಪಂಪ್‍ಹೌಸ್‍ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಈ ಹಿಂದಿನ ಅವಧಿಯಲ್ಲಿಯೂ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೆಚ್.ಎಸ್. ಮಹದೇವಪ್ರಸಾದ್ ಅವರ ಕಾಲದಲ್ಲಿಯೇ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದಿತ್ತು. ಸುತ್ತೂರು ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸುವ ಕಾರ್ಯ ನಡೆದಿದೆ ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಕೆರೆಗಳು ಬರಲಿದ್ದು ನೀರು ತುಂಬಿಸುವ ಕಾರ್ಯ ನಡೆದಿದೆ. ಕೋಡಿಮೋಳೆ ಕೆರೆಯಿಂದ ಎರಡು ಭಾಗವಾಗಿ ದೊಡ್ಡಮೋಳೆ ಕೆರೆ, ಚಿಕ್ಕಮೋಳೆ ಕೆರೆ, ನಗರದ ಕೆರೆ, ಬಂಡಿಗೆರೆ, ಮರಗದ ಕೆರೆ, ಕೆರೆಗಳಿಗೆ ನೀರು ಹರಿಯಲಿದೆ. ಮಲ್ಲೆದೇವನಹಳ್ಳಿ, ಪುಟ್ಟನಪುರ, ನಾಗವಳ್ಳಿ, ಕಾಗಲವಾಡಿ, ಹೊಂಡರಬಾಳು, ಸರಗೂರು ಮೋಳೆ, ಹೆಬ್ಬಳ್ಳ ಕೆರೆಗಳಿಗೂ ನೀರು ತುಂಬಿಸಲಾಗುತ್ತಿದೆ ಎಂದರು.
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಹಲವು ಅಭಿವೃದ್ದಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಾಗೂ ಕೆರೆಗೆ ನೀರು ಹರಿಸುವ ಯೋಜನೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಶಾಸಕರೆಲ್ಲರೂ ಸೇರಿ ಆಹ್ವಾನಿಸಿ ವಿದ್ಯುಕ್ತವಾಗಿ ಚಾಲನೆ ನೀಡುವ ಕಾರ್ಯಕ್ರಮವನ್ನು ಸ್ವಲ್ಪ ದಿನದಲ್ಲಿಯೇ ಆಯೋಜಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಚಾಮರಾಜನಗರ ಪಟ್ಟಣಕ್ಕೆ ಮಾಲಂಗಿಯಿಂದ ಕುಡಿಯುವ ನೀರು ಪೂರೈಸುವ ಮೂರನೇ ಹಂತದ ಯೋಜನೆಗೆ 162 ಕೋಟಿ ರೂ., ಒಳಚರಂಡಿ ನಿರ್ಮಾಣಕ್ಕೆ 141 ಕೋಟಿ ರೂ., ಕ್ರೀಡಾಂಗಣ ಅಭಿವೃದ್ದಿಗೆ 15 ಕೋಟಿ ರೂ. ಅನುದಾನ ನಿಗದಿಯಾಗಿದೆ. ನಗರದ ಜನತೆಗೆ ಸಮಗ್ರವಾಗಿ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಕೋಡಿಮೋಳೆ ಕೆರೆ ಪಂಪ್‍ಹೌಸ್ ವೀಕ್ಷಣೆ ಬಳಿಕ ಶಾಸಕರು ದೊಡ್ಡ ಕೆರೆ, ಚಿಕ್ಕ ಕೆರೆಗೂ ಭೇಟಿ ನೀಡಿ ಪರಿಶೀಲಿಸಿದರು.
ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಸ್. ಮಹೇಶ್, ಸಹಾಯಕ ಎಂಜಿನಿಯರ್ ಎಂ.ವಿ. ಲೋಕೇಶ್, ಅಮೃತ ಕನ್ಸ್‍ಟ್ರಕ್ಷನ್ ಗುತ್ತಿಗೆದಾರರಾದ ರಾಧಾಕೃಷ್ಣರೆಡ್ಡಿ, ನಗರಸಭೆ ಸದಸ್ಯರಾದ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಟರಾಜು, ಮುಖಂಡರಾದ ಗೋವಿಂದಶೆಟ್ಟಿ, ನಾಗಯ್ಯ, ಇತರರು ಇದ್ದರು.