ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ನಿಜಗುಣರಾಜು ಆರೋಪದಲ್ಲಿ ಹುರುಳಿಲ್ಲ: ಬಿ.ಕೆ.ರವಿಕುಮಾರ್

ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಮುಖಂಡ ನಿಜಗುಣರಾಜು ಆರೋಪ ಮಾಡಿರುವ ಆರೋಪದಲ್ಲಿ ಯಾವುದೇ ಹುರಳಿಲ್ಲ  ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾ‌ರ್ ಹೇಳಿದರು.
    ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಿಜಗುಣರಾಜು ಅವರಿಗೆ ಟೀಕೆ ಮಾಡುವುದು ಒಂದು ಚಾಳಿಯಾಗಿದೆ. ಅವರ ಇದೇ ರೀತಿ ಇಲ್ಲ ಸಲ್ಲದ ಆರೋಪಗಳನ್ನು ಮಾಡು ವುದನ್ನು ಮುಂದುವರಿಸಿದರೆ ಅವರ ಲೋಪದೋಷಗಳನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿಎಂ ಸಿದ್ದರಾಮಯ್ಯ ಅವರು ನೀಡಿರುವ 50 ಕೋಟಿ ಅನುದಾನವನ್ನು ಯಾವ ಯಾವ ಇಲಾಖೆಗೆ ಹಂಚಿಕೆಯ ಮಾಡಬೇಕು ಎಂಬುದನ್ನು ಸರ್ಕಾರ ಮಾನದಂಡ ಹಾಕಿಕೊಟ್ಟಿದೆ. 50 ಕೋಟಿಯಲ್ಲಿ 5-6 ಕೋಟಿ ಬಿಟ್ಟರೆ ಉಳಿದ ಹಣ ಬಂದಿಲ್ಲ. ಇದರ ಬಗ್ಗೆ ಮಾಹಿತಿ ಇಲ್ಲದೇ ನಿಜಗುಣರಾಜು ಆರೋಪ ಮಾಡುತ್ತಿದ್ದಾರೆ ಎಂದರು.
ವೀರನಪುರ ಬಳಿ 1.30 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಹೋಗುವ ರಸ್ತೆಯಾಗಿರುವುದರಿಂದ ಅಭಿವೃದ್ಧಿಪಡಿಸಲಾಗುತ್ತಿದೆ. 5 ಎಕರೆ ಸರ್ಕಾರಿ ಜಮೀನು ಕಬಳಿಸುವ ಹುನ್ನಾರ ಎಂದು ಹೇಳುವ ನಿಜಗುಣರಾಜು ಅವರು ಈ ಬಗ್ಗೆ ಆಧಾರಗಳಿದ್ದರೆ ಕೊಡಲಿ ಎಂದು ಸವಾಲು ಹಾಕಿದರು.
ಮಾಲಂಗಿಯಿಂದ ಚಾ.ನಗರಕ್ಕೆ ಕಾವೇರಿ ನೀರು ತರುವ ಯೋಜನೆಗೆ 157 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವುದರಿಂದಲೇ 4 ಬಾರಿ ಶಾಸಕರನ್ನಾಗಿ ಜನರು ಆಯ್ಕೆ ಮಾಡಿದ್ದಾರೆ ಎಂದರು.
ಪುಟ್ಟರಂಗಶೆಟ್ಟರು ಶಾಸಕರಾಗುವ ಮುಂಚಿನಿಂದಲೂ ಕರಿಕಲ್ಲು ಉದ್ಯಮಿಯಾಗಿದ್ದಾರೆ. ಅಲ್ಲದೇ ವ್ಯವಸಾಯ ಕೂಡ ಮಾಡುತ್ತಿದ್ದು ಅದರಲ್ಲಿ ಬಂದ ಆದಾಯದಲ್ಲಿ ಆಸ್ತಿ ಖರೀದಿಸಿದ್ದು ಎಲ್ಲವೂ ಕಾನೂನುಬದ್ಧವಾಗಿದೆ. ಬಿಜೆಪಿ ಅವಧಿಯಲ್ಲಿ ಚಾ.ನಗರ ಜಿಲ್ಲೆಗೆ ಯಾವುದೇ ಅನುದಾನ ಕೊಡುತ್ತಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಪ್ರತಿ ಬಜೆಟ್‌ನಲ್ಲಿಯೂ ಒಂದಿಲ್ಲೊಂದು ಅನುದಾನ ನೀಡುತ್ತಿದ್ದಾರೆ ಎಂದು ಹೇಳಿದರು.
ನಗರದ ನ್ಯಾಯಾಲಯದ ರಸ್ತೆ ನಿರ್ಮಾಣ ವಿಳಂಬಕ್ಕೆ ನಿಜಗುಣರಾಜು ಅವರೇ ಕಾರಣರಾಗಿದ್ದು ಜನರ ಬಗ್ಗೆ ಅವರಿಗೆ ಕಾಳಜಿ ಇದ್ದರೆ ರಸ್ತೆಗೆ ಜಾಗ ಬಿಟ್ಟು ಕೊಡದೇ ಕೋರ್ಟ್‌ನಲ್ಲಿ ತಡೆಯಾಜ್ಞೆ ಯಾಕೆ ತಂದರು ಎಂದು ಪ್ರಶ್ನಿಸಿದರು.
ಅವರ ಹೆಸರು ನಿಜಗುಣರಾಜು ಅಂತಾ ಇದೆ. ಅದಕ್ಕೆ ತದ್ವಿರುದ್ಧವಾಗಿ ಸುಳ್ಳನ್ನೇ ಹೇಳುವ ಮೂಲಕ ಸುಳ್ಳುಗುಣ ಎಂದು ಪತ್ರಿಕೆ ಹೇಳಿಕೆ ನೀಡುವ ಮೂಲಕ ತೋರಿಸಿಕೊಂಡಿದ್ದಾರೆ.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಟರ್, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸೋಮೇಶ್ವರ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕನಿಷ್ಠ ವೇತನಾ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಉಮೇಶ್ ಎಸ್ ಪಿಕೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಶಿವಮೂರ್ತಿ, ನಗರಸಭಾ ಮಾಜಿ ಸದಸ್ಯರಾದ ಚೆಂಗುಮಣಿ, ಕರಿನಂಜ‌ನಪುರ ಸ್ವಾಮಿ, ತಾ.ಪಂ.ಮಾಜಿ ಸದಸ್ಯ ಪುಟ್ಟಸ್ವಾಮಿ ಹಾಜರಿದ್ದರು.

Leave a Reply

Your email address will not be published. Required fields are marked *