ಚಾಮರಾಜನಗರ: ಪುಸ್ತಕ ಎಂಬುದು ಸಂಸ್ಕøತಿಯಾಗಿ ಮನೆ ಮನೆಯ ಜ್ಞಾನದ ಸಂಪತ್ತಾಗಿ ಅಸ್ತಿತ್ವ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರವು ಕನಿಷ್ಠ 1 ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ತಿಳಿಸಿದರು.
ನಗರದ ರೋಟರಿ ಭವನದ ಸಭಾಂಗಣದಲ್ಲಿಂದು ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆ ‘ಮನೆಗೊಂದು ಗ್ರಂಥಾಲಯ’ ಕರಪತ್ರ ಬಿಡುಗಡೆ ಹಾಗೂ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಗೊಂದು ಗ್ರಂಥಾಲಯವು ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಅಸ್ತಿತ್ವಕ್ಕೆ ತರುವ ಗುರಿಯೊಂದಿಗೆ ಕಾರ್ಯೋನ್ಮುಖರಾಗಿದ್ದೇವೆ. ಇದಕ್ಕೆ ಬೇಕಾಗುವ ಪುಸ್ತಕಗಳ ಖರೀದಿಯಿಂದ ಪುಸ್ತಕ ಪ್ರಕಾಶಕರಿಗೆ, ಪುಸ್ತಕ ವ್ಯಾಪಾರಿಗಳಿಗೆ, ಕಾಗದ ಮಾರಾಟಗಾರರಿಗೆ, ವಿತರಕರಿಗೆ ಹೀಗೆ ಇಡೀ ಪುಸ್ತಕ ಉದ್ಯಮ ವರ್ಷಪೂರ್ತಿ ಕ್ರೀಯಾಶೀಲವಾಗಿರುತ್ತದೆ ಎಂದರು.
ಮನೆಗಳಲ್ಲಿ ಸ್ಥಾಪನೆಯಾದ ಗ್ರಂಥಾಲಯಗಳ ಬೆಳವಣಿಗೆ ಹಾಗೂ ಇದರ ವಾರಸುದಾರರನ್ನು ಗೌರವಿಸುವ ಹಾಗೂ ಉತ್ತೇಜಿಸುವ ಸಲುವಾಗಿ ಪ್ರಾಧಿಕಾರ ರಾಜ್ಯದ 4 ಕಂದಾಯ ವಿಭಾಗಗಳಿಗೂ ನಾಲ್ವರು ವಿದ್ವಾಂಸರ ಹೆಸರಿನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ನಂಜನಗೂಡು ತಿರುಮಲಾಂಬ, ಹಾ.ಮಾ. ನಾಯಕ, ಪಿ.ಆರ್. ತಿಪ್ಪೇಸ್ವಾಮಿ, ಗಳಗನಾಥ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.
ಸ್ಥಾಪನೆಗೊಂಡ ಗ್ರಂಥಾಲಯಗಳ ನಿರಂತರ ಬೆಳವಣಿಗೆ ಹಾಗೂ ಕ್ರೀಯಾಶೀಲತೆಗೆ ಪುಸ್ತಕ ಪ್ರಾಧಿಕಾರವು ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರನ್ನು ನೇಮಿಸಿದೆ. ಪುಸ್ತಕ ಪ್ರೇಮಿಗಳಾಗಿರುವ ಸದಸ್ಯರು ಮನೆಗೊಂದು ಗ್ರಂಥಾಲಯದವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿ ಸಾಹಿತಿಗಳು, ಕಲಾವಿದರು, ಗಣ್ಯರು ಊರಿಗೆ ಬಂದಾಗ ಗ್ರಂಥಾಲಯದ ಮನೆಗಳಿಗೆ ಕರೆದೊಯ್ದು ಮಾತನಾಡಿಸುವುದು, ಊರಿನ ಸಾಹಿತಿ, ಕಲಾವಿದರಿಗೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಹೊಸ ಪುಸ್ತಕ ಪ್ರಕಟಿಸಿದ್ದಲ್ಲಿ ಗ್ರಂಥಾಲಯದ ಮನೆಗಳಲ್ಲಿ ಕಿರುಪರಿಚಯ, ಸಭೆ, ಸಮಾರಂಭ ಮಾಡುವ ಪ್ರೀತಿಯ ಕಾಯಕವನ್ನು ಸಮಿತಿಯ ಸದಸ್ಯರು ನಿರ್ವಹಿಸಲಿದ್ದಾರೆ ಎಂದರು.
ಈಗಾಗಲೇ ಪ್ರಾಧಿಕಾರದಿಂದ ಅಂಗಳದಲ್ಲಿ ತಿಂಗಳ ಪುಸ್ತಕ ಎಂಬ ಕಾರ್ಯಕ್ರಮ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮನೆ ಗ್ರಂಥಾಲಯಗಳಿಗೂ ವಿಸ್ತಾರವಾಗಲಿದೆ. ಪ್ರತಿ ತಿಂಗಳು ಕನಿಷ್ಟ 100 ಮನೆಗಳಲ್ಲಿ 100 ಪುಸ್ತಕಗಳ ಪರಿಚಯ ಸಂವಾದ ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿಗಳು, ದೀನಬಂಧು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಪ್ರೊ. ಜಿ.ಎಸ್. ಜಯದೇವ ಅವರು ಬದುಕು, ಜೀವನದ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಶಕ್ತಿ ಪುಸ್ತಕಗಳಿಗಿದೆ. ಅಸಾಧಾರಣ ಬದಲಾವಣೆಗೆ ಕಾರಣವಾಗಿರುವ ಪುಸ್ತಕಗಳ ಬಗ್ಗೆ ಪ್ರೀತಿ ಇರಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಪುಸ್ತಕದ ಬಗ್ಗೆ ಒಲವು, ಅಭಿರುಚಿ ಹೊಂದಬೇಕು ಎಂದು ಸಲಹೆ ಮಾಡಿದರು.
ಮನೆಗೊಂದು ಗ್ರಂಥಾಲಯದ ಉದ್ದೇಶ ಉತ್ತಮವಾಗಿದೆ. ಆದರೆ ಈ ಗ್ರಂಥಾಲಯಗಳಲ್ಲಿ ನಮ್ಮ ನೆಲದ ಅಸ್ಮಿತೆ, ಔದಾರ್ಯ, ಕನ್ನಡ ಶ್ರೀಮಂತ ಪರಂಪರೆ ಬಗೆಗಿನ ಪುಸ್ತಕಗಳನ್ನು ಇಡಬೇಕು. ಸ್ಥಳೀಯ ಸಂಸ್ಕøತಿಗೆ ಹತ್ತಿರವಾಗುವ, ಪ್ರಗತಿಪರ ಚಿಂತನೆ, ಮನುಷ್ಯನ ಅರಿವು ವಿಸ್ತಾರ ಮಾಡುವ ಸರಳವಾಗಿ ಓದಬಹುದಾದ ಪುಸ್ತಕಗಳು ಗ್ರಂಥಾಲಯಗಳಲ್ಲಿ ಇಡುವುದು ಮುಖ್ಯವಾಗಿದೆ. ಸಾಮರಸ್ಯ, ಸಾಮಾಜಿಕ ಸಂದೇಶವುಳ್ಳ ಪುಸ್ತಕಗಳು ಗ್ರಂಥಾಲಯಗಳಲ್ಲಿ ಇರಬೇಕಿದೆ ಎಂದು ಪ್ರೊ. ಜಿ.ಎಸ್. ಜಯದೇವ ಅವರು ತಿಳಿಸಿದರು.
ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಪ್ರಾಂಶುಪಾಲರದ ಡಾ. ಎನ್. ಮಹದೇವಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷರಾದ ಕಾಗಲವಾಡಿ ಚಂದ್ರು, ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿಯ ಸಂಚಾಲಕರಾದ ಸಿ.ಎಂ. ನರಸಿಂಹಮೂರ್ತಿ, ಸದಸ್ಯರಾದ ಮೂಕಳ್ಳಿ ಬಸವಣ್ಣ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
Like this:
Like Loading...
Related