ನ. 14ರಂದು ಎಲ್ಲಾ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಪೋಷಕರು-ಶಿಕ್ಷಕರ ಮಹಾಸಭೆ : ಜಿ.ಪಂ ಸಿಇಒ ಮೋನಾ ರೋತ್

ಚಾಮರಾಜನಗರ: ದಾಖಲಾತಿ ಹೆಚ್ಚಳ, ಶೈಕ್ಷಣಿಕ ಅಭಿವೃದ್ದಿಗೆ ಪೂರಕ ವಾತಾವರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ಇನ್ನಿತರ ಹಲವು ಮಹತ್ತರ ಉದ್ದೇಶದೊಂದಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ನವೆಂಬರ್ 14ರಂದು ಏಕಕಾಲದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಪೋಷಕ-ಶಿಕ್ಷಕ ಮಹಾಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು. 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ ಕಾರ್ಯಕ್ರಮದ ಸಂಬಂಧ ವಿವರ ನೀಡಿದ ಜಿಲ್ಲಾ ಪಂಚಾಯತ್ ಸಿಇಒ ಅವರು ನವೆಂಬರ್ 14ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.15 ಗಂಟೆಯವರೆಗೆ ಮಹಾಸಭೆ ನಡೆಸಲು ವೇಳಾಪಟ್ಟಿ ನೀಡಲಾಗಿದೆ. ಜಿಲ್ಲೆಯಲ್ಲಿ 825 ಸರ್ಕಾರಿ ಶಾಲೆಗಳಲ್ಲಿದ್ದು, 1 ರಿಂದ 10ನೇ ತರಗತಿಯವರೆಗೆ ಒಟ್ಟು 50699 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 25 ರಿಂದ 30 ಸಾವಿರ ಪೋಷಕರು ಮಹಾಸಭೆಗೆ ಹಾಜರಾಗುವ ನಿರೀಕ್ಷೆ ಇದೆ ಎಂದರು. 

ಶಿಕ್ಷಕ ಪೋಷಕ ಮಹಾಸಭೆಯಲ್ಲಿ ಪ್ರತಿ ಮಗುವಿನ ಶೈಕ್ಷಣಿಕ ಪ್ರಗತಿ, ಶಾಲಾ ಭೌತಿಕ ಸೌಲಭ್ಯಗಳು, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಲಾಗುತ್ತದೆ. ದಾನಿಗಳು ವಿಶೇಷ ಸಾಧನೆ ಮಾಡಿರುವ ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಸಿಇಒ ಅವರು ತಿಳಿಸಿದರು.

ಸರ್ಕಾರಿ ಶಾಲೆಗಳ ದಾಖಲಾತಿ ಬಗ್ಗೆ ಹೆಚ್ಚಿನ ಜಾಗೃತಿ ಉಂಟುಮಾಡಲು, ನನ್ನ ಶಾಲೆ ನನ್ನ ಜವಾಬ್ದಾರಿ, ಪ್ರಗತಿ ಕುರಿತು ಪೋಷಕರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ, ಪರೀಕ್ಷೆಯ ಸ್ವರೂಪ ಕುರಿತು ಪೋಷಕರೊಡನೆ ಸಮಾಲೋಚಿಸಿ ಸಹಕಾರ ಕೋರಲಾಗುತ್ತದೆ. ಪೋಷಕ-ಶಿಕ್ಷಕ ಮಹಾಸಭೆಗೆ ಹಾಜರಾಗುವ ಪೋಷಕರಿಗೆ ಶಾಲೆಯಲ್ಲೇ ಊಟದ ವ್ಯವಸ್ಥೆ ಮಾಡುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ಪೋಷಕ-ಶಿಕ್ಷಕರ ಮಹಾಸಭೆಯನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರು ಯೂಟ್ಯೂಬ್ ಲೈವ್ ಮೂಲಕ ಜಿಲ್ಲೆಯ ಎಲ್ಲಾ ಶಾಲೆಗಳ ಎಸ್.ಡಿ.ಎಂ.ಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಈಗಾಗಲೇ ಮಾರ್ಗದರ್ಶನ ನೀಡಿದ್ದಾರೆ. ಮುಖ್ಯಮಂತ್ರಿಗಳು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಯುಟ್ಯೂಬ್ ಲೈವ್‍ನಲ್ಲಿ ಪ್ರಸಾರವಾಗಲಿದೆ. ಇದರ ವೀಕ್ಷಣೆಗೆ ಶಾಲೆಗಳಲ್ಲಿ ನೇರಪ್ರಸಾರದ ವ್ಯವಸ್ಥೆ ಮಾಡಲು ತಿಳಿಸಲಾಗಿದೆ ಎಂದು ತಿಳಿಸಿದರು.

ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಎಸ್.ಡಿ.ಎಂ.ಸಿ, ಸಿಡಿಸಿ ರವರು ಪೋಷಕರನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡು ಪರಿಚಯ ಮಾಡಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ, ಪೋಷಣೆ, ಕಲಿಕಾ ಪ್ರಗತಿಯಲ್ಲಿ ಪೋಷಕರ ಜವಾಬ್ದಾರಿ ಮತ್ತು ಭಾಗವಹಿಸುವಿಕೆಯ ಬಗ್ಗೆ ತಿಳಿಸಿಕೊಡಲಾಗುತ್ತದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ದಿ, ಶಾಲೆಯ ಅವಶ್ಯಕತೆಗಳು, ಅಭಿವೃದ್ದಿ ಯೋಜನೆಗಳ ಬಗ್ಗೆ ಪೋಷಕರ ನಿರೀಕ್ಷೆ ಸಹಕಾರ ಸಲಹೆ ಪಡೆಯಲಾಗುತ್ತದೆ. ಈ ವಿಶೇಷ ಮಹಾಸಭೆಗೆ ಪೋಷಕರು, ಜಿಲ್ಲೆಯ ಜನತೆ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮನವಿ ಮಾಡಿದರು. 

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಕಾಂತ್ ಪಾಟೀಲ್ ಅವರು ಮಾತನಾಡಿ ನವೆಂಬರ್ 14ರಂದು ಏರ್ಪಡಿಸಿರುವ ಪೋಷಕ-ಶಿಕ್ಷಕರ ಮಹಾಸಭೆಯಂದು ಶಾಲಾ ಕಾಲೇಜುಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗುತ್ತದೆ. ಮಕ್ಕಳ ದಿನಚರಿ ಮೂಲಕ ಅವರ ಪೋಷಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಸಭೆಯ ಯಶಸ್ವಿಗೆ ಸರ್ವ ಸಿದ್ದತೆ ಕೈಗೊಳ್ಳಲಾಗಿದೆ ಎಂದರು. 

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಡಯಟ್ ಪ್ರಾಂಶುಪಾಲರಾದ ಕಾಶಿನಾಥ್ ಸುದ್ದಿಗೋಷ್ಟಿಯಲ್ಲಿ ಇದ್ದರು.

Leave a Reply

Your email address will not be published. Required fields are marked *