ಚಾಮರಾಜನಗರ, ಫೆಬ್ರವರಿ 27 (ಕರ್ನಾಟಕ ವಾರ್ತೆ):- ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿರುವ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಪ್ರಮುಖವಾಗಿದೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿಂದು ಚಾಮರಾಜನಗರ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತರ ಕಾಲೇಜುಗಳ ಪುರುಷರ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ವಿಶ್ವವಿದ್ಯಾಲಯವು 2023ರಲ್ಲಿ ಆರಂಭವಾಗಿದ್ದು, ಅಂದಿನಿಂದ ಈವರೆಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿದೆ. ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಸಾಧನೆಗೈಯ್ಯಲು ನೆರವಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಹೆಚ್ಚಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳ್ಳಬೇಕು ಎಂದರು.
ಮಾನಸಿಕ ಹಾಗೂ ದೈಹಿಕ ಸುಸ್ಥಿರತೆ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯೂ ಅತೀ ಮುಖ್ಯವಾಗಿದೆ. ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಕ್ರೀಡೆಗಳು ನಡೆಸಲು ಸುಸಜ್ಜಿತ ಮೈದಾನದ ಅವಶ್ಯವಿದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿಯೇ ಉತ್ತಮ ಕ್ರೀಡಾ ಮೈದಾನ ನಿರ್ಮಾಣವಾಗಲಿದೆ. ಅಲ್ಲದೆ ನಶಿಸಿ ಹೋಗುತ್ತಿರುವ ಕ್ರೀಡೆಗಳನ್ನು ಉಳಿಸಿ ಬೆಳೆಸಲು ವಿಶ್ವವಿದ್ಯಾನಿಲಯ ಒತ್ತು ನೀಡಲಿದೆ. ಆ ಮೂಲಕ ಜಿಲ್ಲೆಯಿಂದ ಹೆಚ್ಚಿನ ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕಿದೆ ಎಂದು ಪ್ರೊ. ಎಂ.ಆರ್. ಗಂಗಾಧರ್ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಸುರೇಶ್ ಎಚ್. ಜಂಗಮಶೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳು ವಿದ್ಯಾರ್ಥಿಗಳಿಗೆ ಆತ್ಮಬಲ ತುಂಬಲಿವೆ. ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ ಶಾರೀರಿಕ ಸುಸ್ಥಿತಿಯೊಂದಿಗೆ ಕ್ರೀಡಾಸ್ಪೂರ್ತಿ ಮೆರೆಯುವ ಮನೋಭಾವ ಮೂಡಲಿದೆ. ಕ್ರೀಡೆಗಳಿಂದ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ ಎಂದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಕೊಡಗು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಆಶೋಕ ಸಂ ಆಲೂರ ಅವರು ಮಾತನಾಡಿ ಕ್ರೀಡೆ ವಿದ್ಯಾರ್ಥಿಗಳಿಗೆ ಕೇವಲ ಭೌತಿಕ ಶಕ್ತಿ ವೃದ್ಧಿಸುವುದಲ್ಲ ಹಾಗೂ ಕೇವಲ ಆಟವಲ್ಲ, ಬದಲಾಗಿ ಧೈರ್ಯ, ಏಕತಾ ಮನೋಭಾವ, ಹೋರಾಟ ಸಾಮಥ್ರ್ಯವನ್ನು ಹೆಚ್ಚಿಸಲಿದೆ. ಒತ್ತಡ ನಿವಾರಣೆಗೂ ಕ್ರೀಡೆ ಸಹಕಾರಿಯಾಗಿದೆ. ಎಲ್ಲಾ ಬಗೆಯ ವೈಪರಿತ್ಯಗಳನ್ನು ದಾಟಿ ಕ್ರೀಡೆ ವಿದ್ಯಾರ್ಥಿಗಳನ್ನು ಒಂದುಗೂಡಿಸಲಿದೆ ಎಂದರೇ ತಪ್ಪಾಗಲಾರದು ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಶಾಂತರಾಜು ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಎಸ್. ಮಹದೇವಸ್ವಾಮಿ, ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ಕೆ.ಎಂ. ಮಹದೇವನ್, ಕ್ರೀಡಾ ಸಲಹಾ ಸಮಿತಿ ಸದಸ್ಯರಾದ ಜಿ. ಬಂಗಾರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಿವಿಧ ಕಾಲೇಜುಗಳ ಕ್ರೀಡಾತಂಡಗಳ ನಾಯಕರನ್ನು ಗಣ್ಯರು ಪರಿಚಯ ಮಾಡಿಕೊಂಡರು. ಕ್ರೀಡಾಜ್ಯೋತಿ ಸ್ವೀಕರಿಸಿದರು.
Like this:
Like Loading...
Related