ಚಾಮರಾಜನಗರ: ವಿಶೇಷಚೇತನರು ತಮ್ಮಲ್ಲಿರುವ ನ್ಯೂನತೆಗಳ ಬಗ್ಗೆ ಕೀಳಿರಿಮೆ ಬಿಟ್ಟು ಸಕಾರಾತ್ಮಕ ಸಾಧನೆಗಾಗಿ ಕಠಿಣ ಪರಿಶ್ರಮ ಹಾಕುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಸಲಹೆ ಮಾಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.
ಅಂಗವಿಕಲತೆ ದೈವದತ್ತವಾಗಿದ್ದು, ವಿಶೇಷಚೇತನರು ಏನೂ ಸಾಧನೆ ಮಾಡಲು ಸಾಧ್ಯವಿಲ್ಲವೆಂಬ ಕೀಳಿರಿಮೆ ಬಿಡಬೇಕು. ಎಲ್ಲಾ ವಿಚಾರಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ವಿಕಲಚೇತನರ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಂಗವಿಕಲರು ಸಾಧನೆ ಮಾಡಿದ್ದಾರೆ. ಪ್ಯಾರಾ ಒಲಂಪಿಕ್ಸ್‍ನಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದವರನ್ನು ತಾವೆಲ್ಲರೂ ಮಾದರಿಯಾಗಿಸಿಕೊಳ್ಳಬೇಕು. ಸಾಧನೆಗಾಗಿ ಸತತ ಪ್ರಯತ್ನ, ಹಾಕಬೇಕು. ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ ಸೇರಿದಂತೆ ಯಾವುದೇ ಕ್ಷೇತ್ರದ ಸಾಧಕರ ನಿರಂತರ ಪರಿಶ್ರಮವನ್ನು ಎಲ್ಲರೂ ಮನಗಾಣಬೇಕು ಎಂದರು.
ವಿದ್ಯುತ್ ಬಲ್ಬ್ ಕಂಡುಹಿಡಿದ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಕೂಡ ಅಂಗವಿಕಲರಾಗಿದ್ದು, ವಿಕಲತೆ ಬಗ್ಗೆ ಚಿಂತಿಸುತ್ತಿದ್ದರೆ ಅವರಿಂದ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಗಾಂಧಿಜೀಯವರು ಸಾಧನೆ ಕೇವಲ ಒಬ್ಬರ ಸ್ವತ್ತಲ್ಲ ಎಂದಿದ್ದಾರೆ. ನಮ್ಮ ಆಲೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸಲಿರುವುದರಿಂದ ವಿಕಲಚೇತನರು ನ್ಯೂನತೆಗಳ ಬಗ್ಗೆ ಚಿಂತೆಗೀಡಾಗದೇ ನಕಾರಾತ್ಮಕ ಚಿಂತನೆಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳಬೇಕು. ವಿಕಲತೆಯ ಕೀಳಿರಿಮೆ ಬಿಟ್ಟರೆ ಮಾತ್ರ ಸಾಧನೆ ಹೊರಹೊಮ್ಮಲು ಸಾಧ್ಯವಾಗಲಿದೆ. ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಸುರೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್, ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುಧಯ ಸಂಘದ ಅಧ್ಯಕ್ಷರಾದ ರಮೇಶ್, ದೈಹಿಕ ಶಿಕ್ಷಕರ ಸಂಘದ ತಾಲೂಕು ಆಧ್ಯಕ್ಷರಾದ ಚಿಕ್ಕಬಸವಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೂರು ಬಾರಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಮನೋಜ್ ಅವರು ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿಕಲಚೇತನರ ಜಿಲ್ಲಾಮಟ್ಟದ ವಿಕಲಚೇತನರ ಕ್ರೀಡಾಕೂಟದ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಕಲಚೇತನರು ಭಾಗವಹಿಸಿದ್ದರು.