ನಗರದಲ್ಲಿನ ಅರ್ಥಪೂರ್ಣವಾಗಿ ನಡೆದ ಪೊಲೀಸ್ ಧ್ವಜ ದಿನ ಆಚರಣೆ

ಚಾಮರಾಜನಗರ: ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸೇವೆ ಸ್ಮರಿಸಿ ಗೌರವ ಸಮರ್ಪಿಸುವ ಸಲುವಾಗಿ ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನದ ಆಚರಣೆಯನ್ನು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

 ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕವಾಯತು ಮೈದಾನದಲ್ಲಿಂದು ಜಿಲ್ಲಾ ಪೊಲೀಸ್ ವತಿಯಿಂದ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ವಿವಿಧ ಉಪವಿಭಾಗಗಳ ಪೊಲೀಸ್ ಪಡೆಗಳು, ಮಹಿಳಾ ಪೊಲೀಸ್ ತುಕಡಿಗಳು ಪೆರೇಡ್ ಕಮಾಂಡರ್ ಆರ್.ಪಿ. ಸತೀಶ್ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಸಿ ನಿವೃತ್ತ ಅಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಿದವು. 

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಸಾರ್ವಜನಿಕರ ಸುರಕ್ಷತೆಗಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗುವ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಗೌರವ ಸಲ್ಲಿಸಲು 1965ರಿಂದ ಪ್ರತಿವರ್ಷ ಏಪ್ರಿಲ್ 2ರಂದು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ನಿವೃತ್ತ ಅಧಿಕಾರಿ, ಸಿಬ್ಬಂದಿಗಳ ಮುಂದಿನ ಜೀವನ ಸುಖಕರವಾಗಿರಲೆಂಬ ಸದುದ್ದೇಶ ಪೊಲೀಸ್ ಧ್ವಜ ದಿನದ ಪ್ರಮುಖ ಉದ್ದೇಶವಾಗಿದೆ ಎಂದರು.

  ಧ್ವಜ ದಿನದ ಆಚರಣೆಯಲ್ಲಿ 100, 200, 500 ಮುಖಬೆಲೆಯ ಪೊಲೀಸ್ ಧ್ವಜಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ನಿವೃತ್ತರಿಗೆ ವೈದ್ಯಕೀಯ ವೆಚ್ಚ ಸೇರಿದಂತೆ ಇನ್ನಿತರೆ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತದೆ. ಆ ಮೂಲಕ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿವೃತ್ತರಾಗುವ ಅಧಿಕಾರಿಗಳಿಗೆ ಇಲಾಖೆ ವತಿಯಿಂದ ಗೌರವ ಸಮರ್ಪಣೆ ನೀಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರು ತಿಳಿಸಿದರು.

  ಇದೇ ವೇಳೆ ವಿವಿಧ ಮುಖಬೆಲೆಯ ಪೊಲೀಸ್ ಧ್ವಜಗಳನ್ನು ಗಣ್ಯರು ಪ್ರದರ್ಶಿಸಿದರು. ಬಳಿಕ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಆರಕ್ಷಕ ಉಪನಿರೀಕ್ಷಕರಾದ ಎಚ್.ಬಿ. ಮಾದೇಗೌಡ ಅವರು ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿಗಳನ್ನು ಹಾರ, ತುರಾಯಿ, ಫಲ ತಾಂಬೂಲ ನೀಡಿ ಗೌರವಿಸಲಾಯಿತು. 

 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿವೈಎಸ್‍ಪಿಗಳಾದ ಸ್ನೇಹರಾಜ್, ಧರ್ಮೇಂದ್ರ, ಸೋಮಣ್ಣ, ಇತರೆ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *