ಜಿಲ್ಲೆಯ 18 ತಾಣಗಳಲ್ಲಿ ಬಿ.ಎಸ್.ಎನ್.ಎಲ್ 4ಜಿ ಸ್ಯಾಚುರೇಷನ್ ಸೇವೆಗೆ ವರ್ಚುವೆಲ್ ಮೂಲಕ ಪ್ರಧಾನಿಯವರಿಂದ ಚಾಲನೆ

4ಜಿ ಸೇವೆ ತುರ್ತು ಸಂದರ್ಭಗಳಲ್ಲಿ ಉಪಯುಕ್ತ – ಶಾಸಕರಾದ ಎ.ಆರ್. ಕೃಷ್ಣಮೂರ್ತಿ

ಚಾಮರಾಜನಗರ, ಸೆಪ್ಟೆಂಬರ್ 27 (ಕರ್ನಾಟಕ ವಾರ್ತೆ):- ಚಾಮರಾಜನಗರ ಜಿಲ್ಲೆಯ 18 ತಾಣಗಳಲ್ಲಿ  ಬಿ.ಎಸ್.ಎನ್.ಎಲ್.ಹೊಸ 4ಜಿ ಸ್ಯಾಚುರೇಶನ್ ಸೇವೆಗಳಿಗೆ ಇಂದು ಚಾಲನೆ ದೊರೆತಿದೆ.

ಪ್ರಧಾನಿ ನರೇಂದ್ರಮೋದಿ ಅವರು ಇಂದು ಒಡಿಶಾದ  ಬೆರ್ಹಾಂಪುರದಿಂದ ದೇಶದ ವಿವಿಧ ಭಾಗಗಳಿಗೆ 4ಜಿ ಸ್ಯಾಚುರೇಷನ್ ಯೋಜನೆಯಡಿ ಹೊಸ ಸ್ವದೇಶೀ ತಂತ್ರಜ್ಞಾನದ 4 ಜಿ ಸೇವೆಗಳಿಗೆ ವರ್ಚುವೆಲ್ ಮೂಲಕ ಚಾಲನೆ ನೀಡಿದ್ದು ಇದರಲ್ಲಿ ಚಾಮರಾಜನಗರ ಜಿಲ್ಲೆಯ 18 ತಾಣಗಳು ಸೇರಿವೆ.

ಕೊಳ್ಳೇಗಾಲ ತಾಲೂಕಿನ ಅರೆಪಾಳ್ಯದಲ್ಲಿ ಬಿ.ಎಸ್.ಎನ್.ಎಲ್. 4ಜಿ ಸ್ಯಾಚುರೇಷನ್ ಸೇವೆಗೆ ಚಾಲನೆ ನೀಡುವ ವರ್ಚುವೆಲ್ ಕಾರ್ಯಕ್ರಮ ಸ್ಥಳೀಯವಾಗಿ ನಡೆಯಿತು. ವರ್ಚುವೆಲ್ ಮೂಲಕ ನಡೆದ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲಾಯಿತು.

ಸ್ಥಳೀಯವಾಗಿಯೂ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿಯವರು ದೀಪ ಬೆಳಗಿಸಿದರು.ಸ್ಥಳೀಯ 4ಜಿ ಸ್ಯಾಚುರೇಷನ್ ಟವರ್ ಉದ್ಘಾಟನಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

  ಇದೇ ವೇಳೆ ಮಾತನಾಡಿದ ಶಾಸಕರಾದ ಎ.ಆರ್. ಕೃಷ್ಣಮೂರ್ತಿಯವರು ಪ್ರಮುಖ ಬಿ.ಎಸ್.ಎನ್.ಎಲ್ 4ಜಿ ಹೊಸ ಸ್ಯಾಚುರೇಷನ್ ಸೇವೆಯು ಇಂದು ಚಾಮರಾಜನಗರ ಜಿಲ್ಲೆಯ ಕುಂಭೇಶ್ವರ ಕಾಲೋನಿ, ಮುರಟಿಪಾಳ್ಯ, ಸೊತ್ತನಹುಂಡಿ, ನಾಗಪಟ್ಟಣ, ರಂಗನಾಥಪುರ, ಎಲಚೆಟ್ಟಿ, ದಡದಹಳ್ಳಿ, ಬಂಡೀಪುರ, ಹಾಲಹಳ್ಳಿ, ನಾಗನತ್ತ, ದಿನ್ನಹಳ್ಳಿ, ಹೂಗ್ಯಂ, ಮೀಣ್ಯಂ ಎ ಬೀಟ್, ಗೋಪಿನಾಥಂ ಬೀಟ್, ಅರಬಗೆರೆ, ಗುಂಡಾಲ್ ಎ ಬೀಟ್  ಬೂದಿಗುಪ್ಪ, ಅರೆಪಾಳ್ಯದಲ್ಲಿ ಹೆಚ್ಚಿನ ವೇಗದ ಮೊಬೈಲ್ ಇಂಟರ್‍ನೆಟ್ ಗೆ ಅನುವಾಗಲಿದೆ . 4ಜಿ ಸ್ಯಾಚುರೇಷನ್ ಯೋಜನೆಯಡಿ ಈ ಎಲ್ಲವೂ ಸಾಧ್ಯವಾಗಲಿದೆ ಎಂದರು.

  4ಜಿ ಸ್ಯಾಚುರೇಷನ್ ಸೇವೆಯಿಂದ ತುರ್ತು ಸಂದರ್ಭಗಳಲ್ಲಿ ಜನರಿಗೆ ಅನುಕೂಲವಾಗಲಿದೆ. ವೈದ್ಯಕೀಯ, ಅಗ್ನಿಶಾಮಕ ಸೇವೆ, ಪೊಲೀಸ್ ಸೇವೆ ಡಿಜಿಟಲ್ ಶಿಕ್ಷಣದಂತಹ ಅನುಕೂಲ ಪಡೆಯಬಹುದಾಗಿದೆ. ಸೇವೆಯು ಗ್ರಾಮೀಣ ಭಾಗಗಳಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಶಾಸಕರಾದ ಎ.ಆರ್. ಕೃಷ್ಣಮೂರ್ತಿಯವರು ತಿಳಿಸಿದರು.

  ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್ 4ಜಿ ಸ್ಯಾಚುರೇಷನ್ ಸೇವೆಯಿಂದ ಆರೋಗ್ಯ, ಶಿಕ್ಷಣ, ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಿಗೆ ಅನುಕೂಲವಾಗಲಿದೆ. ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೂ ಇಂಟರ್‍ನೆಟ್ ಸೇವೆ ಅಗತ್ಯವಾಗಿರುವುದರಿಂದ ಸಮೀಕ್ಷಾ ಕಾರ್ಯಕ್ಕೂ ನೆರವಾಗಲಿದೆ ಎಂದರು.

  ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣಕ್ಕಾಗಿ ಬಂದ ಪ್ರಸ್ತಾವನೆಗಳಿಗೆ ಜಿಲ್ಲಾಡಳಿತ ಆದ್ಯ ಗಮನ ನೀಡಿದೆ. ಟವರ್ ನಿರ್ಮಾಣಕ್ಕೆ ಅಗತ್ಯವಿರುವ ಜಾಗದ ಸಮಸ್ಯೆಯನ್ನು ಪರಿಹರಿಸುತ್ತದ್ದೇವೆ. ಅರೆಪಾಳ್ಯದಲ್ಲಿಯೂ 4ಜಿ ಸ್ಯಾಚುರೇಷನ್ ಟವರ್ ಉದ್ಘಾಟಿಸಲಾಗಿದೆ. ಇದಲ್ಲದೇ ಜಿಲ್ಲೆಯ ಇನ್ನೂ 17 ಕಡೆ ಹೊಸ ಸ್ಯಾಚುರೇಷನ್ 4ಜಿ ಸೇವೆ ಲಭ್ಯವಾಗುತ್ತಿದೆ. ಈ ಎಲ್ಲಾ ಸೇವೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಲಹೆ ಮಾಡಿದರು. 

 ಬಿ.ಎಸ್.ಎನ್.ಎಲ್ ಜನರಲ್ ಮ್ಯಾನೇಜರ್ ರಾಜೇಂದ್ರಕುಮಾರ್ ಸಿಂಗ್, ನಿರ್ದೇಶಕರಾದ ಬ್ರಹ್ಮಯ್ಯ, ಡಿ.ವೈ.ಎಸ್.ಪಿ. ಸ್ನೇಹರಾಜು, ಡೆಪ್ಯೂಟಿ ಜನರಲ್ ಮ್ಯಾನೇಜರ್ ರವಿಶಂಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಮ್ಮ, ನಾಗರಾಜು, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ರಾಜೇಂದ್ರ, ಕೊಳ್ಳೇಗಾಲ ನಗರಸಭೆ ಅಧ್ಯಕ್ಷರಾದ ರೇಖಾ ರಮೇಶ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಸೋಮಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮರಿಸ್ವಾಮಿ, ಮುಖಂಡರಾದ ರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *