ಪರಿಶಿಷ್ಟ ಜಾತಿ, ಪಂಗಡ ಮಹಿಳೆಯರ ಆರ್ಥಿಕ ಸಬಲೀಕರಣ ಸೌಲಭ್ಯಗಳಿಗೆ ಆದ್ಯತೆ ನೀಡಿ : ಜಿಲ್ಲಾಧಿಕಾರಿ ಶಿಲ್ಪಾನಾಗ್

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಸೌಲಭ್ಯಗಳಿಗೆ ಆದ್ಯತೆ ನೀಡಿ ಕಾರ್ಯಕ್ರಮ ಅನುಷ್ಠಾನ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಕಾರ್ಯಕ್ರಮಗಳನ್ನು ರೂಪಿಸುವಾಗ ಪರಿಶಿಷ್ಟ ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಸ್ವಾವಲಂಬಿಗಳನ್ನಾಗಿಸುವ ಸೌಲಭ್ಯಗಳಿಗೆ ವಿಶೇಷ ಒತ್ತು ನೀಡಬೇಕು. ವಾಹನ ಚಾಲನಾ ತರಬೇತಿ, ಫಾಸ್ಟ್ ಫುಡ್ ಮಳಿಗೆ ವಾಹನ, ಇನ್ನಿತರ ಸೌಲಭ್ಯಗಳು ಪರಿಶಿಷ್ಟ ಮಹಿಳೆಯರಿಗೆ ತಲುಪಿಸಿ ಆರ್ಥಿಕವಾಗಿ ಸದೃಢರಾಗಲು ಯೋಜನೆಗಳನ್ನು ಸಿದ್ದಗೊಳಿಸಬೇಕು ಎಂದರು.
ಪರಿಶಿಷ್ಟ ಜಾತಿ, ಪಂಗಡ ಉಪಯೋಜನೆಯಡಿ ಕೈಗೊಳ್ಳುವ ಯಾವುದೇ ಕಾಮಗಾರಿ ಗುಣಮಟ್ಟದ್ದಾಗಿರಬೇಕು. ಸಮುದಾಯದ ಒಳಿತಿಗಾಗಿ ಕೆಲಸಗಳು ಸಮರ್ಪಕವಾಗಿರಬೇಕು. ರಸ್ತೆ, ಚರಂಡಿಯಂತಹ ಕಾಮಗಾರಿಗಳು ಯಾವುದೇ ಲೋಪವಿಲ್ಲದೇ ನಡೆಯಬೇಕು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಬ್ಯಾಂಕುಗಳು ಸಕಾಲಕ್ಕೆ ಫಲಾನುಭವಿಗಳಿಗೆ ಸಾಲ ನೀಡಬೇಕು. ಯಾವುದೇ ಇಲಾಖೆಯಲ್ಲಿ ಬ್ಯಾಂಕ್ ಸಾಲಕ್ಕೆ ವಿಳಂಬವಾದರೆ ಕೂಡಲೇ ಗಮನಕ್ಕೆ ತರಬೇಕು. ಸಹಾಯಧನ ಸೌಲಭ್ಯಗಳು ಅರ್ಹರಿಗೆ ಯಾವುದೇ ಕಾರಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಫಲಾನುಭವಿಗಳಿಗೆ ಅನುಕೂಲವಾಗಲು ಹೆಚ್ಚು ಅನುದಾನ ನಿಗದಿ ಮಾಡಿಕೊಳ್ಳಬೇಕು ಎಂದರು.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಕಾಲದಲ್ಲಿ ನಡೆಸಬೇಕು. ಸೌಲಭ್ಯಗಳು ತಲುಪುತ್ತಿರುವ ಬಗ್ಗೆ ಎಲ್ಲ ಹಂತದಲ್ಲಿಯೂ ಕೂಲಂಕಶÀವಾಗಿ ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬೇಕು. ಎಲ್ಲಿಯೂ ಲೋಪ, ಅನುದಾನ ವ್ಯಪಗತ ಆಗಬಾರದು. ಹಿರಿಯ ಅಧಿಕಾರಿಗಳು ಪ್ರತಿ ಪ್ರಕ್ರಿಯೆಯನ್ನು ಅತ್ಯಂತ ಗಮನಹರಿಸಿ ನೋಡಬೇಕು. ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಸೌಲಭ್ಯಗಳು ಸಿಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ನಿರ್ದೇಶನ ನೀಡಿದರು.
ವಿವಿಧ ಇಲಾಖೆಗಳ ಪ್ರಗತಿಯನ್ನು ಜಿಲ್ಲಾಧಿಕಾರಿಯವರು ವಿವರವಾಗಿ ಪರಿಶೀಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *