ಚಾಮರಾಜನಗರ: ದೇಶ ಹಾಗೂ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಭ್ರಷ್ಟಾಚಾರ ರಹಿತ ಹಾಗೂ ಅಭಿವೃದ್ದಿ ಪರವಾದ ಆಡಳಿತದಿಂದ ಜನರು ಮೆಚ್ಚುಗೆ ವ್ಯಕ್ತವಾಗಿದ್ದು, ಮೋದಿ ಪರ ಆಲೆ ಇದ್ದು, ರಾಜ್ಯದ 28 ಕ್ಷೇತ್ರಗಳಲ್ಲಿಯೂ ಎನ್‍ಡಿಯ ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಚಾ.ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋಗೂ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 10 ತಿಂಗಳು ಕಾಂಗ್ರೆಸ್ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಕೇವಲ 5 ಗ್ಯಾರಂಟಿಗಳನ್ನು ಇಟ್ಟುಕೊಂಡು ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದಾರೆ. ರೈತರು ಹಾಗೂ ಬಸವರ ಬಗ್ಗೆ ಇವರ ಯೋಜನೆಗಳು ಏನು? ಈ ಗ್ಯಾರಂಟಿಗಳು ಸಹ ಸಮರ್ಪಕವಾಗಿ ಮಹಿಳೆಯರಿಗೆ ತಲುಪಿಲ್ಲ. ಹೋದ ಕಡೆಗಳಲ್ಲಿ ಮಹಿಳೆಯರೇ ಈ ಸರ್ಕಾರ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ ಎಂದು ದೂರಿದರು.
ಅನುಭವಿ ಮುಖ್ಯಮಂತ್ರಿಗಳು, 14 ಬಾರಿ ಬಜೆಟ್ ಮಂಡಿಸಿರುವ ಖ್ಯಾತಿಯನ್ನು ಹೊಂದಿರುವ ಸಿದ್ದರಾಮಯ್ಯ ಅವರು ಗ್ಯಾರಂಟಿಯನ್ನು ಜಾರಿ ಮಾಡಿ ಒಂದು ಕಡೆ ನಮ್ಮ ತಾಯಿಂದಿರಿಗೆ 2 ಸಾವಿರ ನೀಡಿ, ಮತ್ತೊಂದು ಕಡೆಯಿಂದ ತೆರಿಗಳನ್ನು ಹೆಚ್ಚಳ ಮಾಡಿ, ಬರೆ ಹಾಕಿದ್ದಾರೆ. ಎಲ್ಲ ದರಗಳನ್ನು ಏರಿಕೆ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆಯಾಗಿದೆ. ಅಬಕಾರಿ ತೆರಿಗೆಯನ್ನು ಎರಡು ಪಟ್ಟು ಹೆಚ್ಚಳ ಮಾಡುವ ಮೂಲಕ ದುಡಿದ ಧನಿವರಿದ ನನ್ನ ಅಣ್ಣ ತಮ್ಮಿಂದಿರಿಗೆ ಮದ್ಯಕ್ಕೆ ಹೆಚ್ಚಳ ಮಾಡಿ ಅವರು ಜೇಬು ಖಾಲಿ ಮಾಡುತ್ತಿದ್ದಾರೆ. ಇದಾನಾ ಅಭಿವೃದ್ದಿ ಎಂದರು.
ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಂಡಿದ್ದಾರೆ. 2047 ರ ವೇಳೆಗೆ ಭಾರತ ಅಭಿವೃದ್ದಿ ಹೊಂದಿದ ದೇಶವನ್ನಾಗಿಸಲು ಸಂಕಲ್ಪ ಮಾಡಿದ್ದಾರೆ.ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತಿದ್ದು ಇದರಲ್ಲಿ ದೇಶದ ಅಭಿವೃದ್ದಿ ಮುಖ್ಯವಾಗಿದೆಯೇ ಹೊರತು ಸ್ವಾರ್ಥವಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿಗಳಿಗೆ ಅಧಿಕಾರ ಮದದಿಂದ ಮೋದಿ ಹಾಗೂ ಹಿರಿಯರಾದ ದೇವೇಗೌಡರ ಬಗ್ಗೆ ಮಾತನಾಡುತ್ತಿದ್ದಾರೆ.. ಅಧಿಕಾರಕ್ಕೆ ಬಂದು 11 ತಿಂಗಳಲ್ಲಿ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿದರು. ಆದರೆ, ರಾಜ್ಯ ರೈತರಿಗೆ ಕಿಸಾನ್ ಸನ್ಮಾನ್ ಯೋಜನೆಯಡಿ ಯಡಿಯೂರಪ್ಪ ಅವರು ರೈತರಿಗೆ ನೀಡುತ್ತಿದ್ದ 4 ಸಾವಿರ ರೂಗಳನ್ನು ತಡೆ ಹಿಡಿಯುವ ಮೂಲಕ ರೈತರ ವಿರೋಧಿ ಧೋರಣೆಯನ್ನು ಅನುಸರಿಸಿದರು. ಆದೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕಡಿತ ಮಾಡಿದ್ದರು. ರೈತರ ಪರವಾದ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಸಿದ್ದರಾಮಯ್ಯ ಎಲ್ಲಾ ವರ್ಗದ ರೈತರಿಗೆ ಅನುಕೂಲವಾಗಿ ಯೋಜನೆಯನ್ನ ಸ್ಥಗಿತಗೊಳಿಸಿ ರೈತರು ಹಾಗೂ ರೈತರ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಎಂದರು.
ಕೇಂದ್ರ ಸರ್ಕಾರದಿಂದ ನಮ್ಮ ತೆರಿಗೆ ತಕ್ಕ ಅನುದಾನ ಬಂದಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಒಮ್ಮೆ ಯುಪಿಎ ಅವಧಿಯ 10 ವರ್ಷಗಳ ಅಡಳಿತದಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿತ್ತು.ಈಗ ಮೋದಿ ಅವರು ಹತ್ತು ವóರ್ಷಗಳ ಆಡಳಿತದಲ್ಲಿ ಎಷ್ಟು ಹಣ ಬಂದಿದೆ ಎನ್ನುವುದನ್ನು ತುಲನೆ ಮಾಡಿದರೆ, ಮೂರು ಪಟ್ಟು ಹೆಚ್ಚು ಹಣವನ್ನು ರಾಜ್ಯದ ಅಭಿವೃದ್ದಿಗೆ ಮೋದಿ ಅವರು ನೀಡಿದ್ದಾರೆ. ಬಹಳಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಿದ್ದರೆ, ಕೇವಲ ಕೇಂದ್ರ ವಿರುದ್ದ ಬೊಟ್ಟು ಮಾಡುವ ಬದಲು ರಾಜ್ಯ ಜನರ ಅಭಿವೃದ್ದಿಯ ಕಡೆ ಕಾಂಗ್ರೆಸ್ ನವರು ಚಿಂತನೆ ಮಾಡುವುದು ಒಳಿತು ಎಂದು ವಿಜಯೇಂದ್ರ ಅಂಕಿಅಂಶಗಳ ಸಹಿತ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‍ಕುಮಾರ್, ಎನ್‍ಡಿಎ ಅಭ್ಯರ್ಥಿ ಎಸ್. ಬಾಲರಾಜು, ಜಿಲ್ಲಾ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಜೆಡಿಎಸ್ ಶಾಸಕ ಮಂಜುನಾಥ್, ಲೋಕಸಭಾ ಚುನಾವಣಾ ಪ್ರಭಾರಿ ಎನ್.ವಿ. ಫಣೀಶ್, ಕ್ಷೇತ್ರ ಸಂಚಾಲಕ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಮುಖಂಡರಾದ ರಮೇಶ್, ಎಂ. ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಪ್ರೀತಮ್ ನಾಗಪ್ಪ, ಎಂ. ರಾಮಚಂದ್ರ, ಇತರರು ಇದ್ದರು.