ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ರಾಮಸಮುದ್ರ ಸುರೇಶ್ ಒತ್ತಾಯ

ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಜನಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಈಗಾಗಲೇ ಬೇರೆ ಜಿಲ್ಲೆಯ ಅಭ್ಯರ್ಥಿಗಳು ವಿವಿಧ ಪಕ್ಷಗಳಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಬೇರೆ ಜಿಲ್ಲೆಯ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿ ಜಯಗಳಿಸಿದ ನಂತರ ಕ್ಷೇತ್ರದ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ತೋರಿಸುತ್ತಾರೆ ಎಂದು ಆರೋಪಿಸಿದರು.

ಚಾಮರಾಜನಗರವು ಜಿಲ್ಲೆಯಾಗಿ 25 ವರ್ಷಗಳು ಕಳೆದರೂ ಸಮರ್ಪಕವಾದ ಅಭಿವೃದ್ಧಿಯನ್ನು ಕಂಡಿಲ್ಲ. ಚಾಮರಾಜನಗರ ಜಿಲ್ಲೆಯ ಜೊತೆಗೆ ಕೊಪ್ಪಳ, ಬಾಗಲಕೋಟೆ, ಉಡುಪಿ, ಹಾವೇರಿ ಜಿಲ್ಲೆಗಳಿಗೆ ಹೋಲಿಸಿದರೆ, ನಮ್ಮ ಜಿಲ್ಲೆಯು ಅಭಿವೃದ್ಧಿ ವಂಚಿತವಾಗಿದೆ. ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸರ್ಕಾರದಿಂದ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡುವುದರಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಆದ್ದರಿಂದ ಕ್ಷೇತ್ರದ ಪ್ರಜ್ಞಾವಂತ ನಾಗರೀಕ ಮತದಾರರು ನಾವು ಕ್ಷೇತ್ರದ ಅಭಿವೃದ್ಧಿ ಹಿತಾದೃಷ್ಠಿಯಿಂದ ಅನ್ಯ ಜಿಲ್ಲೆಯವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಪಕ್ಷಗಳು ಮಣೆ ಹಾಕದೆ ಕ್ಷೇತ್ರದ ಬಗ್ಗೆ ಕಾಳಜಿ ಹೊಂದಿರುವ ಮತದಾರರ ಪಟ್ಟಿಯಲ್ಲಿ ಇರುವ ಸ್ಥಳೀಯರಿಗೆ ಟಿಕೆಟ್ ನೀಡೇಕೆಂದು ವೇದಿಕೆ ಪರವಾಗಿ ಒತ್ತಾಯಿಸಿದರು.

ಹೋರಾಟಗಾರ ನಿಜಧ್ವನಿ ಗೋವಿಂದರಾಜು ಮಾತನಾಡಿ, ಜಿಲ್ಲೆಯ ಬಗ್ಗೆ ಇಂಚಿಂಚು ಗೊತ್ತಿರುವ ಸ್ಥಳೀಯರಿಗೆ ಯಾವುದೇ ಪಕ್ಷವಾಗಲಿ ಟಿಕೆಟ್ ನೀಡಬೇಕು. ಬೇರೆ ಜಿಲ್ಲೆಯವರಿಗೆ ಅವಕಾಶ ಕಲ್ಪಿಸುವುದು ಬೇಡ. ಒಂದು ವೇಳೆ ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡಿದರೆ, ಚುನಾವಣಾ ಬಹಿಷ್ಕಾರ ಆಂದೋಲನ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಈಶ್ವರ್, ಪ್ರಧಾನ ಕಾರ್ಯದರ್ಶಿ ಕಾಡಹಳ್ಳಿ ನಾಗರಾಉ, ಖಜಾಂಚಿ ಉಮ್ಮತ್ತೂರು ಸೋಮಣ್ಣ ಇದ್ದರು.

Leave a Reply

Your email address will not be published. Required fields are marked *